Advertisement

ಬೆಳ್ತಂಗಡಿ ನಗರ: ದಿನಕ್ಕೆ ಒಂದೇ ತಾಸು ನೀರು ಸರಬರಾಜು

09:13 PM May 15, 2019 | Team Udayavani |

ಬೆಳ್ತಂಗಡಿ: ನೀರಿನ ಅಭಾವ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಪರಿಣಾಮ ಬೆಳ್ತಂಗಡಿ ನಗರ ವ್ಯಾಪ್ತಿಗೆ ದಿನಕ್ಕೆ ಒಂದು ತಾಸಿನಂತೆ ಕುಡಿಯುವ ನೀರು ಸರಬರಾಜು ಮಾಡಲು ನಗರ ಪಂಚಾಯತ್‌ ಮುಂದಾಗಿದೆ.

Advertisement

ಅಂತರ್ಜಲ ಮಟ್ಟವೂ ಕುಸಿತ
ಪೂರ್ವ ಮುಂಗಾರು ಕೈಕೊಟ್ಟ ಪರಿಣಾಮ ಈ ಬಾರಿ ನದಿಗಳಲ್ಲಿ ನೀರು ಸಂಪೂರ್ಣ ಬತ್ತಿಹೋಗಿದೆ. ಪಟ್ಟಣಕ್ಕೆ ನೀರಿನ ಆಶ್ರಯದ ಸೋಮಾವತಿ ನದಿ ನೀರು ಹಿಂದೆಂದೂ ಕೇಳರಿಯದಂತೆ ಬತ್ತಿಹೋಗಿ ಅದಾ ಗಲೇ ಒಂದು ತಿಂಗಳು ಕಳೆದಿದೆ. ಈವರೆಗೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿದ್ದ 11 ಹಾಗೂ 3 ಖಾಸಗಿ ಕೊಳವೆಬಾವಿಗಳಿಂದ ದಿನಕ್ಕೆ ಎರಡು ತಾಸು ನೀರು ಬಿಡಲಾಗುತ್ತಿತ್ತು. ಈಗಿರುವ ನೀರಿನ ಟ್ಯಾಂಕ್‌ಗಳಿಗೆ ಶೇಖರಿಸಲೂ ಆಗದಿರುವ ಪರಿಸ್ಥಿತಿ ಇದೆ. ಇದರಿಂದ ನೇರವಾಗಿ ನೀರಿನ ಸಂಪರ್ಕ ಹೊಂದಿರುವ ಪೈಪ್‌ಲೈನ್‌ಗಳಿಗೆ ಸರಬರಾಜು ಮಾಡಲಾಗುತ್ತಿದೆ. ಪರಿಸ್ಥಿತಿಯನ್ನರಿತು ಒಂದು ತಾಸು ನೀರು ಸರಬರಾಜು ಮಾಡಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿತ ಬಳಕೆ
ಬೆಳಗ್ಗೆ 6.30ರಿಂದ 7.30, ತಪ್ಪಿದರೆ 8 ಗಂಟೆಯವರೆಗೆ ನೀರು ಸರಬರಾಜಾಗುತ್ತಿದೆ. ಮನೆಮಂದಿ ಹಾಗೂ ಪ್ರತಿಯೊಬ್ಬ ನಾಗರಿಕರೂ ನೀರಿನ ಮಿತಬಳಕೆ ಮಾಡದಿದ್ದಲ್ಲಿ ಪರಿಸ್ಥಿತಿ ಸುಧಾರಣೆ ಕಷ್ಟ ಸಾಧ್ಯವಾಗಲಿದೆ. ಈಗಾಗಲೇ ಪಟ್ಟಣ ಪಂಚಾಯತ್‌ನಿಂದ ಹೊಸ ಹಾಗೂ ಹಳೆ ಕೊಳವೆಬಾವಿಗಳನ್ನು ಮರು ಶುದ್ಧೀಕರಣ ಮಾಡಲಾಗುತ್ತಿದೆ. ಏನೇ ಆದರೂ ಅಂತರ್ಜಲ ಮಟ್ಟ ಸುಧಾರಿಸ ದಿದ್ದಲ್ಲಿ ಅಧಿಕಾರಿಗಳು ಏನು ಮಾಡುವ ಪರಿಸ್ಥಿತಿಯಿಲ್ಲ. ಇದನ್ನರಿತು ನಾಗರಿಕರೇ ನೀರಿನ ಮಿತಬಳಕೆಗೆ ಮುಂದಾಗ ಬೇಕಾದ ಅನಿವಾರ್ಯವಿದೆ.

ದಿನಕ್ಕೆ 5ಲಕ್ಷ ಲೀಟರ್‌ ಪೂರೈಕೆಯೂ ಕಷ್ಟ
ಪ್ರತಿದಿನ ಒಬ್ಬ ವ್ಯಕ್ತಿಗೆ 130 (ಎಲ್‌ಪಿಸಿಡಿ) ಲೀಟರ್‌ ಅವಶ್ಯದಂತೆ 7,746 ಮಂದಿಗೆ 5ರಿಂದ 7 ಲಕ್ಷ ಲೀ. ನೀರು ಸರಬರಾಜು ಅವಶ್ಯವಿದೆ. ಆದರೆ ಪ್ರಸ್ತುತ 5 ಲಕ್ಷ ಲೀಟರ್‌ ನೀರು ಸರಬರಾಜು ಕಷ್ಟಕರವಾಗಿದೆ. ಸದ್ಯ 11 ಕೊಳವೆಬಾವಿ ಹೊರತುಪಡಿಸಿ ಖಾಸಗಿ ಯಾಗಿ ಸಂತೆಕಟ್ಟೆ, ಸಂತೆಕಟ್ಟೆ ಚಾಮುಂ ಡೇಶ್ವರಿ, ಉದಯನಗರದಿಂದ 3 ಖಾಸಗಿ ಕೊಳವೆಬಾವಿಯ ನೀರು ಬಳಸಲಾಗುತ್ತಿದೆ.

15 ಲಕ್ಷ ರೂ. ಬರಪರಿಹಾರ ಯೋಜನೆ
ಈಗಾಗಲೇ ಬರ ಪರಿಹಾರ ನಿಧಿಯಿಂದ 15 ಲಕ್ಷ ರೂ.ನಲ್ಲಿ 9 ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 7 ಕೆಲಸಗಳು ಪೂರ್ಣಗೊಂಡಿದ್ದು, ಎರಡು ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ 3 ಹಳೆ ಕೊಳವೆಬಾವಿ ಮರುಶುದ್ಧೀಕರಣ ಕೆಲಸ, 1 ಹೊಸ ಕೊಳವೆಬಾವಿ, ಪೈಪ್‌ಲೈನ್‌ ಕೆಲಸ, ಕೆಟ್ಟುನಿಂತ ಪಂಪ್‌ ದುರಸ್ತಿ ಕಾರ್ಯ ಮಾಡಲಾಗಿದೆ. 2 ಕಡೆ ಹೊಸ ಕೊಳವೆಬಾವಿಗೆ ಟಿ.ಸಿ. ಅಳವಡಿಸಲು ತಲಾ 2.50 ಲಕ್ಷ ರೂ.ಗಳಂತೆ ಇರಿಸಲಾಗಿದೆ ಎಂದು ಬೆಳ್ತಂಗಡಿ ಪ.ಪಂ. ಎಂಜಿನಿಯರ್‌ ಮಹಾವೀರ ಆರಿಗ ತಿಳಿಸಿದ್ದಾರೆ.

Advertisement

ನೀರು ಬಳಕೆ
ನಗರದ ಹಿಂದಿನ ಜನಸಂಖ್ಯೆ- 7,746 (2011ರ ಜನಗಣತಿ)
ಒಟ್ಟು ನೀರಿನ ಸಂಪರ್ಕ- 1,455
ಗೃಹಬಳಕೆ ಸಂಪರ್ಕ-1,302
ಗೃಹೇತರ ಬಳಕೆ-93
ವಾಣಿಜ್ಯ ಉದ್ದೇಶದ ಬಳಕೆ- 60

 ಅಂತರ್ಜಲ ಸಂರಕ್ಷಣೆಗೆ ಆದ್ಯತೆ
ಪ.ಪಂ.ನಿಂದ ನೀರು ಪಡೆಯುವ ಎಲ್ಲರೂ ವಾಹನ, ಕೃಷಿ ಬಳಕೆಗೆ ನೀರು ಬಳಸದಂತೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಬರ ಪರಿಹಾರ ನಿಧಿಯಿಂದ 15 ಲಕ್ಷ ರೂ. ಕಾಮಗಾರಿ ಶೇ. 90 ಪೂರ್ಣಗೊಂಡಿದೆ. ಮಿತಬಳಕೆ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ.
 - ಅರುಣ್‌ ಬಿ., ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್‌

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next