Advertisement

ಬೆಳ್ತಂಗಡಿ ನಗರದ ಆಯಕಟ್ಟಿನ ಸ್ಥಳಗಳಲ್ಲಿಲ್ಲ ಸಿಸಿ ಕೆಮರಾ

01:35 PM Aug 19, 2022 | Team Udayavani |

ಬೆಳ್ತಂಗಡಿ: ಕರಾವಳಿ ಜಿಲ್ಲೆ ಅತೀ ಸೂಕ್ಷ್ಮ ಪ್ರದೇಶವಾಗಿ ಮತ್ತೆ ಮತ್ತೆ ಸಾಬೀತಾದರೂ ಪಟ್ಟಣಗಳಲ್ಲಿ ಕಾನೂನು ಚೌಕಟ್ಟಿನೊಳಗೆ ಬೇಕಾಗುವ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದಕ್ಕೆ ಸಾಕ್ಷಿ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲೂ ಗೋಚರಿಸುತ್ತದೆ.

Advertisement

ಬೆಳ್ತಂಗಡಿ ಪಟ್ಟಣದಲ್ಲೇ ಕಳವು, ಸರಕಾರಿ ಕಾಲೇಜು ಮೈದಾನ ಸಹಿತ ಆಯಕಟ್ಟಿನ ಸ್ಥಳಗಳಲ್ಲಿ ಮಧ್ಯರಾತ್ರಿವರೆಗೂ ದುಶ್ಚಟಗಳನ್ನು ಮೈಗೆ ಅಂಟಿಸಿಕೊಂಡು ಓಡಾಡುವ ಜನ, ಟ್ರಾಫಿಕ್‌ ಸಮಸ್ಯೆ ಮಧ್ಯೆ ಹೆಲ್ಮೆಟ್‌ ಧರಿಸದೇ ಓಡಾಟ, ನಿರ್ಲಕ್ಷ್ಯದ ಚಾಲನೆ, ಅವ್ಯವಸ್ಥಿತ ಪಾರ್ಕಿಂಗ್‌ ಇವುಗಳಿಗೆ ಯಾವುದಕ್ಕೂ ಕ್ರಮವಿಲ್ಲ. ಪ.ಪಂ. ವ್ಯಾಪ್ತಿಗೆ ಒಳಪಟ್ಟಂತೆ ಬಸ್‌ ನಿಲ್ದಾಣದಲ್ಲಿ ವಾರ್ತಾಭವನದ ಮುಂಭಾಗದ ಸಿಸಿ ಕೆಮರಾ ಅಳವಡಿಸಿ 4 ವರ್ಷಗಳೇ ಕಳೆದಿವೆ.

ಅಳವಡಿಸಿ ಒಂದೇ ವರ್ಷದಲ್ಲಿ ಕೆಮರಾ ಕೆಟ್ಟು ನಿಂತಿದ್ದು ಈವರೆಗೆ ಅದರ ನಿರ್ವಹಣೆ ನಡೆಸಿಲ್ಲ. ಪ್ರತೀ ಬಾರಿ ಸಾಮಾನ್ಯ ಸಭೆಯಲ್ಲಿ ಚರ್ಚೆಗಳಾಗಿವೆ. ಆದರೆ ನಿರ್ಣಯಕ್ಕಷ್ಟೆ ಸೀಮಿತ. ಯಾವುದಾದರೂ ದುರ್ಘ‌ಟನೆ ಸಂಭವಿಸಿದ ಬಳಿಕವಷ್ಟೆ ಅದರ ಉಪಯೋಗ ನೆನಪಿಗೆ ಬರುತ್ತದೆ. ಬೆಳ್ತಂಗಡಿ ತಾಲೂಕು ನಾಡಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳಲ್ಲೊಂದು. ಸಾವಿರಾರು ಜನ ಇಲ್ಲಿ ಸೇರುತ್ತಾರೆ.

ಇಂತಹ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವಲ್ಲಿ ಯಾವುದೇ ತಾಂತ್ರಿಕ ಕ್ರಮಗಳಿಲ್ಲ. ಇದ್ಯಾವುದಕ್ಕೂ ಜನಪ್ರತಿನಿಧಿಗಳು ಯೋಚಿಸಿಲ್ಲ. ಬೆಳ್ತಂಗಡಿ ಬಸ್‌ ನಿಲ್ದಾಣದಲ್ಲಿ ಇರುವ ಸಿಸಿ ಕೆಮರಾ ಒಂದು ಪಾರ್ಶ್ವವಷ್ಟೆ ಗೋಚರಿಸುತ್ತದೆ. ಬಸ್‌ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದರ ಕುರಿತು ಮಾಹಿತಿ ಕಲೆ ಹಾಕಲು ಸಿಸಿ ಕೆಮರಾವಿಲ್ಲ. ಬಸ್‌ ನಿಲ್ದಾಣದಲ್ಲಿ ಶಾಲಾ ಮಕ್ಕಳಿಗೆ ಉಂಟಾಗುವ ಕಿರುಕುಳ, ಬಿಕ್ಷಾಟನೆ ಸೋಗಲ್ಲಿ ಬರುವವರು, ಬಸ್‌ ನಿಲ್ದಾಣದ ಅಂಗಡಿಗಳ ಕಳ್ಳತನ ನಡೆದರೆ ಪತ್ತೆ ಹಚ್ಚಲು ಸಾಧ್ಯವಿಲ್ಲ.

ಪಿಕ್‌ ಪಾಕೆಟ್‌, ಮೊಬೈಲ್‌ ಕಳವು, ಮಹಿಳಾ ಕಿರುಕುಳ ನಡೆದಲ್ಲಿ ಸಾಕ್ಷಿ ಸಿಗಲಾರದು. ಈ ಕುರಿತು ಮೂರು ವರ್ಷಗಳಿಂದ ಪರಿಶಿಷ್ಟ ಜಾತಿ ಕುಂದು ಕೊರತೆ ಸಭೆಯಲ್ಲೂ ಧ್ವನಿ ಎತ್ತಲಾಗಿದೆ. ಆದರೆ ಕ್ರಮ ಮಾತ್ರ ಕಡತಕ್ಕಷ್ಟೆ ಸೀಮಿತ.

Advertisement

ಬಸ್‌ ನಿಲ್ದಾಣದ ಅನೇಕ ಪ್ರಕರಣದಲ್ಲಿ ದೂರು ನೀಡಿದರೆ ಕಾರಣಾಂತರಗಳಿಂದ ಒಂದು ಹಂತದಲ್ಲಿ ಬಿ ರಿಪೋರ್ಟ್‌ (ಪತ್ತೆಯಾಗದ ಪ್ರಕರಣವಾಗಿ) ಆಗಿಯೇ ಉಳಿಯುತ್ತದೆ.

ಎಲ್ಲ ಪಾರ್ಶ್ವಕ್ಕೂ ಸಿಸಿ ಕೆಮರಾ ಅಗತ್ಯ ಬೆಳ್ತಂಗಡಿ ಬಸ್‌ ನಿಲ್ದಾಣದ ಒಳಗೆ ಎಲ್ಲ ಪಾರ್ಶ್ವಕ್ಕೂ ಸಿಸಿ ಕೆಮರಾ ಅಳವಡಿಸಬೇಕು. ಪ್ರತೀ ದಿನ 2ರಿಂದ 3 ಸಾವಿರಕ್ಕೂ ಅಧಿಕ ಮಕ್ಕಳು ಸಂಚರಿಸುತ್ತಿದ್ದಾರೆ. ಸಾವಿರಾರು ಪ್ರಯಾಣಿಕರು ಬಂದು ಹೋಗುವ ಬಸ್‌ ನಿಲ್ದಾಣದಲ್ಲಿ ಸಿಸಿ ಕೆಮರಾ ಇಲ್ಲವಾದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಾದರು ಹೇಗೆ? –ಬಿ.ಕೆ. ವಸಂತ್‌, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರು, ದಸಂಸ (ಅಂಬೇಡ್ಕರ್‌ ವಾದ)

Advertisement

Udayavani is now on Telegram. Click here to join our channel and stay updated with the latest news.

Next