Advertisement

ಬೆಳ್ತಂಗಡಿ: ಪ್ರವಾಹದೂರಿನ ಸಂತ್ರಸ್ತರ ಸೂರಿನ ಕನಸು ನನಸು: ನಾಲ್ಕನೇ ಹಂತದ ಅನುದಾನ ಬಿಡುಗಡೆ

10:54 PM Feb 16, 2021 | Team Udayavani |

ಬೆಳ್ತಂಗಡಿ: ಮೂಲ ಸೌಕರ್ಯಗಳಲ್ಲೊಂದಾದ ಸೂರಿನ ಕನಸು ಈಡೇರಿಸಲು ಜೀವನದ ಬಹುತೇಕ ಆಯಸ್ಸು ಕಳೆದುಹೋಗುತ್ತದೆ. ಅಂತಹಾ ಸಮಯದಲ್ಲಿ ಬೆಳ್ತ‌ಂಗಡಿ ತಾಲೂಕಿಗೆ 2019 ಆಗಸ್ಟ್‌ 9ರ ಮಧ್ಯಾಹ್ನ ಅಪ್ಪಳಿಸಿದ ಪ್ರವಾಹ ತಾಲೂಕಿನ 9 ಗ್ರಾಮಗಳ 289 ಮಂದಿಯ ಜೀವನವನ್ನೇ ನರಕ ಸದೃಶ್ಯವಾಗಿಸಿತ್ತು. ಆದರೆ ಇಂದು ಮತ್ತೆ ಅವರ ಮೊಗದಲ್ಲಿ ಚೈತನ್ಯ ಮೂಡಿಸುವ ಕೆಲಸ ಸರಕಾರದಿಂದಾಗುತ್ತಿದೆ.

Advertisement

ಪ್ರವಾಹದ ಊರಿನ ಮೊರೆ ಆಲಿಸಲು ಬಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಳ್ತಂಗಡಿ ತಾಲೂಕಿನ ವಸ್ತುಸ್ಥಿತಿ ಆಲಿಸಿ ರಾಜ್ಯಕ್ಕೇ ಅನ್ವಯವಾಗುವಂತೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ತತ್‌ಕ್ಷಣವೇ 1 ಲಕ್ಷ ರೂ. ಹಾಗೂ ಮನೆ ನಿರ್ಮಿಸುವವರೆಗೆ ಪ್ರತಿ ತಿಂಗಳಿಗೆ ಬಾಡಿಗೆಯನ್ನು ನೀಡುವುದಾಗಿ ಘೋಷಿಸಿದ್ದರು.

ಒಂದೂವರೆ ವರ್ಷ ಕಳೆದರೂ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಆಗಾಗ ಅಡ್ಡಿಪಡಿಸಿದ್ದರಿಂದ ಮನೆಗಳು ಪೂರ್ಣಗೊಂಡಿರಲಿಲ್ಲ. ಐಪಿಎಸ್‌ ಸಮಸ್ಯೆ, ಸರ್ವೇ ವಿಳಂಬ, ರಾಜೀವಗಾಂಧಿ ನಿಗಮದಿಂದ ಹಣ ಬಿಡುಗಡೆ ತಡವಾಗಿರುವುದು ಸೇರಿದಂತೆ ಅನೇಕ ನೋವು ಅನುಭವಿಸಿದ್ದರು. ಪ್ರಸಕ್ತ ಒಂದೊಂದೇ ಸಮಸ್ಯೆಗಳು ಪೂರ್ಣಗೊಂಡಿದ್ದು, ಸಂಘಸಂಸ್ಥೆಗಳ ನೆರವು, ದಾನಿಗಳ ಪರಿಶ್ರಮ ಎಲ್ಲವೂ ಒಂದಾಗಿ ಸಂತ್ರಸ್ತರ ಬದುಕಿನಲ್ಲಿ ಸೂರಿನ ಕನಸ್ಸು ಈಡೇರಿತ್ತಿದೆ.

ಬೆಳ್ತಂಗಡಿ ತಾಲೂಕಿನ 16 ಗ್ರಾಮಗಳಲ್ಲಿ ಹಾನಿಯಾದ ಮನೆಗಳ ಪೈಕಿ ಅತೀ ಹೆಚ್ಚು ಹಾನಿಗೊಳಗಾದ 289 ಮನೆಗಳನ್ನು ಪುನರ್ವಸತಿ ಯೋಜನೆ-2019ರಡಿಯಲ್ಲಿ ಗುರುತಿಸಲಾಗಿತ್ತು. 2020 ಜೂನ್‌ 3 ರ ವರೆಗೆ 5,55,00,000 ರೂ. ಹಣ ಬಿಡುಗಡೆಯಾಗಿತ್ತು. ಇದೀಗ ನಾಲ್ಕನೇ ಹಂತದ ಜಿಪಿಎಸ್‌ ಕಾರ್ಯ ನಡೆದು ಹಣ ಸಂದಾಯವಾಗಿದೆ.

ಜಿಪಿಎಸ್‌ ಹಂತ
289ಮನೆಗಳ ಪೈಕಿ 203 ಮನೆ ಸಂಪೂರ್ಣ ಹಾನಿ, 55 ಮನೆ ಭಾಗಶಃ ಹಾನಿ, 31 ಅಲ್ಪ-ಸ್ವಲ್ಪ ಹಾನಿ ಎಂದು ಪರಿಗಣಿಸಿ ಒಟ್ಟು 289 ಮನೆಗಳ ವರದಿ ಸಲ್ಲಿಸಲಾಗಿತ್ತು. ಸಂಪೂರ್ಣ ಮತ್ತು ಭಾಗಶಃ ಹಾನಿಗೊಳಗಾದ ಒಟ್ಟು 258 ಮನೆಗಳ ಪೈಕಿ 255 ಮನೆಗಳಿಗೆ 5 ಲಕ್ಷ ರೂ. ಸರಕಾರ ಘೋಷಿಸಿತ್ತು. ಪ್ರಥಮ ಹಂತವಾಗಿ 1 ಲಕ್ಷ ರೂ. ಹಣ ಬಿಡುಗಡೆಗೊಳಿಸಿದೆ. ಬಳಿಕ ತಳಪಾಯ-ಗೋಡೆ-ಛಾವಣಿ-ಪೂರ್ಣ ಹೀಗೆ ಹಂತವಾರು ಪ್ರಗತಿ ಸಾಧಿಸಿದ ಫಲಾ ನುಭವಿಗಳಿಗೆ ಜಿ.ಪಿ.ಎಸ್‌ ಅಳವಡಿಸಿದ ಅನಂತರ ನೇರವಾಗಿ ಖಾತೆಗೆ ಜಮಾ ಮಾಡಲಾಗಿದೆ.

Advertisement

ಉಳಿದಂತೆ ಅಲ್ಪ-ಸ್ವಲ್ಪ ಹಾನಿಗೊಳಗಾದ 31 ಮನೆಗಳಿಗೆ ಪ್ರತಿ ಫಲಾನುಭವಿಗೆ 50,000 ರೂ. ಪೂರ್ಣ ಮೊತ್ತದ ಪರಿಹಾರದ ಹಣ ನೀಡಲಾಗಿದೆ. ಹಸು 1 ಕರು ಸೇರಿದಂತೆ 3 ಜಾನುವಾರುಗಳ ಜೀವ ಹಾನಿಗೆ 70,000 ರೂ. ಪರಿಹಾರ, ಬಟ್ಟೆ ಮತ್ತು ಅಡುಗೆ ಪಾತ್ರೆ-ಸಾಮಗ್ರಿಗಳ ಹಾನಿಗೆ 324 ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ 10 ಸಾವಿರ ರೂ. ನಂತೆ ಒಟ್ಟು 32ಲಕ್ಷದ 40 ಸಾವಿರ ರೂ. ನೀಡಿದೆ.

ಪ್ರಸಕ್ತ ತಳಪಾಯ 36 ಮನೆ, ಗೋಡೆ ಹಂತ-67 ಮನೆ, ಛಾವಣಿ ಹಂತ-72 ಮನೆ, ಪೂರ್ಣವಾದ-59 ಮನೆಗಳ ಜಿಪಿಎಸ್‌ ನಡೆಸಲಾಗಿದೆ. ಹಂತಹಂತವಾಗಿ ಅನುದಾನವೂ ಬಿಡುಗಡೆಯಾಗುತ್ತಾ ಬಂದಿದೆ. 18 ಮನೆಗಳಿಗೆ ಆರಂಭಿಕ 1 ಲಕ್ಷ ರೂ. ನಂತೆ ಬಂದಿದ್ದು, ಬಳಿಕ ಮುಂದುವರೆಸಲು ನಾನಾ ಕಾರಣಗಳಿಂದ ಬಾಕಿ ಉಳಿದಿದೆ. ಮಿತ್ತಬಾಗಿಲು ಒಂದೇ ಗ್ರಾಮದಲ್ಲಿ 13 ಮನೆಗಳು ತಳಪಾಯ ಹಂತದಲ್ಲೇ ಉಳಿದಿದೆ. ಈ ಕುರಿತು ಕಂದಾಯ ಇಲಾಖೆ ಅಫಿದಾವಿತ್‌ ಪಡೆದು ಸಂಬಂದಪಟ್ಟ ಇಲಾಖೆಗೆ ಸಲ್ಲಿಸಿದೆ.

ಅಗತ್ಯ ಕ್ರಮ
ವಾರಸುದಾರರು ಮೃತಪಟ್ಟು ಖಾತೆ ಬದಲಾವಣೆ ನಡೆಸುವ ವಿಚಾರ ನನ್ನ ಗಮನಕ್ಕೆ ಬಂದಾಕ್ಷಣ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮನೆ ನಿರ್ಮಾಣವಾಗದೆ ಬಾಕಿ ಉಳಿದ ಸಂತ್ರಸ್ತರ ಸಮಸ್ಯೆ ಆಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ

ವಾರಸುದಾರರ ಖಾತೆ ಬದಲಾವಣೆ
ಸಂತ್ರಸ್ತ ವಾರಸುದಾರರು ಮೃತಪಟ್ಟಿದ್ದರಿಂದ ಅವರ ಪತ್ನಿ ಅಥವಾ ಮಕ್ಕಳ ಹೆಸರಿಗೆ ವರ್ಗಾಯಿಸುವಲ್ಲಿ ತಾಂತ್ರಿಕ ತೊಡಕಾಗಿದ್ದರಿಂದ ಕಳೆದ 6 ತಿಂಗಳಿಂದ ಅನುದಾನ ಬಾರದೆ ಮನೆಗಳು ಅರ್ಧಕ್ಕೆ ನಿಂತಿತ್ತು. ಈ ಕುರಿತು ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿ ಜಿಲ್ಲಾಧಿಕಾರಿಗಳ ಗಮನ ಸೆಳೆದಿತ್ತು. ಮಿತ್ತಬಾಗಿಲು ಗ್ರಾ.ಪಂ.ನ ಮಲವಂತಿಗೆ ಗ್ರಾಮದ ಪಾಮಜಿ ಮನೆ ನಿವಾಸಿ ರಾಮಣ್ಣಗೌಡ, ಕಿಲ್ಲೂರು ತಿಮ್ಮನಬೆಟ್ಟು ಅಬ್ದುಲ್‌ ರಫೀಕ್‌, ಕಲ್ಲೊಲೆ ಲಿಂಗಪ್ಪ ಗೌಡ ಸೇರಿದಂತೆ ಕೊಲ್ಲಿ ಸೀತು ಗೌಡ ಅವರು ಮೃತಪಟ್ಟಿದ್ದು, ಜಿಲ್ಲಾಧಿಕಾರಿ ಪತ್ರವನ್ನು ಪರಿಗಣಿಸಿ ಬೆಂಗಳೂರು ರಾಜೀವ ಗಾಂಧಿ ವಸತಿ ನಿಗಮ ತಾಂತ್ರಿಕ ಸಮಸ್ಯೆ ಸರಿಪಡಿಸಿದೆ. ಇದೀಗ ಖಾತೆ ಹೆಸರು ಬದಲಾಗಿದ್ದು, ನಾಲ್ಕನೇ ಕಂತಿನ ಹಣವೂ ಫೆ.16ರಂದು ಬಿಡುಗಡೆಯಾಗಿದೆ ಎಂದು ಸಂತ್ರಸ್ತ ಸತೀಶ್‌ ಕಲ್ಲೊಲೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next