ಬೆಳ್ತಂಗಡಿ: ಅಕ್ರಮವಾಗಿ ಸಂಗ್ರಹಿಸಿದ 42 ಸಿಮ್ ಪತ್ತೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಲಭಿಸಿದ್ದರೂ ಪ್ರಕರಣ ಗಂಭೀರವಾಗಿರುವಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ)ದ ಅಧಿಕಾರಿಗಳು ಸೋಮವಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಓರ್ವ ಅಪ್ರಾಪ್ತ ವಯಸ್ಕನ ಸಹಿತ ಒಟ್ಟು ಐವರನ್ನು ಧರ್ಮಸ್ಥಳ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು.
ಓರ್ವನಿಗೆ 9 ಸಿಮ್ ಕಾರ್ಡ್ ಖರೀದಿಗೆ ಅವಕಾಶವಿರುವುದರಿಂದ ನಾಲ್ವರು ಆರೋಪಿಗಳಿಗೆ ಬೆಳ್ತಂಗಡಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು.
ಆರೋಪಿಯೋರ್ವ ವಿದೇಶದಲ್ಲಿ ಉದ್ಯೋಗದಲ್ಲಿರುವುದರಿಂದ ತನಿಖೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಮೂಲಗಳ ಪ್ರಕಾರ ಈ ವಿಚಾರದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಕೈಗೆತ್ತಿಕೊಳ್ಳುವ ಸಾಧ್ಯತೆಯೂ ಕಂಡುಬಂದಿದೆ.