Advertisement

ನಮ್ಮೂರ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್‌ ಲ್ಯಾಬ್‌ ಆರಂಭ

10:58 AM May 19, 2019 | Naveen |

ಬೆಳ್ತಂಗಡಿ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ 8ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲೇ ದಾಖಲೆ ನಿರ್ಮಿಸಿದ ಗುರುವಾಯನಕೆರೆಯ ಸರಕಾರಿ ‘ನಮ್ಮೂರ ಪ್ರೌಢಶಾಲೆ’ಯಲ್ಲಿ 2019-20ನೇ ಶೈಕ್ಷಣಿಕ ವರ್ಷದಿಂದ ಅಟಲ್ ಟಿಂಕರಿಂಗ್‌ ಲ್ಯಾಬ್‌ ಆರಂಭವಾಗಲಿದೆ.

Advertisement

ವಿದ್ಯಾರ್ಥಿಗಳ ವೈಜ್ಞಾನಿಕ ಸಂಶೋಧನ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಲ್ಯಾಬ್‌ ಕೆಲಸ ಮಾಡಲಿದ್ದು, ಈಗಾಗಲೇ ಹಲವು ಸಾಧನೆಗಳ ಮೂಲಕ ಮಿಂಚಿರುವ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆಗೆ ಇದು ನೆರವಾಗಲಿದೆ. ಲ್ಯಾಬ್‌ನ ಕೊಠಡಿಯ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಪರಿಕರಗಳು ಈ ತಿಂಗಳ ಅಂತ್ಯ ಅಥವಾ ಜೂನ್‌ ಆಗಮಿಸಲಿದೆ.

20 ಲಕ್ಷ ರೂ. ಅನುದಾನ
ಅಟಲ್ ಟಿಂಕರಿಂಗ್‌ ಲ್ಯಾಬ್‌ಗ ಕೇಂದ್ರ ಸರಕಾರವು ಒಟ್ಟು 20 ಲಕ್ಷ ರೂ. ಅನುದಾನ ನೀಡಲಿದ್ದು, 12 ಲಕ್ಷ ರೂ.ಗಳನ್ನು ಅನುಷ್ಠಾನದ ಸಂದರ್ಭದಲ್ಲೇ ಒದಗಿಸಲಾಗುತ್ತದೆ. ಉಳಿದ 8 ಲಕ್ಷ ರೂ.ಗಳನ್ನು ವರ್ಷಕ್ಕೆ ತಲಾ 2 ಲಕ್ಷ ರೂ.ಗಳಂತೆ 4 ವರ್ಷಗಳ ಕಾಲ ಲ್ಯಾಬ್‌ನ ನಿರ್ವಹಣೆಗೆ ನೀಡಲಾಗುತ್ತದೆ. ನಮ್ಮೂರ ಪ್ರೌಢಶಾಲೆಗೆ ಬೆಂಗಳೂರಿನ ಸಂಸ್ಥೆಯೊಂದು ಲ್ಯಾಬ್‌ ಪರಿಕರಗಳನ್ನು ಒದಗಿಸಲಿದೆ.

ಉನ್ನತ ಸಾಧನೆ
ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಐಪಿಎಸ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅನೂಪ್‌ ಶೆಟ್ಟಿಯವರು ಇದೇ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಸರ್ಜನ್‌ ಡಾ| ಸದಾನಂದ ಪೂಜಾರಿ ಅವರು ಕೂಡ ಇದೇ ಶಾಲೆಯ ಹಳೆ ವಿದ್ಯಾರ್ಥಿ. ಹೀಗೆ ಹಲವು ಮಂದಿ ಇಲ್ಲಿನ ಹಳೆ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿರುವುದು ಗಮನಾರ್ಹ ಅಂಶ. ಈ ರೀತಿ ಅಟಲ್ ಟಿಂಕರಿಂಗ್‌ ಲ್ಯಾಬ್‌ಗ ಶಾಲೆಗೆ ಲಭಿಸಿರುವುದು ವಿದ್ಯಾರ್ಥಿಗಳ ಸಾಧನೆಗೆ ಹೆಚ್ಚಿನ ಅವಕಾಶಗಳನ್ನೊದಗಿಸಲಿದೆ.

169 ಶಾಲೆಗಳಲ್ಲೇ ಹೆಚ್ಚಿನ ಅಂಕ
ಗುರುವಾಯನಕೆರೆ ಪ್ರೌಢಶಾಲೆಯ ವಿದ್ಯಾರ್ಥಿನಿ ತೇಜಸ್ವಿ ಕೆ. (612) ಅಂಕ ಪಡೆದಿದ್ದು, ಇದು ದ.ಕ. ಜಿಲ್ಲೆಯ 169 ಸರಕಾರಿ ಪ್ರೌಢಶಾಲೆಗಳಲ್ಲೇ ಅತಿ ಹೆಚ್ಚಿನ ಅಂಕವಾಗಿದೆ. ಜತೆಗೆ ರಾಜ್ಯದ ಸರಕಾರಿ ಶಾಲೆಗಳಲ್ಲಿಯೂ ಇದು ವಿಶೇಷ ಸಾಧನೆಯಾಗಿದೆ. ಗುರುವಾಯನಕೆರೆ ಪ್ರೌಢಶಾಲೆಯ ಇತಿಹಾಸದಲ್ಲೇ ಇದು ವಿಶೇಷ ಸಾಧನೆಯಾಗಿದೆ.

Advertisement

ಸಾಮಾನ್ಯವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಆಂಗ್ಲ ಭಾಷಾ ವಿಷಯದಲ್ಲಿ ಅಂಕಗಳಿಕೆ ಕಡಿಮೆ ಇರುತ್ತದೆ. ಆದರೆ ಗುರುವಾಯನಕೆರೆ ಶಾಲೆಯಲ್ಲಿ ಈ ಬಾರಿ ಒಬ್ಬ ವಿದ್ಯಾರ್ಥಿನಿ ಇಂಗ್ಲಿಷ್‌ನಲ್ಲಿ 99 ಅಂಕ, ಮೂರು ಮಂದಿ 98 ಅಂಕಗಳಿಸಿದ್ದಾರೆ. ಕನ್ನಡದಲ್ಲಿ 6 ಮಂದಿ ಪೂರ್ತಿ ಅಂಕ, 46 ಮಂದಿ 120ಕ್ಕೂ ಅಧಿಕ ಅಂಕ, ಒಬ್ಬ ವಿದ್ಯಾರ್ಥಿನಿ ಹಿಂದಿಯಲ್ಲಿ ಪೂರ್ತಿ ಅಂಕ ಪಡೆದಿದ್ದಾಳೆ.

ಬೆಸ್ಟ್‌ ಸ್ಕೂಲ್ ಅವಾರ್ಡ್‌
ನಿಟ್ಟೆ ವಿವಿಯವರು ನಡೆಸಿದ ಸರ್ವೇಯೊಂದರಲ್ಲಿ ನಮ್ಮೂರ ಪ್ರೌಢಶಾಲೆಯು ಜಿಲ್ಲೆಯ 504 ಪ್ರೌಢಶಾಲೆಗಳ ಪೈಕಿ ಬೆಸ್ಟ್‌ ಸ್ಕೂಲ್ ಆವಾರ್ಡ್‌ ಪಡೆದಿತ್ತು. ಇದಕ್ಕೆ 15 ಲಕ್ಷ ರೂ. ಅನುದಾನ ಬಂದಿದ್ದು, 6 ಲಕ್ಷ ರೂ.ಗಳಲ್ಲಿ ಆಟದ ಮೈದಾನ ವಿಸ್ತರಣೆ, 2 ಲಕ್ಷ ರೂ.ಗಳಲ್ಲಿ ಶೌಚಾಲಯ, ಇಂಟರ್‌ಲಾಕ್‌, ಸ್ಮಾರ್ಟ್‌ ಕ್ಲಾಸ್‌ಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಜತೆಗೆ ಸೆಲ್ಕೊ ಸೋಲಾರ್‌ನಿಂದ ಸೋಲಾರ್‌ ವ್ಯವಸ್ಥೆಯನ್ನೂ ಒದಗಿಸಲಾಗಿದೆ.

ಕೊರತೆಯೂ ಇದೆ
ಶಾಲೆಯು ಇಷ್ಟೆಲ್ಲ ಸಾಧನೆ ಮಾಡಿದರೂ ಶಾಲೆಯಲ್ಲಿ ಖಾಯಂ ಮುಖ್ಯ ಶಿಕ್ಷಕರ ಹುದ್ದೆ ಖಾಲಿಯಿದೆ. ಜತೆಗೆ ಒಂದು ಕಲಾ ಶಿಕ್ಷಕರ ಹುದ್ದೆ, ದೈಹಿಕ ಶಿಕ್ಷಣ ಶಿಕ್ಷಕರು, ಕ್ಲರ್ಕ್‌ ಹುದ್ದೆ ಖಾಲಿ ಇದೆ. ಹೀಗಾಗಿ ಈ ಕೊರತೆಗಳನ್ನೂ ನೀಗಿಸಿ ಶಾಲೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವತ್ತ ಸಂಬಂಧಪಟ್ಟವರು ಚಿತ್ತ ಹರಿಸಬೇಕಿದೆ.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next