ಬೆಳ್ತಂಗಡಿ: ಅಕ್ರಮ-ಸಕ್ರಮ ನಿವೇಶನದ ಕುರಿತು ತಾ| ಕಚೇರಿಯಲ್ಲಿ ಈಗಾಗಲೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಗೊಂಡಿದ್ದು, ದಲ್ಲಾಳಿಗಳ ಹಾವಳಿ ತಪ್ಪಿಸುವ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಕಂಪ್ಯೂಟರೀಕೃತ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಯು ತ್ತಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧದ ವಠಾರದಲ್ಲಿ ಅರ್ಹ ಫಲಾನುಭವಿಗಳಿಗೆ 94ಸಿ ಹಾಗೂ 94ಸಿಸಿ ಹಕ್ಕುಪತ್ರ ವಿತರಣೆ ಮತ್ತು ಪರಿಹಾರಧನ ವಿತರಣೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.
ಸಮಗ್ರ ಬೆಳ್ತಂಗಡಿಯ ಅಭಿವೃದ್ಧಿ ದೃಷ್ಟಿಯಿಂದ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಅಕ್ರಮ-ಸಕ್ರಮದ ಬಾಕಿ ಉಳಿದಿರುವ ಕಡತಗಳನ್ನೂ ಶೀಘ್ರ ವಿಲೇವಾರಿ ಮಾಡಲಾಗುತ್ತದೆ. ಜತೆಗೆ ಪ್ರತಿ ಗ್ರಾಮಗಳಲ್ಲೂ ಬಾಕಿ ಉಳಿದಿರುವ 94ಸಿ ಯೋಜನೆಯ ಅರ್ಜಿಗಳ ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಅಡಿಕೆ ಬೆಳೆಗಾರರ ಹಿತಿದೃಷ್ಟಿಯಿಂದ ಸರಕಾರದ ಕೈಗೊಂಡಿರುವ ಕ್ರಮಗಳ ಕುರಿತು ಈಗಾಗಲೇ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆ ಮಾಡುವ ಕಾರ್ಯವನ್ನು ಮಾಡಿದ್ದೇನೆ. ಸುಮಾರು ಶೇ. 65 ಶೇ. ರಷ್ಟು ಅಡಿಕೆ ಬೆಳೆ ನಾಶವಾಗಿರುವ ಕುರಿತು ಸರಕಾರವೇ ಒಪ್ಪಿಕೊಂಡಿದ್ದು, ಅದಕ್ಕೆ ಪರಿಹಾರ ವಿತರಿಸುವ ಕಾರ್ಯ ನಡೆಯಬೇಕಿದೆ. ಜತೆಗೆ ಮುಂದೆ ಬೆಳ್ತಂಗಡಿ ಕ್ಷೇತ್ರದ ವಸತಿರಹಿತರಿಗೆ ವಸತಿ ಕಲ್ಪಿಸುವ ಕಾರ್ಯವನ್ನೂ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೇಣೂರು ಹೋಬಳಿ 141, ಕೊಕ್ಕಡ ಹೋಬಳಿಯ 168, ಬೆಳ್ತಂಗಡಿ ಹೋಬಳಿಯ 139 ಮಂದಿಗೆ 94ಸಿ ಹಾಗೂ ನಗರ ಭಾಗದ 12 ಮಂದಿಗೆ 94ಸಿಸಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಜಿ.ಪಂ. ಸದಸ್ಯರಾದ ಮಮತಾ ಎಂ. ಶೆಟ್ಟಿ, ಶಾಹುಲ್ ಹಮೀದ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್, ನಿರ್ಗಮಿತ ತಹಶೀಲ್ದಾರ್ ಮದನ್ ಮೋಹನ್ ಸಿ., ಪ್ರಭಾರ ತಹಶೀಲ್ದಾರ್ ಮಾಣಿಕ್ಯ ಎ., ತಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಶೋಕಾಸ್ ನೋಟಿಸ್ ನೀಡಿ
94ಸಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಮಾಹಿತಿನೀಡದ ಗ್ರಾಮಕರಣಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸುವ ಕುರಿತು ಶೋಕಾಸ್ ನೋಟಿಸ್ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ತಾಲೂಕು ಕಚೇರಿಯಲ್ಲಿ ಸಿಬಂದಿ ಕೆಲಸದ ಕುರಿತು ಜನರಿಗೆ ತೊಂದರೆ ನೀಡಿದರೆ ನೇರವಾಗಿ ನನ್ನ ಬಳಿ ಬಂದು ತಿಳಿಸಿ, ಅಂತಹ ಸಿಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹರೀಶ್ ಎಂಬುವವರ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಖಾಯಂ ಹುದ್ದೆ ಕಡಿರುದ್ಯಾವರಕ್ಕೆ ಕಳುಹಿಸುವುದಕ್ಕೆ ಎಸಿ ಆದೇಶ ನೀಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜ ವಿವರಿಸಿದರು.