ಬೆಳ್ತಂಗಡಿ: ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ನೆಲೆನಿಂತ ಸಿರಿಯನ್ ಕೆಥೋಲಿಕ್ ಕ್ರೈಸ್ತರಿಗಾಗಿ ಸ್ಥಾಪಿಸಲ್ಪಟ್ಟ ಕರ್ನಾಟಕದ ಪ್ರಥಮ ಸೀರೋ ಮಲಬಾರ್ ಧರ್ಮಪ್ರಾಂತವಾದ ಬೆಳ್ತಂಗಡಿ ಧರ್ಮಪ್ರಾಂತ ಸ್ಥಾಪನೆ ಯಾದ ವರ್ಷ ಹಾಗೂ ಅದರ ಪ್ರಥಮ ಧರ್ಮಾಧ್ಯಕ್ಷರಾಗಿ ನೇಮಕಗೊಂಡ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ ಅವರ ಧರ್ಮಾಧ್ಯಕ್ಷ ದೀಕ್ಷೆಯ ರಜತ ಮಹೋತ್ಸವವನ್ನು ಫೆ. 11ರಂದು ಬೆಳಗ್ಗೆ 11ಕ್ಕೆ ಬಿಷಪ್ ಹೌಸ್ ವಠಾರದಲ್ಲಿ ಆಯೋಜಿಸಲಾಗಿದೆ ಎಂದು ಧರ್ಮಪ್ರಾಂತದ ಪಿಆರ್‌ಒ ಫಾ| ಟೋಮಿ ಕಲ್ಲಿಕಟ್ ತಿಳಿಸಿದರು.
ಜ್ಞಾನನಿಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಫೆ. 11ರ ಬೆಳಗ್ಗೆ 8.45ಕ್ಕೆ ಕೃತಜ್ಞತ ದಿವ್ಯ ಬಲಿಪೂಜೆ ನಡೆ ಯಲಿದೆ. ಕರ್ನಾಟಕ, ಕೇರಳದ ಮಹಾಧರ್ಮಾಧ್ಯಕ್ಷರು, ಧರ್ಮ ಗುರುಗಳು, ಧರ್ಮ ಭಗಿನಿಯರು ಪಾಲ್ಗೊಳ್ಳಲಿದ್ದಾರೆ.
11ಕ್ಕೆ ರಜತ ಸಂಭ್ರಮದ ಬಲಿಪೂಜೆಯ ಸಮಾ ರೋಪದ ಬಳಿಕ ನಡೆಯುವ ಸಭೆ ಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಪತಿ ಯು.ಟಿ. ಖಾದರ್, ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು. ಸಚಿವರಾದ ಟಿ.ಜೆ. ಜಾರ್ಜ್, ದಿನೇಶ್ ಗುಂಡುರಾವ್, ಕೃಷ್ಣ ಬೈರೇಗೌಡ, ಎಚ್.ಸಿ. ಮಹಾದೇವಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ ಮುಂತಾದವರು ಪಾಲ್ಗೊಳ್ಳಲಿದ್ದಾರೆ. 25 ಬಡ ಕುಟುಂಬಗಳಿಗೆ ನಿರ್ಮಿಸಿದ ಮನೆಯ ಕೀಲಿ ಕೈ ಹಸ್ತಾಂತರ ನಡೆಯಲಿದೆ ಎಂದರು.
1999ರಲ್ಲಿ ಸ್ಥಾಪನೆ
1999ರ ಎಪ್ರಿಲ್ 24ರಂದು ಸ್ಥಾಪನೆಗೊಂಡ ಬೆಳ್ತಂಗಡಿ ಧರ್ಮ ಪ್ರಾಂತದ ಪ್ರಥಮ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು 2024ರ ಆಗಸ್ಟ್ 4ರಂದು 25 ವರ್ಷ ಪೂರ್ಣಗೊಳಿಸಲಿದ್ದಾರೆ. 30 ಸಾವಿರ ಸದಸ್ಯರನ್ನು ಒಳಗೊಂಡಿದ್ದು 57 ಧರ್ಮ ಗುರುಗಳು ಧರ್ಮದೀಕ್ಷೆಯನ್ನು ಸ್ವೀಕರಿಸಿದ್ದು, 26 ಮಂದಿ ಧರ್ಮ ದೀಕ್ಷೆಗಾಗಿ ತರಬೇತಿ ಪಡೆಯುತ್ತಿದ್ದಾರೆ.
41 ಕಡೆ ಹೊಸ ಚರ್ಚ್ ಕಟ್ಟಡಗಳು, 32 ಕಡೆ ಧರ್ಮಗುರುಗಳ ನಿವಾಸ, ಮೂಲ ಸೌಕರ್ಯ ಅಭಿವೃದ್ಧಿ ಗೊಳಿಸಲಾಗಿದೆ. 2003ರಲ್ಲಿ ಜ್ಞಾನನಿಲಯದ ಸ್ಥಾಪನೆ, 2007ರಲ್ಲಿ ಹೊಸ ಪ್ರಧಾನ ದೇವಾಲಯ ನಿರ್ಮಾಣ, ಪುತ್ತೂರಿನಲ್ಲಿ ಗುರುಮಂದಿರದ ಸ್ಥಾಪನೆ, 12 ಕಡೆ ಸನ್ಯಾಸ ಆಶ್ರಮಗಳು ಮತ್ತು ಧರ್ಮಭಗಿನಿಯರಿಗಾಗಿ 16 ಕಡೆ ಹೊಸ ಕಾನ್ವೆಂಟ್‌ಗಳು ಸ್ಥಾಪನೆಗೊಂಡಿವೆ. 16 ಹೊಸ ಶಾಲೆ ಗಳು ಪ್ರಾರಂಭ ವಾಗಿರುವುದು ಧರ್ಮ ಪ್ರಾಂತದ ಮೈಲುಗಲ್ಲಾಗಿದೆ.
ಧರ್ಮಪ್ರಾಂತದ ದ.ಕ. ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಕ್ರೈಸ್ತ, ಹಿಂದೂ, ಮುಸಲ್ಮಾನ ಸೇರಿ 547 ಕುಟುಂಬಗಳಿಗಾಗಿ 1,26,86,980 ರೂ. ಶೈಕ್ಷಣಿಕ ನೆರವು ನೀಡಿದೆ ಎಂದರು. ವಿಕಾರ್ ಜನರಲ್ ಜೋಶ್ ವಲಿಯಪರೆಂಬಿಲ್, ನಿರ್ದೇಶಕ ಮ್ಯಾಥ್ಯೂ ತಾಳೆಕಾಟಿಲ್ ಉಪಸ್ಥಿತರಿದ್ದರು.