ವಿಶೇಷ ವರದಿ-ಬೆಳ್ಮಣ್: ಇಲ್ಲಿನ ಪೇಟೆಯಲ್ಲಿ ರಾಜ್ಯ ಹೆದ್ದಾರಿ ಅಲ್ಲಲ್ಲಿ ಕುಸಿತ ಕಂಡಿದ್ದು ಅಪಾಯಕಾರಿ ಹಂತ ತಲುಪಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕೂಡಲೇ ಎಚ್ಚೆತ್ತು ಕೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಕಾರ್ಕಳ -ಪಡುಬಿದ್ರೆ ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭ ಬೆಳ್ಮಣ್ ಪೇಟೆಯಲ್ಲಿ ಸುಂದರ ರಸ್ತೆಯೊಂದು ನಿರ್ಮಾಣಗೊಂಡ ಬಗ್ಗೆ ಜನ ಸಂತೋಷಗೊಂಡಿದ್ದರು. ಆದರೆ ಇದೀಗ ಪೇಟೆಯಲ್ಲಿ ದಿನೇ ದಿನೇ ರಸ್ತೆ ಕುಸಿಯುತ್ತಿ ರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಬೆಳ್ಮಣ್‌ನ ಹೃದಯ ಭಾಗವಾದ ಪೇಟೆಯಲ್ಲಿ ದಿನವೊಂದಕ್ಕೆ ನೂರಾರು ಬಸ್ಸುಗಳು ಸಂಚರಿಸುತ್ತಿದ್ದು, ಬಲು ದೊಡ್ಡ ಜಂಕ್ಷನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಉಡುಪಿ- ಶಿರ್ವ ತಿರುವು ರಸ್ತೆಯ ಪಕ್ಕದಲ್ಲಿಯೂ ರಸ್ತೆ ಕುಸಿಯುತ್ತಿದ್ದು ವಾಹನ ಸವಾರರು, ದಾರಿಹೋಕರ ಸ್ವಲ್ಪ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ. ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ರಸ್ತೆ ಕುಸಿದು ನಿರ್ಮಾಣಗೊಂಡ ಹೊಂಡಗಳ ಅರಿವಿಲ್ಲದ ಕಾರಣ ಈಗಾಗಲೇ ಹಲವಾರು ಅಪಘಾತಗಳು ನಡೆದಿವೆ. ಬೆಳ್ಮಣ್ ಪೇಟೆಯಿಂದ ಶಿರ್ವ ರಸ್ತೆಗೆ ತಿರುಗುವ ರಸ್ತೆಯೂ ದಿನೇ ದಿನೇ ಕುಸಿಯುತ್ತಿದೆ.
4 ವರ್ಷಗಳ ಹಿಂದೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ರಸ್ತೆಯ ಅಂಚಿನಲ್ಲಿದ್ದ ಸರಕಾರಿ ಬಾವಿಯನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಬಳಿಕ ಅದೇ ಬಾವಿ ಇದ್ದ ಜಾಗದಲ್ಲೇ ರಾಜ್ಯ ಹೆದ್ದಾರಿಯ ನಿರ್ಮಾಣ ಗೊಂಡ ಪರಿಣಾಮ ಇದೀಗ ಆ ಜಾಗ ಕುಸಿತಗೊಳ್ಳುತ್ತಿದೆ. ಇದರಿಂದ ರಸ್ತೆಯೂ ಕುಸಿಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೆಳ್ಮಣ್‌ನ ಹೃದಯ ಭಾಗದಲ್ಲೇ ರಸ್ತೆ ಕುಸಿದು ಹೊಂಡ ನಿರ್ಮಾಣಗೊಂಡರೂ ಸ್ಥಳಿಯಾಡಳಿತ ಮಾತ್ರ ಇದು ತನಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ. ಈಗಾಗಲೇ ಹಲವು ಅಪಘಾತಗಳು ರಾತ್ರಿ ಸಂದರ್ಭ ನಡೆದಿದ್ದರೂ ಸ್ಥಳೀಯಾಡಳಿತ ಎಚ್ಚೆತ್ತಿಲ್ಲ. ಕೂಡಲೇ ರಸ್ತೆಯ ನಿರ್ವಹಣೆಯನ್ನು ಮಾಡುವ ಗುತ್ತಿಗೆದಾರ ಹಾಗೂ ಸ್ಥಳಿಯಾಡಳಿತ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹ.
ಪಂಚಾಯತ್ ಅನುದಾನದಲ್ಲಿ ದುರಸ್ತಿ ಕಷ್ಟ
ರಸ್ತೆಯು ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುವ ಕಾರಣ ಪಂಚಾಯತ್‌ನ ಅನುದಾನದಲ್ಲಿ ಸರಿಪಡಿಸುವುದು ಕಷ್ಟ. ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು.
-ಪ್ರಕಾಶ್, ಪಿಡಿಒ,ಬೆಳ್ಮಣ್ ಗ್ರಾ.ಪಂ.
ಸ್ಥಳೀಯಾಡಳಿತ ಎಚ್ಚೆತ್ತುಕೊಂಡಿಲ್ಲ
ಬೆಳ್ಮಣ್ ಪೇಟೆಯಲ್ಲಿ ಹೆದ್ದಾರಿ ಕುಸಿಯುತ್ತಿದ್ದರೂ ಸ್ಥಳಿಯಾಡಳಿತ ಇನ್ನೂ ಎಚ್ಚೆತ್ತುಕೊಂಡಿಲ್ಲ. ಲೋಕೋಪಯೋಗಿ ಇಲಾಖೆ ಆಥವಾ ರಸ್ತೆಯ ಗುತ್ತಿಗೆದಾರರಿಗೆ ತಿಳಿಸಿ ಕ್ರಮ ಕೈಗೊಳ್ಳಬೇಕಾಗಿದೆ.
-ಪ್ರದೀಪ್,ನಂದಳಿಕೆ