Advertisement

ಬೆಳ್ತಂಗಡಿ: ಸಂತೆ ಮಾರುಕಟ್ಟೆ ನೂತನ ಕಟ್ಟಡ ಹರಾಜು : ಸೋಮವಾರ ಸಂತೆ ಯಥಾ ಸ್ಥಳಕ್ಕೆ?

09:48 PM Mar 10, 2021 | Team Udayavani |

ಬೆಳ್ತಂಗಡಿ: ಪ.ಪಂ. ವ್ಯಾಪ್ತಿಗೆ ಒಳಪಟ್ಟಂತೆ ಸಂತೆಮಾರುಕಟ್ಟೆಯಲ್ಲಿ ಪ್ರತೀ ಸೋಮವಾರ ಸಂತೆ ನಡೆಯುತ್ತಿದ್ದು, ಲಾಕ್‌ಡೌನ್‌ ಬಳಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ನಗರದಿಂದ 2 ಕಿ.ಮೀ. ದೂರವಿರುವ ಹಳೆಕೋಟೆಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಆರಂಭ‌ದಲ್ಲಿ ಉತ್ತಮವಾಗಿದ್ದ ವ್ಯಾಪಾರ ಲಾಕ್‌ಡೌನ್‌ ಸಡಿಲಗೊಳ್ಳುತ್ತಲೆ ಸೊರಗಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿತ್ತು.

Advertisement

ಈ ಹಿಂದೆ ಇದ್ದ ಸಂತೆಮಾರುಕಟ್ಟೆ ಸ್ಥಳದಲ್ಲಿ 2016-17ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನದಡಿ 1 ಕೋ.ರೂ. ವೆಚ್ಚದಲ್ಲಿ 29 ಕೊಠಡಿ ಯುಳ್ಳ ನೂತನ ವಾಣಿಜ್ಯ ಸಂಕೀರ್ಣಕ್ಕೆ ಪ.ಪಂ. ಕ್ರಿಯಾಯೋಜನೆ ರಚಿಸಿ ನಿರ್ಮಿತಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊರಿಸಿತ್ತು. ಒಂದು ವರ್ಷ ದೊಳಗಾಗಿ ಕಟ್ಟಡ ಪೂರ್ಣಗೊಂಡರೂ ಏಲಂ ಪ್ರಕ್ರಿಯೆಗೆ ತೊಡಕಾಗಿತ್ತು. ಆರಂಭದಲ್ಲಿ 29 ಸ್ಟಾಲ್‌ ಹರಾಜಾಗಿತ್ತಾದರೂ ಪ.ಪಂ.ಗಡದ 11 ಮಂದಿ 5,000 ಆರಂಭಿಕ ಶುಲ್ಕ ವಿಧಿಸಿ ಬಾಕಿ ಮೊತ್ತ ಭರಿಸುವ ಮಧ್ಯ ಕೋವಿಡ್‌ ಅವತರಿಸಿದ್ದರಿಂದ ಆರ್ಥಿಕ ಸಂಕಷ್ಟ ಎದುರಾದ್ದರಿಂದ ಕೊಠಡಿ ಖರೀದಿಗೆ ಅಡ್ಡಿಯಾಗಿತ್ತು.

ಇದೇ ಅವಧಿಯಲ್ಲಿ ನಗರೋತ್ಥಾನ ಯೋಜನೆ ಯಡಿ 25.34 ಲಕ್ಷ ರೂ. ವೆಚ್ಚದಲ್ಲಿ ಹೆಚ್ಚುವರಿ 10 ಕೊಠಡಿ ರಚಿಸುವಲ್ಲಿ ಪ.ಪಂ. ಮುಂದಾಗುವ ಮೂಲಕ ಶೌಚಾಲಯ ಜತೆಗೆ ಸುಸಜ್ಜಿತ ಮಾರುಕಟ್ಟೆ ರಚನೆಗೆ ಮುಂದಾಗಿತ್ತು. 2018ರಲ್ಲಿ 10 ಕೊಠಡಿಗಳೂ ಪೂರ್ಣಗೊಂಡಿತ್ತು.

39ರಲ್ಲಿ 34 ಕೊಠಡಿ ಹರಾಜು
ಮುಖ್ಯಮಂತ್ರಿ ವಿಶೇಷ ಅನುದಾನದಡಿ 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 29 ಕೊಠಡಿಗಳ ಪೈಕಿ 28 ಕೊಠಡಿಗಳು ಹರಾಜಾಗಿದ್ದು, 1 ಕೊಠಡಿ ಬಾಕಿ ಉಳಿದಿದೆ. ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಂಡ 10 ಕೊಠಡಿಗಳ ಪೈಕಿ 4 ಕೊಠಡಿಗಳು ಹರಾಜು ಪ್ರಕ್ರಿಯೆಗೆ ಬಾಕಿ ಉಳಿದಿದೆ. ಒಟ್ಟು ಸೇರಿ 5 ಕೊಠಡಿ ಹೊರತಾಗಿ ಕಡೆಗೂ ಶೇ.90 ಹರಾಜಾಗಿದೆ. ಸದ್ಯದಲ್ಲೇ ಉಳಿದ ಕೊಠಡಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಪ.ಪಂ. ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಪ.ಪಂ. ವ್ಯಾಪ್ತಿಯಲ್ಲಿ ಸೋಮವಾರ ವಾರದ ಸಂತೆ ನಡೆಸಲು ಪ್ರತೀವರ್ಷ ಹರಾಜು ಪ್ರಕ್ರಿಯೆ ನಡೆಸುತ್ತಾ ಬರಲಾಗುತ್ತಿದೆ. ಹರಾಜಿಗೆ ಪಡೆದ ಮೊತ್ತ ಪ.ಪಂ.ಗೆ ಪಾವತಿಸಿ ವ್ಯಾಪಾರಿಗಳಿಂದ ಗುತ್ತಿಗೆದಾರರು ಸ್ಥಳ ಬಾಡಿಗೆ ವಸೂಲಿಮಾಡುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ರೂ.ಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಕೋವಿಡ್‌ ಜಾಗತಿಕವಾಗಿ ಆವರಿಸಿದ್ದಲ್ಲದೆ ಸಂತೆ ಮಾರುಕಟ್ಟೆ ಅನಿವಾರ್ಯ ಕಾರಣಗಳಿಂದ ಸ್ಥಳಾಂತರಿಸಿದ್ದರಿಂದ ಪ.ಪಂ.ಗೆ 4ಲಕ್ಷ ರೂ. ನಷ್ಟವಾಗಿದೆ. ಇದಕ್ಕಾಗಿ ಸಂತೆಮಾರುಕಟ್ಟೆ ಖಾಯಂ ಸ್ಥಳದಲ್ಲೇ ನಡೆಸಬೇಕೆಂಬ ಬೇಡಿಕೆ ವ್ಯಾಪಾರಿಗಳದ್ದು ಹಾಗೂ ನ.ಪಂ. ಆಡಳಿತದ್ದಾಗಿದೆ. ಆದರೆ ಇದಕ್ಕೆ ಶಾಸಕರ ನಿಲುವು ಹಾಗೂ ಹಲವು ವರ್ಷಗಳ ಎಪಿಎಂಸಿ ಹೋರಾಟ ಏನಾಗಲಿದೆ ಎಂಬುದು ಕಾದುನೋಡಬೇಕಿದೆ.

Advertisement

ಹಸಿ ಮೀನು ಮಾರುಕಟ್ಟೆ ಗೊಂದಲ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹಸಿಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕೆ.ಐ.ಆರ್‌.ಡಿ.ಎಲ್‌ಗೆ ಗುತ್ತಿಗೆ ನೀಡಿ ಹಲವು ವರ್ಷಗಳಾಗಿವೆ. ಈವರೆಗೂ ಕಟ್ಟಡ ಪೂರ್ಣಗೊಂಡಿಲ್ಲ. ಹೀಗಾಗಿ ಹಸಿಮೀನು ಮಾರುಕಟ್ಟೆ ಅತಂತ್ರ ಸ್ಥಿತಿಯಲ್ಲಿದೆ.

ಪ್ರತ್ಯೇಕ ಕಟ್ಟಡ ರಚನೆ
ಸಂತೆಮಾರುಕಟ್ಟೆ ಮಳೆಗಾಲದಲ್ಲಿ ತ್ಯಾಜ್ಯ ನೀರಿನಿಂದ ದುರ್ನಾತ ಬೀರುತ್ತಿರುತ್ತದೆ. ಇದಕ್ಕಾಗಿ ಈಗಿರುವ ಸಂತೆ ಮಾರುಕಟ್ಟೆ ಸ್ಥಳದಲ್ಲಿದ್ದ ಒಣಮೀನು ಮಾರಾಟದ ಹಳೇ ಕಟ್ಟಡವನ್ನು ಕೆಡವಲಾಗಿದೆ. ಮುಂದಿನದಿನಗಳಲ್ಲಿ ಪ್ರತ್ಯೇಕ ಕಟ್ಟಡ ರಚನೆಯ ಭರವಸೆ ಪಟ್ಟಣ ಪಂಚಾಯತ್‌ ನೀಡಿದೆ.

ಟ್ರಾಫಿಕ್‌ ಸಮಸ್ಯೆ
ಗುರುವಾಯನಕೆರೆ-ಉಜಿರೆ ರಸ್ತೆ ಟ್ರಾಫಿಕ್‌ ಸಮಸ್ಯೆ ವಿಪರೀತ ಎನ್ನುವಂತಾಗಿದೆ. ಈಮಧ್ಯೆ ಸೋಮವಾರ ಸಂತೆ ದಿನವೆಂದರೆ ತಾಸುಗಟ್ಟಲೆ ರಸ್ತೆ ಸಂಚಾರ ಕಗ್ಗಂಟಾಗುತ್ತಿದೆ. ಇದಕ್ಕಾಗಿ ಪಶುಆಸ್ಪತ್ರೆ ಅಥವಾ ಸಿನೆಮಾ ಮಂದಿರ ಸಮೀಪ ಪಾರ್ಕಿಂಗ್‌ ವ್ಯವಸ್ಥೆ ನಿಗದಿಪಡಿಸಿ ಸಂತೆಮಾರುಕಟ್ಟೆ ಅವಕಾಶ ಕಲ್ಪಿಸುವ ಹೊಣೆಗಾರಿಕೆಯೂ ಪ.ಪಂ. ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next