Advertisement

Belthangady: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ- ಸ್ಥಳದಲ್ಲೇ ಮೂವರ ಸಾವು

12:48 AM Jan 29, 2024 | Team Udayavani |

ಬೆಳ್ತಂಗಡಿ: ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಕುಕ್ಕೇಡಿ ಗ್ರಾ.ಪಂ.ನ ಗೋಳಿಯಂಗಡಿ ಸಮೀಪದ ಕಡ್ತ್ಯಾರು ಎಂಬಲ್ಲಿ ಸುಡುಮದ್ದು ತಯಾರಿ ಘಟಕದಲ್ಲಿ ರವಿವಾರ ಸಂಜೆ 5.15ರ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿ ದ್ದಾರೆ. ಮೃತರನ್ನು ಕೇರಳ ದವರಾದ ಸ್ವಾಮಿ (55), ವರ್ಗೀಸ್‌ (68), ಹಾಸದ ಅರಸೀಕೆರೆ ಮೂಲದ ಚೇತನ್‌ (25) ಎಂದು ಗುರುತಿಸಲಾಗಿದೆ.

Advertisement

ವೇಣೂರು ಕುಚ್ಚೋಡಿ ಸಮೀಪದ ನಿವಾಸಿ ಸಯ್ಯದ್‌ ಬಶೀರ್‌ ಯಾನೆ ಸ್ವಾಲಿಡ್‌ ಬಶೀರ್‌ ಅವರ ತೋಟದ ಶೆಡ್‌ನ‌ಲ್ಲಿ ಪಟಾಕಿ ತಯಾರಿ ಘಟಕವಿದ್ದು, 9 ಮಂದಿ ಕೂಲಿ ಕಾರ್ಮಿಕರು ರವಿವಾರ ಸ್ಫೋಟಕ ತಯಾರಿಯಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ಉಳಿದಂತೆ ಹಾಸನ ಮೂಲದ ದಿನೇಶ, ಕಿರಣ, ಅರಸೀಕೆರೆಯ ಕುಮಾರ, ಚಿಕ್ಕಮಾರನ ಹಳ್ಳಿಯ ಕಲ್ಲೇಶ, ಕೇರಳದವರಾದ ಪ್ರೇಮ್‌ ಮತ್ತು ಕೇಶವ ಅವರು ಬದುಕುಳಿದಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕೆಲವು ಕಾರ್ಮಿಕರು ಹಾಗೂ  ಮಾಲಕ ಪರಾರಿಯಾಗಿದ್ದಾರೆ.

ಘಟನೆಯಿಂದ ದೇಹ ಛಿದ್ರ
ಸ್ಫೋಟದ ತೀವ್ರತೆಗೆ ಮೃತ ದೇಹಗಳು ಛಿದ್ರವಾಗಿ ಅಡಿಕೆ ಮರದ ಹೊಂಡದಲ್ಲಿ, ಕೈ ಪಕ್ಕದ ರಬ್ಬರ್‌ ತೋಟದಲ್ಲಿ, ಮೆದುಳಿನ ಭಾಗ ಸೇರಿದಂತೆ ದೇಹದ ಅಂಗಾಂಗಗಳು 100 ಮೀಟರ್‌ ವ್ಯಾಪ್ತಿಯಲ್ಲಿ ಚೆಲ್ಲಾಡಿ ಹರಡಿಕೊಂಡಿವೆ. ಓರ್ವ ವ್ಯಕ್ತಿಯ ದೇಹ ಛಿದ್ರಗೊಂಡರೂ ಅರೆಜೀವಾವಸ್ಥೆಯಲ್ಲಿದ್ದುದನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದರು. ಆದರೆ ಅವರು ಬದುಕುಳಿದಿಲ್ಲ.

ಮನೆ ಗಾಜು, ಶೀಟ್‌ ಧ್ವಂಸ
ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯೊಳಗಿನ ಜೋಸೆಫ್‌ ಮ್ಯಾಥ್ಯೂ ಅವರ ಮನೆಯ ಕಿಟಕಿ ಗಾಜು, ಅಡುಗೆ ಕೋಣೆಗೆ, ಕಮಲಾ ವೆಂಕಪ್ಪ ಅವರ ಮನೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಕಲ್ಮರೋಡಿಯ ಜಿನಚಂದ್ರ ಪಡಿವಾಳ್‌ ಅವರ ಮನೆ ಗೋಡೆ, ಲಿಂಗಪ್ಪ ನಾಯ್ಕ… ಬರಮೇಲು, ಪ್ರಸಾದ್‌ ಸಹಿತ ಅನೇಕರ ಮನೆಗಳಿಗೆ ಹಾನಿಯಾಗಿದೆ.

ಬೆಂಕಿ ನಂದಿಸಿದ ಅಗ್ನಿಶಾಮ ದಳ
ಮೂಡುಬಿದಿರೆ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಧಾವಿಸಿ ಅಗ್ನಿ ಶಮನಗೊಳಿಸಿದರು. ಸ್ಫೋಟಕ ತಯಾರಿಸುತ್ತಿದ್ದ ಘಟಕ, ಸಮೀಪದ ಗೋಡೆ ಎಲ್ಲವೂ ನೆಲಸಮವಾಗಿವೆ. ಘಟನೆ ಸ್ಥಳದಲ್ಲಿ ಅನುಮಾನಾಸ್ಪದವಾದ ಬಾಂಬ್‌ ರೀತಿಯ ಸ್ಫೋಟಕಗಳು ದೊರೆತಿದ್ದು, ಈ ವಿಚಾರವಾಗಿ ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ.

Advertisement

4 ಕಿ.ಮೀ. ದೂರಕ್ಕೆ ಸದ್ದು, ಕಂಪನ
ಸ್ಫೋಟದ ಸದ್ದು ಸುಮಾರು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ. ಸಮೀಪದ ಅಡಿಕೆ ಮರ, ರಬ್ಬರ ಗಿಡಗಳು ಕರಟಿವೆ. ಸ್ಥಳದಲ್ಲಿ ಅನುಮಾನಾಸ್ಪದ ಚಲನವಲನ ಇರುವ ಬಗ್ಗೆ ಗ್ರಾಮಸ್ಥರು ಈ ಹಿಂದೆಯೇ ದೂರು ನೀಡಿದ್ದರೂ ಎಸ್‌.ಪಿ. ಅವರಿಂದಲೇ ಸುಡುಮದ್ದು ತಯಾರಿ ಘಟಕಕ್ಕೆಂದು 2024ರ ವರೆಗೆ ಪರವಾನಿಗೆ ಪಡೆದಿದ್ದರಿಂದ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಸ್ಫೋಟದ ತೀವ್ರತೆ ಹಾಗೂ ಸ್ಥಳದಲ್ಲಿ ಸಿಕ್ಕಿದ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ವರದಿ ಬಂದ ಬಳಿಕವೇ ಸ್ಫೋಟದ ಕಾರಣ ಹಾಗೂ ಹಿನ್ನೆಲೆಯ ಸಂಪೂರ್ಣ ಚಿತ್ರಣ ಸಿಗಲಿದೆ.

ಸ್ಥಳಕ್ಕೆ ಶಾಸಕ ಹರೀಶ್‌ ಪೂಂಜ, ಪಶ್ಚಿಮ ವಲಯ ಪೊಲೀಸ್‌ ಉಪ ಮಹಾನಿರೀಕ್ಷಕರಾದ ಅಮಿತ್‌ ಸಿಂಗ್‌, ಕುಕ್ಕೇಡಿ ಗ್ರಾ.ಪಂ. ಆಧ್ಯಕ್ಷೆ ಅನಿತಾ ಕೆ., ಡಿವೈಎಸ್‌ಪಿ ವಿಜಯಪ್ರಸಾದ್‌, ಪುತ್ತೂರು ಎಸಿ ಜುಬೀನ್‌ ಮೊಹಾಪಾತ್ರ, ತಹಶೀಲ್ದಾರ್‌ ಪೃಥ್ವಿ ಸಾನಿಕಮ್‌, ಬೆಳ್ತ‌ಂಗಡಿ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ಪುಂಜಾಲಕಟ್ಟೆ ಎಸ್‌ಐ ನಂದಕುಮಾರ್‌ ಎಂ.ಎಂ., ವೇಣೂರು ಎಸ್‌ಐ ಶ್ರೀಶೈಲ, ಬೆಳ್ತಂಗಡಿ ಠಾಣೆ ಎಸ್‌ಐ ಮುರಳೀಧರ ನಾಯ್ಕ, ಅಗ್ನಿಶಾಮಕ ಜಿಲ್ಲಾಧಿಕಾರಿ ರಂಗನಾಥ್‌ ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಸಂಸದ ನಳಿನ್‌ ಕುಮಾರ್‌ ಭೇಟಿ
ಸ್ಥಳಕ್ಕೆ ಭೇಟಿ ನೀಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಮಾಧ್ಯಮದೊಂದಿಗೆ ಮಾತನಾಡಿ, ಸ್ಫೋಟದ ಗಂಭೀರತೆ ಬಗ್ಗೆ ಪರಿಶೀಲಿಸಿದ್ದೇನೆ. ಜೀವ ಹಾನಿ ಸಂಭವಿಸಿರುವುದು ಕಂಡಾಗ ಸ್ಫೋಟಕಕ್ಕೆ ಬಳಸಿರುವ ರಾಸಾಯನಿಕ ಏನು? ಯಾವ ಯಾವ ಇಲಾಖೆಗಳು ಪರವಾನಿಗೆ ನೀಡಿವು ಎಂಬುದರ ಸಂಪೂರ್ಣ ತನಿಖೆಯ ಆವಶ್ಯಕತೆಯಿರುವುದು ಕಾಣಿಸುತ್ತದೆ. ಪ್ರಕರಣವನ್ನು ತತ್‌ಕ್ಷಣ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೆಕೆಂದು ನಾನು ಸರಕಾರವನ್ನು ಆಗ್ರಹಿಸುತ್ತಿದ್ದೇನೆ.

ಪರವಾನಿಗೆ ಇದೆ: ಎಸ್‌ಪಿ
ರವಿವಾರ ಸಂಜೆ 5.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 50 ಸೆಂಟ್ಸ್‌ ಜಾಗದಲ್ಲಿ ಪಟಾಕಿ ಉತ್ಪಾದನೆಗೆ 2011ರಲ್ಲಿ ಈ ಬಗ್ಗೆ ಪರವಾನಿಗೆ ಪಡೆದಿದ್ದರು. 2018ರಲ್ಲಿ ಮರು ಪರವಾನಿಗೆ ನೀಡಲಾಗಿದ್ದು, 2024 ಮಾರ್ಚ್‌ ತನಕ ಅನುಮತಿ ಇದೆ ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸಿ.ಬಿ. ತಿಳಿಸಿದ್ದಾರೆ.

ಈ ಹಿಂದೆಯೂ ಸ್ಫೋಟ
5 ವರ್ಷದ ಹಿಂದೆ ಕಂಬಳ ಬೆಟ್ಟು ಸಮೀಪ ಇದೇ ರೀತಿ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿದ್ದರು. ಇದಕ್ಕೂ ಹಿಂದೆ ವೇಣೂರು ಠಾಣೆ ವ್ಯಾಪ್ತಿಯಲ್ಲಿ ಸ್ಫೋಟ ಸಂಭವಿಸಿ ಒಂದು ಸಾವು ಸಂಭವಿಸಿತ್ತು.

ಯಾವ ಕಾರಣಕ್ಕೆ ಸ್ಫೋಟ
ಆಗಿದೆ ಎಂದು ತನಿಖೆ ಮಾಡಲಾಗುತ್ತದೆ. ಫೊರೆನ್ಸಿಕ್‌ ತಂಡ ಮತ್ತು ಬಾಂಬ್‌ ನಿಗ್ರಹ ದಳ ತನಿಖೆ ನಡೆಸಲಿವೆ. ಸ್ಥಳದಲ್ಲಿ ಎಲ್ಲ ಸಾಕ್ಷಿಗಳ ಸಂಗ್ರಹ ಮಾಡುತ್ತಿದ್ದೇವೆ. ಜಾಗದ ಮಾಲಕನನ್ನು ವಿಚಾರಣೆಗೆ ಒಳಪಡಿಸುತ್ತೇವೆ.
– ರಿಷ್ಯಂತ್‌ ಸಿ.ಬಿ., ದ.ಕ. ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next