Advertisement
ಕಳೆದ ವರ್ಷ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಪ್ರತೀ ಮನೆಗೆ 3.50 ಲಕ್ಷ ರೂ. ಘಟಕ ವೆಚ್ಚದಲ್ಲಿ ಅನುದಾನವೇನೋ ಬಿಡುಗಡೆಯಾಗಿತ್ತು. ಆದರೆ ಮನೆ ನಿರ್ಮಾಣ ಆದೇಶ ಫಲಾನುಭವಿಗಳ ಕೈಸೇರಿದ 15 ದಿನಗಳೊಳಗಾಗಿ ಕಾಮಗಾರಿ ಆರಂಭಿಸಿ, 6 ತಿಂಗಳ ಒಳಗಾಗಿ ಕಡ್ಡಾಯವಾಗಿ ಪೂರ್ಣ ಗೊಳಿಸಬೇಕೆಂಬ ಆದೇಶ ಹೊರಡಿಸಿತ್ತು. ಆದರೆ ಮಳೆಗಾಲದ ಅವಧಿ ಯಲ್ಲಿ ಆದೇಶ ಬಂದಿರುವುದರಿಂದ ಮನೆ ನಿರ್ಮಾಣ ಸವಾಲಾಗಿತ್ತಲ್ಲದೆ ಬಡ ಕುಟುಂಬಗಳು ಇರುವ ಮನೆ ಕೆಡವಿ ನೂತನ ಮನೆ ನಿರ್ಮಾಣ ಮಾಡಲು ತಾತ್ಕಾಲಿಕ ವಸತಿ ಇಲ್ಲದೆ ತ್ರಿಶಂಕು ಸ್ಥಿತಿಯಲ್ಲಿತ್ತು.
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಾಲೂಕಿಗೆ ಪ್ರಸಕ್ತ ವರ್ಷ 15 ಮನೆಗಳು ಮಂಜೂರಾಗಿದ್ದು, ಅವುಗಳ ಪೈಕಿ 11 ಮನೆಗಳು ಬಡೆಕೊಟ್ಟು ಕುಟುಂಬಗಳಿಗೆ ನೀಡಲಾಗಿದೆ. ಮಣ್ಣಿನ ಕೊರತೆ ಹಾಗೂ ಸಲಕರಣೆ ಸಾಗಾಟಕ್ಕೆ ರಸ್ತೆ ಸಮಸ್ಯೆಯಾಗಿದ್ದರಿಂದ ಕೊಂಚ ತಡವಾದರೂ ಪ್ರಸಕ್ತ ತಳಪಾಯ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲದ ಮುನ್ನ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಪ್ರತೀ ಮನೆಗೆ 3.50 ಲಕ್ಷ ರೂ. ಘಟಕ ಯೋಜನೆ ವೆಚ್ಚ ನೇರವಾಗಿ ಫಲಾನುಭವಿಗಳ ಕೈ ಸೇರಲಿದ್ದು, ಶಾಸಕರು ತಲಾ 1 ಲಕ್ಷ ರೂ.ನಂತೆ ವೈಯಕ್ತಿಕ ಅನುದಾನ ಒದಗಿಸಿದ್ದಾರೆ. ಮೂರು ಬಾರಿ ಮನೆ ನಿರ್ಮಾಣ
ಕಳೆದ 2 ದಶಕಗಳಿಂದ ಈ ಕುಟುಂಬಗಳಿಗೆ ಇಲಾಖೆಗಳು ಮೂರು ಬಾರಿ ಮನೆ ನಿರ್ಮಾಣ ಮಾಡಿವೆ. ನಿರ್ಮಿಸಿದ ಮನೆಗಳ ಗುಣಮಟ್ಟದ ಕೊರತೆ ಯಿಂದಾಗಿ ಯಾವ ಮನೆಗಳೂ ಹೆಚ್ಚು ಕಾಲ ಉಳಿಯಲಿಲ್ಲ. ಮೊದಲ ಬಾರಿ ಹಂಚಿನ ಮನೆ ಗಳನ್ನು ಇಲಾಖೆ ವತಿಯಿಂದ ನಿರ್ಮಿಸಿ ಕೊಡಲಾಗಿತ್ತು. ಈ ಮಧ್ಯೆ ಐಟಿಡಿಪಿ ಇಲಾಖೆಯಿಂದ ಮತ್ತೂಮ್ಮೆ ಕಾಂಕ್ರೀಟ್ ಮೇಚ್ಛಾವಣಿ ಹೊಂದಿರುವ ಮನೆ ನಿರ್ಮಿಸಿಕೊಡಲಾಗಿತ್ತು.
Related Articles
Advertisement
ಪ್ರಸಕ್ತ ವಾಸಿಸುತ್ತಿರುವ ಮನೆಗಳು ನಿರ್ಮಾಣವಾಗಿ ಒಂದು ದಶಕ ಮಾತ್ರ ಕಳೆದಿದೆ. ಈಗಲೇ ಎಲ್ಲವೂ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಈ ಕುಟುಂಬಗಳು ಅರ್ಜಿ ಸಲ್ಲಿಸಿದ್ದು ಹೊಸ ಮನೆಗಳನ್ನು ನಿರ್ಮಿಸಿಕೊಡುವಂತೆ ಕೇಳಿ ಕೊಂಡಿದ್ದರು. ಲೋಕೋಪಯೋಗಿ ಇಲಾಖೆ ಪರಿಶೀಲಿಸಿ 2020 ಜನವರಿ ಮೊದಲ ವಾರದಲ್ಲಿ ಇಲಾಖೆಗೆ ವರದಿ ನೀಡಿತ್ತು.
400 ಚದರಡಿ ಮನೆಮನೆಯು ಹಾಲ್, ಬೆಡ್‌ರೂಮ್, ಅಡುಗೆ ಕೋಣೆ, ಡೈನಿಂಗ್ ಹಾಲ್ ಒಳಗೊಂಡಿದ್ದು, ಶೌಚಾಲಯ ಪ್ರತ್ಯೇಕ ನಿರ್ಮಾಣವಾಗಲಿದೆ. ಹೊರಾಂಗಣಕ್ಕೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಕುರಿತು ನಕ್ಷೆ ರಚಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 87,500 ರೂ.ನಂತೆ ನಾಲ್ಕು ಕಂತುಗಳಲ್ಲಿ ಒಟ್ಟು 3.50 ಲಕ್ಷ ರೂ. ಕೈಸೇರಲಿದೆ. ಫಲಾನುಭವಿಗಳಾದ ಅಕ್ಕು, ಚೋಮು, ಪ್ರೇಮಾ, ಲಲಿತಾ, ಮೇರಿ, ಚಂದ್ರಾವತಿ, ಮೀನಾಕ್ಷಿ, ರೀತಾ, ವನಿತಾ, ಸಾವಿತ್ರಿ, ಅಂಗಾರೆ ಸೇರಿ 11 ಮಂದಿಗೆ ಮನೆ ಮಂಜೂರಾಗಿದೆ. ಈ ಹಿಂದೆ 9 ಕುಂಟುಂಬಗಳಿದ್ದು, ಒಂದು ಕುಟುಂಬದ ಇಬ್ಬರು ಮಕ್ಕಳು ಪ್ರತ್ಯೇಕಗೊಂಡಿದ್ದರಿಂದ ಒಟ್ಟು 11 ಮನೆ ಮಂಜೂರಾಗಿದೆ. ಶೀಘ್ರ ಪೂರ್ಣ
ಮನೆ ನಿರ್ಮಾಣಕ್ಕೆ ತಲಾ ಒಂದು ಲಕ್ಷದಂತೆ ತನ್ನ ಸ್ವಂತ ಅನುದಾನ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. ಶಾಸಕರ ಸೂಚನೆಯಂತೆ ಮನೆ ನಿರ್ಮಾಣ ಕಾಮಗಾರಿ ಹಂತದಲ್ಲಿದೆ. ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳಿಸಲಾಗುವುದು.
– ಹೇಮಚಂದ್ರ, ಪ್ರಭಾರ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ ಮುಖ್ಯವಾಹಿನಿಗೆ ತರುವ ಪ್ರಯತ್ನ
ಉಜಿರೆ ಗ್ರಾಮದ ಬಡೆಕೊಟ್ಟು ಮೂಲ ಕೊರಗ ನಿವಾಸಿಗಳು ಸೂರಿಲ್ಲದೆ ಸಂಕಷ್ಟ ಪಡುತ್ತಿರುವುದನ್ನು ಮನಗಂಡು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಹಾಗೂ ಶಾಸಕನ ನೆಲೆಯಲ್ಲಿ ಸಹಕಾರ ಒದಗಿಸಿ ಸೂರು ಕಲ್ಪಿಸಲಾಗುವುದು. ಈ ಮೂಲಕ ಹಿಂದುಳಿದ ಕುಟುಂಬಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಲಿದೆ.
– ಹರೀಶ್ ಪೂಂಜ, ಶಾಸಕರು