Advertisement
ಬೆಳ್ಮಣ್‌ಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದ ಇಲ್ಲಿನ ರೋಟರಿ ಸಂಸ್ಥೆ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರದ ನಿರಾಳತೆಗೆ ರಸ್ತೆ ವಿಭಾಜಕ ವನ್ನೂ ಅಳವಡಿಸಿ ಸೇವಾತತ್ಪರತೆ ಮೆರೆದಿತ್ತು. ಆದರೆ ಆ ವ್ಯವಸ್ಥೆಯನ್ನು ಪಂಚಾಯತ್ ಆಡಳಿತ ಈ ವರೆಗೂ ಸ್ವೀಕರಿಸದೆ ಇರುವುದರಿಂದ ಅಳವಡಿ ಸಿದ್ದ ವಿಭಾಜಕಗಳು ಸೂಕ್ತ ನಿರ್ವಹಣೆ ಕಾಣದೆ ವಾಹನಗಳು ವಿಭಾಜಕದ ಮೇಲೆಯೇ ಸಂಚರಿಸಿ ಬೆಂಡಾಗಿ ನೆಲಕ್ಕೊರಗಿವೆ.
ಉಡುಪಿ, ಕಾರ್ಕಳ, ಮೂಡುಬಿದಿರೆ ಕಟೀಲು, ಮಂಗಳೂರು ಕಡೆಗಳಿಗೆ ಸಂಚರಿಸುತ್ತಿರುವ ಜನರು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಬೆಳ್ಮಣ್ ಜಂಕ್ಷನ್ ದಾಟಿಯೇ ಸಾಗಬೇಕಿದೆ. ಇಲ್ಲಿ ಬಸ್ ಬದಲಾಯಿಸುವ ಸಹಸ್ರಾರು ಮಂದಿ ಪ್ರತಿನಿತ್ಯ ತಮ್ಮ ಖಾಸಗಿ ವಾಹನಗಳ ಮೂಲಕ ಈ ಜಂಕ್ಷನ್ ದಾಟಿಯೇ ಸಾಗುತ್ತಾರೆ. ಇಲ್ಲಿ ಶಿರ್ವ, ಕಾರ್ಕಳ, ಮುಂಡ್ಕೂರು, ಪಡುಬಿದ್ರಿ ಕಡೆಗಳಿಂದ ಬರುವ ವಾಹನಗಳು ಒಟ್ಟಾದಾಗ ಒಂದಿಷ್ಟು ಗೊಂದಲ ಏರ್ಪಡುವುದು ಸಹಜ.ಹಾಗಾಗಿ ಇಲ್ಲಿ ಡಿವೈಡರ್ ಆಳವಡಿಸಲಾಗಿದೆ ಎನ್ನುವುದು ಬೆಳ್ಮಣ್ ರೋಟರಿಯ ವಾದ. ಆದರೆ ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎನ್ನುವುದು ಪಂಚಾಯತ್ ಆಡಳಿತದ ವಾದ. ಇದರಿಂದ ಬೆಳ್ಮಣ್ ರೋಟರಿಯ ಪರಿಕಲ್ಪನೆಯ ಕನಸು ನುಚ್ಚುನೂರಾಗಿದೆ.
Related Articles
Advertisement
ಬೆಳ್ಮಣ್ ರೋಟರಿ ನೇತೃತ್ವದಲ್ಲಿ ಕಾರ್ಕಳ ಶಾಸಕರ ಅನುದಾನದ ನೆರವಿನೊಂದಿಗೆ ನಿರ್ಮಾಣಗೊಂಡ ಸುಂದರ ಪಾರ್ಕಿಂಗ್ ವ್ಯವಸ್ಥೆಯೂ ನಿರ್ಲಕ್ಷéಕ್ಕೊಳಗಾಗಿದೆ. ನಿರ್ವಹಿಸಬೇಕಾಗಿದ್ದ ಗ್ರಾ.ಪಂ. ಆಡಳಿತ ಕ್ಯಾರೇ ಅನ್ನದಿರುವುದರ ಜತೆಗೆ ವಾಗ್ಧಾನ ಮಾಡಿದ್ದ 2 ಲ. ರೂ. ಅನುದಾನ ಇನ್ನೂ ನೀಡದೆ ಮೀನಮೇಷ ಎಣಿಸುತ್ತಿದೆ. ಪಾರ್ಕಿಂಗ್, ರಸ್ತೆ ವಿಭಾಜಕಕ್ಕೆ ಲೋಕೋಪಯೋಗಿ ಇಲಾಖೆ, ಕಾರ್ಕಳ ತಹಶೀಲ್ದಾರ್, ಕಾರ್ಕಳ ಪೊಲೀಸ್ ಠಾಣೆಯಲ್ಲಿ ರೋಟರಿ ಪರವಾನಿಗೆ ಪಡೆದಿತ್ತು.
ಪಂಚಾಯತ್ ಬೆಂಬಲ ನೀಡಲಿ ಬೆಳ್ಮಣ್‌ಗೆ ಸುಂದರ ಪಾರ್ಕಿಂಗ್ ಹಾಗೂ ವಿಭಾಜಕದ ವ್ಯವಸ್ಥೆ ಕಲ್ಪಿಸಿದ್ದರೂ ಪಂಚಾಯತ್ ಆಡಳಿತ ಇನ್ನೂ ಹಸ್ತಾಂತರ ಪಡೆಯದೆ ಯೋಜನೆಯ ಅರ್ಥ ಕೆಡಿಸಿದೆ. ರೋಟರಿಯಿಂದ ಇನ್ನೂ ಹಲವು ಯೋಜನೆ, ಯೋಚನೆಗಳಿದ್ದರೂ ಪಂಚಾಯತ್‌ನ ಈ ನಿಲುವು ಬೇಸರ ತಂದಿದೆ. ಜನೋಪಯೋಗಿ ಕೆಲಸಗಳಿಗೆ ಪಂಚಾಯತ್ ಬೆಂಬಲ ನೀಡಬೇಕು.
-ರನೀಶ್ ಶೆಟ್ಟಿ,ಬೆಳ್ಮಣ್ ರೋಟರಿಯ ನಿಕಟಪೂರ್ವ ಅಧ್ಯಕ್ಷ ಕಾರ್ಯಪ್ರವೃತ್ತರಾಗುತ್ತೇವೆ
ಬೆಳ್ಮಣ್ ರೋಟರಿಯ ಯೋಜನೆಗಳು ಶ್ಲಾಘನೀಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಿಭಾಜಕಗಳ ವ್ಯವಸ್ಥೆ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ. ಕೂಡಲೇ ಹಸ್ತಾಂತರಕ್ಕೆ ಪಡೆದು ಕಾರ್ಯ ಪ್ರವೃತ್ತರಾಗುತ್ತೇವೆ.
-ವಾರಿಜಾ, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ – ಶರತ್ ಶೆಟ್ಟಿ ಮುಂಡ್ಕೂರು