Advertisement

ಬೆಳ್ತಂಗಡಿ: ಕಿಕ್ಕಿರಿದ ಸೋಮವಾರ ಸಂತೆ!

06:56 AM May 28, 2019 | Team Udayavani |

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸೋಮವಾರ ಬಂತೆಂದರೆ ಸಾಕು, ಇಲ್ಲಿನ ಸಂತೆಕಟ್ಟೆ ಪರಿಸರ ಪೂರ್ತಿ ವ್ಯಾಪಾರಿಗಳು ಹಾಗೂ ಗ್ರಾಹಕರಿಂದ ತುಂಬಿರುತ್ತದೆ. ಇದು ಬೆಳ್ತಂಗಡಿಯ ವಾರದ ಸಂತೆಯ ಚಿತ್ರಣ. ಪ್ರಸ್ತುತ ದಿನಗಳಲ್ಲಿ ಮಾಲ್‌ಗ‌ಳ ಪ್ರಭಾವದಿಂದ ವಾರದ ಸಂತೆಯ ಕಲ್ಪನೆ ನಶಿಸಿ ಹೋಗುತ್ತಿದ್ದರೂ, ಬೆಳ್ತಂಗಡಿಯ ಸಂತೆ ಈಗಲೂ ಜನರಿಂದ ತುಂಬಿರುತ್ತದೆ. ಆಧುನಿಕ ವ್ಯಾಪಾರದ ವ್ಯವಸ್ಥೆಯಿಂದ ಸಂತೆಯಲ್ಲಿ ಬದಲಾವಣೆ ಕಂಡು ಬಂದಿದ್ದರೂ, ವ್ಯಾಪಾರಿಗಳಿಗೇನೂ ದೊಡ್ಡ ಹೊಡೆತ ಬಿದ್ದಿಲ್ಲ. ಆದರೆ ಸಂತೆ ಮಾರುಕಟ್ಟೆಯ ಅವ್ಯವಸ್ಥೆ ಮಾತ್ರ ಜನರು ಮತ್ತು ವ್ಯಾಪಾರಿಗಳು ತೊಂದರೆಗೆ ಕಾರಣ ವಾಗಿದೆ. ಎಷ್ಟೇ ಸಮಸ್ಯೆಗಳಿದ್ದರೂ, ಸೋಮವಾರ ಬಂತೆಂದರೆ ಜನರಿಂದ ತುಂಬಿಕೊಳ್ಳುತ್ತದೆ.

Advertisement

ಮುಖ್ಯರಸ್ತೆಯ ಬದಿಗಳಲ್ಲೂ ವ್ಯಾಪಾರ
ವಾರದ ಸಂತೆ ಎಂದರೆ ಅಲ್ಲಿ ಯಾವುದು ಕೂಡ ಇಲ್ಲ ಎಂಬುದಿಲ್ಲ. ಸಂತೆ ಮಾರುಕಟ್ಟೆಯ ಪ್ರಾಂಗಣ ಭರ್ತಿಯಾಗಿ ಬೆಳ್ತಂಗಡಿ ಮುಖ್ಯರಸ್ತೆಯ ಬದಿಗಳಲ್ಲೂ ವ್ಯಾಪಾರಿಗಳು ತುಂಬಿರುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಸಂತೆಯಲ್ಲಿ ಗ್ರಾಹಕರು ತುಂಬಿ, ವಾರಕ್ಕೆ ಬೇಕಾದ ಪೂರ್ತಿ ಸಾಮಗ್ರಿಗಳನ್ನು ಒಂದೇ ಬಾರಿಗೆ ಕೊಂಡೊಯ್ಯುತ್ತಾರೆ.

ದಿನಸಿ ಸಾಮಗ್ರಿಗಳು, ತರಕಾರಿ, ಮೀನು- ಮಾಂಸ, ಬಟ್ಟೆಗಳು, ಚಪ್ಪಲಿ, ಪ್ಲಾಸ್ಟಿಕ್‌ ಸಾಮಗ್ರಿಗಳು, ಅಲ್ಯುಮಿನಿಯಂ ಪಾತ್ರೆಗಳು, ಹಣ್ಣು ಹಂಪಲು, ಎಲೆಕ್ಟ್ರಾನಿಕ್ಸ್‌ ಉತ್ಪನ್ನ ಗಳು ಹೀಗೆ ಎಲ್ಲಾ ಸೊತ್ತುಗಳು ಸಂತೆಯಲ್ಲಿ ಲಭ್ಯವಾಗುತ್ತವೆ. ಹೀಗಾಗಿ ತಾಲೂಕಿನ ಗ್ರಾಮೀಣ ಭಾಗದಿಂದ ಸಾವಿರಾರು ಮಂದಿ ಆಗಮಿಸಿ ತಮಗೆ ಬೇಕಾದ ಸೊತ್ತುಗಳನ್ನು ಖರೀದಿಸುತ್ತಾರೆ.

ಎರಡೂ ಗೇಟುಗಳಿಗೂ ಬೀಗ!
ದಶಕದ ಹಿಂದೆ ಬೆಳ್ತಂಗಡಿ ಸಂತೆಯ ವ್ಯವಸ್ಥೆ ಹೇಗಿತ್ತೆಂದರೆ ಸಂತೆ ಮಾರುಕಟ್ಟೆಗೆ ಆಗಮಿಸುವುಕ್ಕೆ ಎರಡು ಗೇಟ್‌ಗಳಿದ್ದವು. ಅದನ್ನು ರವಿವಾರ ಮಧ್ಯಾಹ್ನ ತೆರೆದರೆ ಮಂಗಳವಾರ ಬೆಳಗ್ಗೆ ಮುಚ್ಚಲಾಗುತ್ತಿತ್ತು. ಅಂದರೆ ಸೋಮವಾರ ಮಾತ್ರ ಅಲ್ಲಿ ವ್ಯಾಪಾರಕ್ಕೆ ಅವಕಾಶವಿತ್ತು. ಆಗ ಸಂತೆಯೂ ವ್ಯವಸ್ಥೆವಾಗಿ ನಡೆಯುತ್ತಿತ್ತು. ಜತೆಗೆ ವ್ಯಾಪಾರವೂ ಉತ್ತಮವಾಗಿತ್ತು ಎಂದು ವರ್ತಕರೊಬ್ಬರು ಅಭಿಪ್ರಾಯಿಸುತ್ತಾರೆ.

ಅಕ್ರಮ ನಿರ್ಮಾಣ
ವಾರದ ಸಂತೆಯ ಮಾರುಕಟ್ಟೆಯನ್ನು ಎಲ್ಲಾ ದಿನದ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅಕ್ರಮ ನಿರ್ಮಾಣಗಳನ್ನೂ ಮಾಡಲಾಗಿದೆ. ಅಂದರೆ ವ್ಯಾಪಾರಿಗಳಿಗೆ ನೀಡಲಾದ ಮಾರುಕಟ್ಟೆಯ ಮುಂಭಾಗದಲ್ಲಿ ಶೀಟುಗಳ ಮೂಲಕ ಅಕ್ರಮ ನಿರ್ಮಾಣಗಳು ಕಂಡುಬರುತ್ತಿವೆ. ಜತೆಗೆ ವ್ಯಾಪಾರಿಗಳಲ್ಲಿ ಶಿಸ್ತು ಕಡಿಮೆಯಾಗಿದ್ದು, ದಾರಿಯಲ್ಲೇ ತಮ್ಮ ಸರಕನ್ನಿಟ್ಟು ವ್ಯಾಪಾರ ಮಾಡುತ್ತಾರೆ ಎಂಬ ದೂರುಗಳು ಸಂತೆಯ ಗ್ರಾಹಕರಿಂದ ಕೇಳಿಬರುತ್ತಿದೆ.

Advertisement

ಸಂತೆಯ ಹಿಂದೆ ಸಮಸ್ಯೆ
ಪ್ರಸ್ತುತ ದಿನಗಳಲ್ಲಿ ಸಂತೆ ಹಿಂದೆ ಹತ್ತಾರು ಸಮಸ್ಯೆಗಳ ಕುರಿತು ದೂರುಗಳು ಕೇಳಿಬರುತ್ತಿವೆ. ಪ್ರಮುಖವಾಗಿ ಮೀನು, ಮಾಂಸದ ಕೊಳಚೆ ನೀರು ಹೋಗುವುದಕ್ಕೆ ಸಂತೆ ಮಾರುಕಟ್ಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲ. ಹೀಗಾಗಿ ಕೊಳಚೆ ನೀರು ನೇರವಾಗಿ ಸಂತೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ದುರ್ನಾತ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

 ಕ್ರಮಬದ್ಧವಾಗಲಿ
ಹಿಂದೆ ಬೆಳ್ತಂಗಡಿ ಸಂತೆ ವಾರದಲ್ಲಿ ಒಂದು ದಿನ ಕ್ರಮಬದ್ಧವಾಗಿ ನಡೆಯುತ್ತಿತ್ತು. ಈಗ ಆ ರೀತಿ ಇಲ್ಲ. ಬಹುತೇಕ ಎಲ್ಲ ದಿನ ವ್ಯಾಪಾರಿಗಳು ಇರುತ್ತಾರೆ. ಹೀಗಾಗಿ ಸಂತೆಯ ವೈಭವವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ವಾರದಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಬೇಕು. ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದರೂ ಚಿಂತೆಯಿಲ್ಲ. ಉತ್ತಮ ರೀತಿಯಲ್ಲಿ ನಡೆಯಬೇಕು.
-ಉದಯಕುಮಾರ್‌ ಸವಣಾಲು ಸಂತೆಯ ವ್ಯಾಪಾರಿ.

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next