Advertisement

ಬೆಳ್ತಂಗಡಿ: ಬರಿದಾಗುತ್ತಿದೆ ನದಿ ಪಾತ್ರ;  ಬೇಸಗೆಗೆ ನೀರು ಪೂರೈಕೆ ಸವಾಲು

07:45 PM Dec 11, 2019 | mahesh |

ಬೆಳ್ತಂಗಡಿ: ಪ್ರವಾಹದ ಮಟ್ಟಕ್ಕೆ ತಲುಪಿದ ನದಿ ಪಾತ್ರಗಳು ಅಷ್ಟೇ ಬೇಗನೆ ಬರಿದಾಗುತ್ತಿರುವುದರಿಂದ ಈ ಬಾರಿಯ ಬೇಸಗೆ ಕಳೆದ ವರ್ಷಕ್ಕಿಂತಲೂ ಬಿಗಡಾಯಿ ಸುವ ಆತಂಕ ಎದುರಾಗಿದೆ. ಪ್ರತಿ ವರ್ಷ ಜನವರಿ ಇಲ್ಲವೇ ಫೆಬ್ರವರಿ ಆರಂಭದಲ್ಲಿ ನದಿ, ತೋಡುಗಳಿಗೆ ಸಾಂಪ್ರ ದಾಯಿಕ ಕಟ್ಟ ನಿರ್ಮಾಣ ವಾಡಿಕೆ. ಆದರೆ ಈ ಬಾರಿ ನದಿ ಪಾತ್ರಗಳು ಡಿಸೆಂಬರ್‌ ಆರಂಭದಿಂದಲೇ ಒಣಗುತ್ತಿವೆ. ಪರಿಣಾಮ ಬೇಸಗೆಯಲ್ಲಿ ಬೆಳ್ತಂಗಡಿ ನೀರಿನ ಬರ ಎದುರಿಸಲು ಸಜ್ಜಾಗಬೇಕಾಗಿದೆ. ಪಟ್ಟಣಕ್ಕೆ ನೀರು ಪೂರೈಸುವ ಸೋಮಾ ವತಿ ನದಿ ನೀರಿನ ಮಟ್ಟ ಈ ಬಾರಿ ತೀರಾ ಕೆಳಮಟ್ಟಕ್ಕೆ ತಲುಪಿದೆ. ಆದ್ದರಿಂದ ಪ.ಪಂ. ಡಿಸೆಂಬರ್‌ ಕೊನೆಯ ವಾರದಲ್ಲೇ ಸಾಂಪ್ರದಾಯಿಕ ಕಟ್ಟದ ಮೊರೆ ಹೋಗುವ ಮುನ್ಸೂಚನೆ ನೀಡಿದೆ.

Advertisement

ಬೇಕಿದೆ 1.05 ಎಂ.ಎಲ್‌.ಡಿ.
ನಗರಕ್ಕೆ ಪ್ರತಿನಿತ್ಯ 1.05 ಎಂಎಲ್‌ಡಿ ನೀರಿನ ಆವಶ್ಯಕತೆ ಇದೆ. 0.6 ಎಂಎಲ್‌ಡಿ ನದಿಯಿಂದ ಪಡೆಯುತ್ತಿದ್ದು, 0.45 ಎಂಎಲ್‌ಡಿ 11 ಕೊಳವೆಬಾವಿಗಳು ಪೂರೈ ಸುತ್ತಿವೆ. ಅಂದರೆ 7 ಲಕ್ಷ ಲೀ. ನೀರಿನ ಆವಶ್ಯಕತೆ ಇದೆ. ಕಳೆದ ಬಾರಿ ಮೇ ಆರಂಭ ದಲ್ಲೇ ನೀರಿನ ಬವಣೆ ಎದುರಾಗಿತ್ತು.

ಸೋಮಾವತಿಗೆ ಕಿಂಡಿ ಅಣೆಕಟ್ಟು
ಸೋಮಾವತಿ ನದಿಗೆ ಪ್ರತಿ ವರ್ಷ ಸಾಂಪ್ರದಾಯಿಕ ಕಟ್ಟ ನಿರ್ಮಾಣ ಮಾಡಲಾಗುತ್ತಿತ್ತು. ಈ ಸ್ಥಳದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 80 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿದೆ. ಹೆಚ್ಚುವರಿ 38 ಲಕ್ಷ ರೂ. ಬಿಡುಗಡೆಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಡಿಸೆಂಬರ್‌ ಒಳಗಾಗಿ ಹಲಗೆ ಹಾಕಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರು ತಿಳಿಸಿದ್ದಾರೆ.

ಅಂತರ್ಜಲ ಮಟ್ಟ ಕುಸಿತ
ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದು ಪ್ರವಾಹ ಬಂದಿತ್ತು. ನೇತ್ರಾವತಿ ಉಪನದಿಗಳು ಭರ್ತಿಯಾಗಿ ಗದ್ದೆ ತೋಟವನ್ನು ಆವರಿಸಿತ್ತು. ಆದರೆ ಒಮ್ಮಿಂದೊಮ್ಮೆಲೆ ಸುರಿದ ಮಳೆ ನೀರು ಹಿಡಿದಿಟ್ಟುಕೊಂಡಿಲ್ಲ. ಪರಿಣಾಮ ನದಿಗಳು ಭರ್ತಿಯಾದ ವೇಗದಲ್ಲೇ ಸಂಪೂರ್ಣ ಬತ್ತಿದೆ. ಹಿಂದೆ ಪ್ರತಿ ಮನೆಯಲ್ಲೂ ಗದ್ದೆ, ತೋಟಗಳಿದ್ದವು. ಗದ್ದೆಗಳು ಅಗಾಧ ಪ್ರಮಾಣದಲ್ಲಿ ನೀರಿಂಗಿಸುತ್ತವೆ. ಆದರೆ ಅದು ಇತ್ತೀಚೆಗೆ ಸಾಧ್ಯವಾಗುತ್ತಿಲ್ಲ. ಪರಿಣಾಮ ನದಿಗಳಿಗೆ ಸೇರುವ ಒರತೆ ನೀರಿನ ಪ್ರಮಾಣ ತಗ್ಗುತ್ತಿದೆ ಎಂಬುದು ಭೂ ವಿಜ್ಞಾನಿಗಳ ಅಭಿಪ್ರಾಯ. ಪರಿಣಾಮ ಪಶ್ಚಿಮಘಟ್ಟವಾಗಿ ಬೆಳ್ತಂಗಡಿ ತಾ|ನಿಂದಾಗಿ ಹರಿದು ಬರುವ ಪ್ರಮುಖ ಜೀವನದಿಗಳಾದ ನೇತ್ರಾವತಿ, ಮೃತ್ಯುಂಜಯ, ಕಪಿಲ, ಸೋಮಾವತಿ, ಫಲ್ಗುಣಿ ಸೊರಗಿದೆ.

 ಕಟ್ಟ ಅನಿವಾರ್ಯ
ಕಳೆದ ವರ್ಷ ಬೇಸಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಗಮನಿಸಿದಾಗ ಕಳೆದ ಬಾರಿಗಿಂತಲೂ ನೀರಿನ ಮಟ್ಟ ಕುಸಿದಿದೆ. 5ರಿಂದ 7 ಲಕ್ಷ ಲೀ. ನೀರಿನ ಆವಶ್ಯಕತೆ ಇರುವುದರಿಂದ ಡಿಸೆಂಬರ್‌ ಕೊನೆ ವಾರದಲ್ಲೇ ಸಾಂಪ್ರದಾಯಿಕ ಕಟ್ಟ ನಿರ್ಮಾಣ ಮಾಡಬೇಕಾದ ಅನಿವಾರ್ಯ ಕಂಡುಬಂದಿದೆ.
 - ಮಹಾವೀರ ಆರಿಗ, ಪ.ಪಂ. ಎಂಜಿನಿಯರ್‌

Advertisement

- ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next