ಬೆಳ್ತಂಗಡಿ: ತಾ|ನ ಎಲ್ಲ ಸರಕಾರಿ ಶಾಲೆಗಳಲ್ಲಿ ಈ ಬಾರಿ ಎಸೆಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮ ವಹಿಸಬೇಕಿದ್ದು, ಅದಕ್ಕೆ ಎಲ್ಲ ಸಹಕಾರ ನೀಡುತ್ತೇನೆ. ಪರೀಕ್ಷೆ ಪೂರ್ವ ಸಿದ್ಧತೆ ಸಂದರ್ಭ ಶಿಕ್ಷಕರಿಗೆ ಯಾವುದೇ ತರಬೇತಿ ಆಯೋಜಿಸದಂತೆ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ತಾ|ನ ಎಲ್ಲ ಸರಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಸರಕಾರಿ ಶಾಲೆಗಳ ಕಟ್ಟಡ ಸಹಿತ ಶೌಚಾಲಯ ನಿರ್ಮಾಣಕ್ಕೆ ಕಾರ್ಪೊರೇಟ್ ಸಂಸ್ಥೆಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅನುದಾನದ ಭರವಸೆಯೂ ಸಿಕ್ಕಿದೆ. ಫಲಿತಾಂಶ ಉತ್ತಮವಾಗಿದ್ದಾಗ ವಿದ್ಯಾರ್ಥಿ ಗಳ ಸಂಖ್ಯೆಯೂ ವೃದ್ಧಿಸುತ್ತದೆ. ಈಗಾಗಲೇ ದಡ್ಡಲಕಾಡು ರೀತಿಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದ್ದು, ಶಿಕ್ಷಕರ ಸಹಕಾರ, ಪರಿಶ್ರಮಗಳಿದ್ದಾಗ ಮಾತ್ರ ಯೋಜನೆ ಸಾಕಾರಗೊಳ್ಳಲು ಸಾಧ್ಯ ಎಂದರು.
ವಾಹನದ ವ್ಯವಸ್ಥೆ
ಎಸೆಸೆಲ್ಸಿ ಪರೀಕ್ಷೆಗಾಗಿ ಬೆಳಗ್ಗೆ, ಸಂಜೆ ಹೆಚ್ಚುವರಿ ತರಗತಿ ನಡೆಸುವ ಸಂದರ್ಭ ಮಕ್ಕಳಿಗೆ ಮನೆಗೆ ತೆರಳುವುದಕ್ಕೆ ವಾಹನ ಸೌಕರ್ಯ ಇರುವುದಿಲ್ಲ ಎಂದು ಮುಖ್ಯ ಶಿಕ್ಷಕರು ಶಾಸಕರ ಗಮನಕ್ಕೆ ತಂದಾಗ, ಯಾವ ಶಾಲೆಗಳಲ್ಲಿ ಸಮಸ್ಯೆ ಎದುರಾ ಗುತ್ತದೆ ಎಂದು ವಿವರ ನೀಡಿ. ವಿದ್ಯಾರ್ಥಿ ಗಳ ಸಂಖ್ಯೆ ಆಧಾರದಲ್ಲಿ ವಾಹನ ವ್ಯವಸ್ಥೆ ಮಾಡೋಣ ಎಂದರು.
ಎಸ್‌ಡಿಎಂ ಕಾಲೇಜು ಉಪನ್ಯಾಸಕ ಸ್ಮಿತೇಶ್ ಬಾರ್ಯ ಅವರು ಎಸೆಸೆಲ್ಸಿ ವಿದ್ಯಾರ್ಥಿಗಳ ಬೆಳವಣಿಗೆಗಾಗಿ ಹೊರತಂದ ದೀವಿಗೆ ಪುಸ್ತಕವನ್ನು ಶಾಸಕರು ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಿದ್ದು, ಈ ಸಂದರ್ಭ ಅದನ್ನು ಸಾಂಕೇತಿಕವಾಗಿ ವಿತರಿಸ ಲಾಯಿತು. ಎಸೆಸೆಲ್ಸಿ ನೋಡಲ್ ಅಧಿಕಾರಿ ರಮೇಶ್, ತಾ| ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಜಗುರು ಹೆಬ್ಟಾರ್, ಸಹಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ, ಮುಖ್ಯ ಶಿಕ್ಷಕಿ ಈಶ್ವರಿ ಉಪಸ್ಥಿತರಿದ್ದರು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಸ್ವಾಗತಿಸಿ, ಶಿಕ್ಷಣ ಸಂಯೋಜಕ ಸುಭಾಶ್ ಜಾಧವ್ ವಂದಿಸಿದರು. ಪುಂಜಾಲಕಟ್ಟೆ ಪ್ರೌಢಶಾಲಾ ಶಿಕ್ಷಕ ಧರಣೇಂದ್ರ ಕೆ. ಜೈನ್ ನಿರೂಪಿಸಿದರು.