ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸೆ.22 ರಿಂದ 29 ರ ವರೆಗೆ ನಡೆಯಲಿರುವ 26 ನೇ ವರ್ಷದ ಭಜನಾ ತರಬೇತಿ ಕಮ್ಮಟಕ್ಕೆ ರವಿವಾರ ಕ್ಷೇತ್ರದ ಮಹೋತ್ಸವ ಸಭಾಭವನದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಮೂಡುಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶ್ರೀಗಳು, ಧರ್ಮಸ್ಥಳ ಪರಂಪರೆಯಲ್ಲಿ 21 ನೇ ಹೆಗ್ಗಡೆಯವರಾಗಿ ಸರ್ವಧರ್ಮ ಸಮನ್ವಯತೆ ಸಾರಿದವರು ಡಾ.ಡಿ.ವೀರೇಂದ್ರ ಹೆಗ್ಗಡೆಯವರು. ಧರ್ಮಸ್ಥಳದ ಕಾರ್ಯ ಶಿಸ್ತು ಬದ್ಧವಾಗಿ ಎಲ್ಲರೂ ಅನಿಸರಿಸುವಂತಿರುತ್ತದೆ. ಎಲ್ಲ ಧರ್ಮಕ್ಕೆ ಆಧ್ಯಾತ್ಮಿಕ ಕ್ಷೇತ್ರವಾಗಿ ಧರ್ಮಸ್ಥಳ ವಿಶ್ವಕ್ಕೆ ಸಂದೇಶ ಸಾರಿದ್ದಾರೆ. ಆಧ್ಯಾತ್ಮ ಸಂಸ್ಕಾರ ನೀಡುವ ಅನೇಕ ಮಠ ಮಾನ್ಯಗಳಲ್ಲಿ ಧರ್ಮಸ್ಥಳವೂ ಒಂದು. ಇಲ್ಲಿ ಭಜನೆಯ ಕಮ್ಮಟ ನಡೆಯುತ್ತದೆ. ಭಗವಂತನ ಕಡೆಗೆ ಆತನ ಮಹಿಮೆಯನ್ನು ಸ್ತುತಿಸುವುದಾಗಿದೇ ಭಜನೆ ಎಂದರು.
ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಾಶಂಸನೆ ಮಾಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಪಾಧ್ಯಕ್ಷ ಡಾ.ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಪ್ರಸಾದ್, ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ಹಾಗೂ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್ ಉಪಸ್ಥಿತರಿದ್ದರು.
ಚೈತ್ರಾ ಧರ್ಮಸ್ಥಳ ಮತ್ತು ತಂಡದವರು ನೃತ್ಯರೂಪಕ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರು.
ಭಜನಾ ತರಬೇತಿಯಲ್ಲಿ ಶೃತಿ, ರಾಗ, ತಾಳ, ಲಯ ಬದ್ಧವಾಗಿ ಹಾಡುವ ವಿಧಾನ, ನೃತ್ಯಭಜನೆ, ಪ್ರಾತ್ಯಕ್ಷಿಕೆ, ತಜ್ಞರಿಂದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಮ್ಮಟದಲ್ಲಿ ರಾಜ್ಯದ ಒಟ್ಟು 34 ತಾಲೂಕಿನ 169 ಮಂದಿ ಭಾಗವಹಿಸಿದ್ದಾರೆ. ಸೆ.29 ರಂದು 300 ಭಜನಾ ತಂಡಗಳ 500 ಭಜನಾಪಟುಗಳಿಂದ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ನೃತ್ಯ ಭಜನೆಯೊಂದಿಗೆ ಭಜನೋತ್ಸವ ನಡೆಯಲಿದೆ.