Advertisement

Belthangady: 6 ತಿಂಗಳಲ್ಲಿ 34 ಡೆಂಗ್ಯೂ ದೃಢ; ಕೇವಲ 40 ದಿನಗಳಲ್ಲಿ 32 ಪ್ರಕರಣಗಳು ದಾಖಲು!

12:32 AM Jul 11, 2024 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಜನವರಿ ತಿಂಗಳಿಂದ ಜೂನ್‌ ಆರಂಭದವರೆಗೆ ಡೆಂಗ್ಯೂ ಜ್ವರದ ಕೇವಲ 2 ಪ್ರಕರಣಗಳು ದಾಖಲಾಗಿದ್ದವು. ಆದರೆ ಜೂನ್‌ ಮತ್ತು ಜುಲೈ 10ನೇ ತಾರೀಕಿನ ವರೆಗೆ 32 ಪ್ರಕರಣಗಳು ದಾಖಲಾಗಿ, ಒಟ್ಟು 6 ತಿಂಗಳಲ್ಲಿ 34 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

Advertisement

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ತಾಲೂಕಿನಲ್ಲಿ ಈ ವರೆಗೆ ಒಟ್ಟು 488 ವಿವಿಧ ರೀತಿಯ ಜ್ವರ ಪ್ರಕರಣಗಳು ದಾಖಲಾಗಿವೆ.
ಜ್ವರ ಬಂದು ಡೆಂಗ್ಯೂ ಸಂಬಂಧಿಸಿ ಪರೀಕ್ಷೆ ನಡೆಸಲು ಖಾಸಗಿ ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಲ್ಲಿ ಎನ್‌ಎಸ್‌-1 ಪಾಸಿ ಟಿವ್‌ ಅಥವಾ ನೆಗೆಟಿವ್‌ ವರದಿ ಬಂದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲು ಸೂಚಿಸ ಲಾಗಿದೆ. ತಾಲೂಕಿನ ಪಡಂಗಡಿ, ವೇಣೂರು, ಇಂದಬೆಟ್ಟು, ನಡ, ಕುವೆಟ್ಟು, ಉಜಿರೆ, ಬೆಳ್ತಂಗಡಿ ಗ್ರಾಮಗಳಲ್ಲಿ ಜ್ವರ ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿವೆ.

ಆರೋಗ್ಯ ಇಲಾಖೆಯಿಂದ ಪ್ರತಿ 100 ಮಂದಿಗೆ ರ್‍ಯಾಂಡಮ್‌ ಟೆಸ್ಟ್‌ ನಡೆಸಿ ಅದರಲ್ಲಿ ಶೇ.5ರಷ್ಟು ವರದಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಎನ್‌ಎಸ್‌-1 ವರದಿಯಾದಲ್ಲಿ ತಾಲೂಕು ಮಟ್ಟದಲ್ಲಿ ಔಷಧ ವ್ಯವಸ್ಥೆ ನೀಡಲಾಗುತ್ತದೆ. ಇದಕ್ಕೆ ಪೂರಕ ಔಷಧಗಳು ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಗ್ರಾಮೀಣ ಭಾಗದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರು ಕೂಡ ಇದೆ.

ಆರೋಗ್ಯ ಇಲಾಖೆಯಿಂದ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ರ್ಯಾಪಿಡ್‌ ರೆಸ್ಪಾನ್ಸ್‌ ತಂಡ(ಆರ್‌ಆರ್‌ಟಿ)ವನ್ನು ರಚಿಸಲಾಗಿದೆ. ಸಮುದಾಯ ಆಸ್ಪತ್ರೆ ಸಹಿತ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 15 ತಂಡಗಳಿವೆ. ಈ ತಂಡವು ಪ್ರತಿಯೊಂದು ಮನೆಗೆ 15 ದಿನಗಳಿಗೊಮ್ಮೆ, ಅಂದರೆ (ಪ್ರತಿ ಮೊದಲ ಶುಕ್ರವಾರ ಹಾಗೂ 3ನೇ ಶುಕ್ರವಾರ) ಭೇಟಿ ನೀಡಿ ಲಾರ್ವಾ ಸರ್ವೇ ನಡೆಸುತ್ತದೆ. ಆದರೆ ಇಲ್ಲಿನ ಭೌಗೋಳಿಕ ವಾತಾವರಣ, ಕಾರ್ಯಕರ್ತರ ಕೊರತೆಯಿಂದ ಲಾರ್ವಾ ಸರ್ವೇಯನ್ನು ಸೂಕ್ತ ಸಮಯಕ್ಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿದೆ.

ಬೆಳ್ತಂಗಡಿ 15 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ಪ್ರಕರಣದ ರಕ್ತಕಣ ಪರೀಕ್ಷೆ ನಡೆಸಲು ಸಿಬಿಸಿ ಯಂತ್ರಗಳಿವೆ. ಆದರೆ ಪರೀಕ್ಷಾ ತಜ್ಞರ ಕೊರತೆ ಇಲ್ಲೂ ಕಾಡುತ್ತಿದೆ. ಬೆಳ್ತಂಗಡಿ, ಅಳದಂಗಡಿ, ಚಾರ್ಮಾಡಿ, ಧರ್ಮಸ್ಥಳ, ಹತ್ಯಡ್ಕ, ಮಚ್ಚಿನ, ನಾರಾವಿ, ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಾ ತಜ್ಞರ ಹುದ್ದೆ ಖಾಲಿಯಿದೆ.

Advertisement

ಗ್ರಾಮಾಂತರ ಭಾಗಗಳಲ್ಲಿ ಡೆಂಗ್ಯೂ ಪ್ರಕರಣ ತಡೆಯುವ ಸಲುವಾಗಿ ಆರೋಗ್ಯ ಇಲಾಖೆಯು ಗ್ರಾಮ ಮಟ್ಟದ ವಿಪತ್ತು ನಿರ್ವಹಣ ತಂಡ, ಗ್ರಾ.ಪಂ. ಪಿಡಿಒ, ಶಿಕ್ಷಕರ ಮೂಲಕ ಶಾಲಾ, ಕಾಲೇಜುಗಳಲ್ಲಿ ಮಕ್ಕಳು ಹಾಗೂ ಸಾರ್ವಜನಿಕರಿಗೆ ಕಾರ್ಯಾಗಾರ ನಡೆಸಿದೆ. ಡೆಂಗ್ಯೂ ಜ್ವರವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ, ಅದರ ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
-ಡಾ| ಸೌಜನ್ಯಾ ಕುಮಾರಿ,
ಪ್ರಭಾರ ಆರೋಗ್ಯಾಧಿಕಾರಿ, ತಾಲೂಕು ಆಸ್ಪತ್ರೆ ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next