Advertisement

ಬೆಳ್ತಂಗಡಿ: ಕಕ್ಕೇನ ಕುಟುಂಬಕ್ಕೆ ಗುಡಿಸಲೇ ಆಧಾರ

05:27 AM Jan 21, 2019 | |

ಬೆಳ್ತಂಗಡಿ: ಆರ್ಥಿಕವಾಗಿ ಹಿಂದು ಳಿದ ಕುಟುಂಬಗಳ ಸಶಕ್ತೀಕರಣಕ್ಕೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅದು ಅರ್ಹ ಫಲಾನುಭವಿಗಳನ್ನು ತಲುಪದೆ ಕೆಲವೊಂದು ಬಾರಿ ಹಳ್ಳ ಹಿಡಿಯುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂಬಂತೆ ಲಾೖಲ ಗ್ರಾ.ಪಂ. ವ್ಯಾಪ್ತಿಯ ಕಕ್ಕೇನದಲ್ಲಿ ಕುಟುಂಬವೊಂದು ಮುರುಕಲು ಗುಡಿಸಲಲ್ಲಿ ವಾಸಿಸುತ್ತಿದೆ.

Advertisement

ಕಳೆದ ಕೆಲವು ವರ್ಷಗಳ ಹಿಂದೆ ಇವರ ಮನೆಗೆ ಮರವೊಂದು ಬಿದ್ದು, ಇದ್ದ ಮನೆಯೊಂದು ಧರೆಗುರುಳಿದೆ. ಕೂಲಿ ಮಾಡಿಕೊಂಡು ಜೀವಿಸುವ ಈ ಕುಟುಂಬಕ್ಕೆ ಮನೆಯನ್ನು ಮರು ನಿರ್ಮಿಸುವುದು ಅಸಾಧ್ಯವಾಗಿದ್ದು, ಹೀಗಾಗಿ ಸೂರಿಲ್ಲದೆ ಗುಡಿಸಲೇ ಗತಿಯಾಗಿದೆ. ತಾಲೂಕು ಕೇಂದ್ರವಾದ ಬೆಳ್ತಂಗಡಿಯಿಂದ ಕೇವಲ 5 ಕಿ.ಮೀ. ಅಂತರದಲ್ಲಿ ವಾಸಿಸುವ ಈ ಕುಟುಂಬಕ್ಕೆ ಆಡಳಿತ ವ್ಯವಸ್ಥೆಯಿಂದ ಸೂರು ಕಲ್ಪಿಸಲು ಸಾಧ್ಯವಾಗದೇ ಇರುವುದು ವಿಪರ್ಯಾಸವೇ ಸರಿ.

ಪ.ಜಾ.ಗೆ ಸೇರಿದ ಮುಟ್ಟಿ ಎಂಬ ವೃದ್ಧೆಯ ಕುಟುಂಬದ ವ್ಯಥೆ ಇದು. ಅವರು ಹೇಳುವ ಪ್ರಕಾರ ಕಳೆದ ಸುಮಾರು 35 ವರ್ಷಗಳಿಂದ ಈ ಕುಟುಂಬ ಕಕ್ಕೇನ ಕಾಲನಿಯಲ್ಲಿ ವಾಸಿ ಸುತ್ತಿದ್ದು, ಹಿಂದೊಮ್ಮೆ 22 ಸಾವಿರ ರೂ. ವೆಚ್ಚದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣಗೊಂಡಿತ್ತು. ಅದು ಮರಬಿದ್ದು ಧರೆಗುರುಳಿದೆ.

ದುಡ್ಡೂ ಇಲ್ಲ-ಮಾಹಿತಿಯೂ ಇಲ್ಲ !
ಮುಟ್ಟಿ ಅವರ ಕುಟುಂಬದಲ್ಲಿ ಅವರ ಪುತ್ರ ಅಮಣ, ಸೊಸೆ ಲೀಲಾ, ಮೊಮ್ಮಕ್ಕಳಾದ ಲಕ್ಷ್ಮೀ ಹಾಗೂ ಲೋಕೇಶ್‌ ಇದ್ದಾರೆ. ಈ ಕುಟುಂಬದ ಬಿದ್ದಿರುವ ಮನೆಯ ಪಕ್ಕದಲ್ಲಿ ಮುರುಕಲು ಗುಡಿಸಲು ನಿರ್ಮಿಸಲಾಗಿದ್ದು, ಅದರಲ್ಲಿ ಈ 5 ಮಂದಿ ಹೇಗೆ ವಾಸಿಸುತ್ತಾರೆ ಎಂಬುದೇ ಅಚ್ಚರಿ ಹುಟ್ಟಿಸುತ್ತಿದೆ. ಮನೆ ನಿರ್ಮಿಸುವುದಕ್ಕೆ ಈ ಕುಟುಂಬದ ಬಳಿ ದುಡ್ಡಿಲ್ಲ ಎಂಬುದು ಒಂದೆಡೆಯಾದರೆ, ಸರಕಾರಿ ಸೌಲಭ್ಯಗಳ ಮಾಹಿತಿಯೂ ಅವರಿಗಿಲ್ಲ.

ಮನೆಗಾಗಿ ಅರ್ಜಿ ಹಾಕಿದ್ದೀರಾ ಎಂದು ಅಮಣ ಅವರಲ್ಲಿ ಕೇಳಿದರೆ, ಹೌದೆನ್ನುತ್ತಾರೆ, ಮನೆ ಮಂಜೂರಾಗಿದೆಯೇ ಎಂದರೆ ಅದಕ್ಕೂ ಹೌದು ಎನ್ನುತ್ತಾರೆ. ಆದರೆ ಸರಕಾರಿ ನಿಯಮದ ಪ್ರಕಾರ ಹಂತ ಹಂತವಾಗಿ ಮನೆ ನಿರ್ಮಿಸುವುದಕ್ಕೆ ಇವರ ಬಳಿ ದುಡ್ಡಿಲ್ಲ ಎನ್ನುವುದು ಅವರ ಉತ್ತರವಾಗಿದೆ. ಜತೆಗೆ ಮನೆಗೆ ತೆರಳುವುದಕ್ಕೆ ರಸ್ತೆಯೂ ಇಲ್ಲ. ಯಾವುದೇ ಸರಕನ್ನೂ ಹೊತ್ತುಕೊಂಡೇ ಬರಬೇಕಾದ ಸ್ಥಿತಿ ಇದೆ.

Advertisement

ಬ್ಯಾನರ್‌ಗಳೇ ಆಧಾರ
ಸರಕಾರದ ಯೋಜನೆಗಳು ಈ ಕುಟುಂಬವನ್ನು ತಲುಪದೇ ಇದ್ದರೂ ಸರಕಾರದ ಯೋಜನೆಗಳ ಕುರಿತು ಮಾಹಿತಿ ನೀಡುವ ಬ್ಯಾನರ್‌ಗಳೇ ಈ ಕುಟುಂಬಕ್ಕೆ ಆಧಾರವಾಗಿದೆ. ರಸ್ತೆ ಬದಿಗಳಲ್ಲಿ ಹಾಕಿರುವ ಬ್ಯಾನರ್‌ಗಳನ್ನು ಅಮಣ ಅವರು ಕೇಳಿ ತಂದು ಗುಡಿಸಲಿನ ಮೇಲೆ ಹಾಕಿದ್ದಾರೆ. ಇಂತಹ ಹಲವು ಬ್ಯಾನರ್‌ಗಳು ಮೇಲ್ಛಾವಣಿಯಲ್ಲಿವೆ.

ಗುಡಿಸಲಿಗೆ ಮಳೆಗಾಲದಲ್ಲಿ ನೀರು ಒಳಬರುತ್ತದೆ ಎಂಬ ಕಾರಣಕ್ಕೆ ಒಳಗಡೆ ಮಲಗುವುದಕ್ಕಾಗಿ ಎತ್ತರದ ವ್ಯವಸ್ಥೆ ಮಾಡಿದ್ದಾರೆ. ಚಿಮಿಣಿ-ಕ್ಯಾಂಡಲ್‌ ದೀಪಗಳೇ ಬೆಳಕಿಗೆ ಆಧಾರ. ಸ್ನಾನ, ಶೌಚಾಲಯದ ವ್ಯವಸ್ಥೆಯೂ ಇಲ್ಲವಾಗಿದೆ. ಸುಮಾರು 4 ಅಡಿ ಎತ್ತರದ ಗುಡಿಸಲಿಗೆ ಬಗ್ಗಿ ಕೊಂಡೇ ಹೋಗಬೇಕಿದೆ. ಗ್ರಾ.ಪಂ. ನಿಂದ ಉಚಿತವಾಗಿ ನೀರು ಕೊಡುತ್ತಿದ್ದು, ಬಾರದೇ ಇದ್ದರೆ ದೂರದ ಬಾವಿ ಯಿಂದ ತರಬೇಕಿದೆ ಎಂದು ಅಮಣ ಕಣ್ಣೀರಿಡುತ್ತಾರೆ.

ಮನೆ ಮಂಜೂರಾಗಿದೆ
ಮುಟ್ಟಿ ಅವರ ಕುಟುಂಬಕ್ಕೆ ಮನೆ ಮಂಜೂರಾಗಿದ್ದು, ನಿರ್ಮಿಸಿ ಕೊಡುವವರಿಲ್ಲ. ಹಿಂದೆ 2 ಬಾರಿ ಟಾರ್ಪಾಲಿನ ವ್ಯವಸ್ಥೆ ಅವರಿಗೆ ನೀಡಿದ್ದೇವೆ. ಜತೆಗೆ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಮನೆ ದುರಸ್ತಿಗೂ ಗ್ರಾ.ಪಂ.ನಿಂದ ಅನದಾನ ನೀಡಲಾಗಿದೆ. ಆದರೆ ಗ್ರಾ.ಪಂ.ನಿಂದ ಮನೆ ನಿರ್ಮಿಸಿ ಕೊಡುವುದಕ್ಕೆ ಅವಕಾಶವಿಲ್ಲ.
 – ಪ್ರಕಾಶ್‌ ಶೆಟ್ಟಿ ನೊಚ್ಚ
   ಅಭಿವೃದ್ಧಿ ಅಧಿಕಾರಿ,
   ಲಾೖಲ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next