Advertisement

ಬೆಳ್ಳಾಯರು ಸಂಪರ್ಕ ರಸ್ತೆಗೆ ಬೇಕಿದೆ ಕಾಯಕಲ್ಪ!

09:07 PM Aug 13, 2021 | Team Udayavani |

ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವ ಬೆಳ್ಳಾಯರು ಗ್ರಾಮಕ್ಕೆ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಓವರ್‌ ಹೆಡ್‌ಟ್ಯಾಂಕ್‌ ನಿರ್ಮಾಣಗೊಂಡರೆ ನೀರಿನ ಸಮಸ್ಯೆ ಬಗೆಹರಿಯಬಹುದು. ಕೊರಗ ಕಾಲನಿಯ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಪಡುಪಣಂಬೂರು: ಪಡುಪಣಂಬೂರು ಗ್ರಾ.ಪಂ. ಗ್ರಾಮಾಭಿವೃದ್ಧಿಯಲ್ಲಿ ರಾಜ್ಯದ ಗಮನ ಸೆಳೆದಿದೆ. ಈ ಪಂಚಾಯತ್‌ನ ಅಧೀನದಲ್ಲಿರುವ ಬೆಳ್ಳಾಯರು ಗ್ರಾಮಕ್ಕೆ ಸಂಪರ್ಕದ ರಸ್ತೆಯು ಕೆಲವೊಂದು ಸಮಸ್ಯೆಗಳಿಂದ ಪ್ರಗತಿ ಕಾಣದೇ ಕುಂಠಿತವಾಗಿದೆ. ಪಂಚಾಯತ್‌ ಮತ್ತು ರೈಲ್ವೇ ಇಲಾಖೆಯ ಗುದ್ದಾಟದಿಂದ ಜನರು ಬವಣೆ ಪಡುವಂತಾಗಿದೆ. ರಸ್ತೆಯ ಪ್ರಗತಿ ಮರೀಚಿಕೆಯಾಗಿದೆ.

ಮೂಲ್ಕಿ ರೈಲು ನಿಲ್ದಾಣದ ಬಳಿಯ ಬೆಳ್ಳಾಯರು ರಸ್ತೆ ಹಲವು ಮನೆಗಳಿಗೆ ಸಂಪರ್ಕದ ರಸ್ತೆಯಾಗಿದೆ. ಗ್ರಾಮದ ಅನೇಕ ಕಡೆಗಳಲ್ಲಿ ನರೇಗಾ ಹಾಗೂ ಇನ್ನಿತರ ಯೋಜನೆಗಳಿಂದ ಸಣ್ಣ ರಸ್ತೆಯೂ ಸಹ ಕಾಂಕ್ರೀಟ್‌ ಕಾಮಗಾರಿಗೊಂಡು ಪ್ರಗತಿ ಕಂಡಿದ್ದರೇ ಬೆಳ್ಳಾಯರುವಿನ ಈ ರಸ್ತೆ ಮಾತ್ರ ಇಂದಿಗೂ ಮಣ್ಣು, ಜಲ್ಲಿಕಲ್ಲು, ಹೊಂಡ ಗುಂಡಿಗಳಿಂದ ಮಿಶ್ರತವಾಗಿದೆ.

ಸ್ಥಳೀಯರು ಪಂಚಾಯತ್‌ಗೆ ಮನವಿಗಳನ್ನು ನೀಡುತ್ತಾ ಬಂದರೂ ರೈಲ್ವೇ ಇಲಾಖೆಯ ಹಸ್ತಕ್ಷೇಪದಿಂದ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಪಂಚಾಯತ್‌ ಹೇಳಿಕೊಂಡಿದೆ.

ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಇಚ್ಛೆ ಪಂಚಾ ಯತ್‌ಗೆ ಇದೆ. ಆದರೆ ರಸ್ತೆಯಲ್ಲಿ ಒಂದು ಸಣ್ಣ ನೀರಿನ ಪೈಪ್‌ಲೈನ್‌ ಅಥವಾ ದಾರಿದೀಪ, ಚರಂಡಿ ನಿರ್ಮಿಸಲು ರೈಲ್ವೇ ಇಲಾಖೆ ಅನುಮತಿಗಾಗಿ ಮನವಿ ಮಾಡಿಕೊಂಡರೂ ಸಹ ರೈಲ್ವೇ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತದೆ. ಕಾರಣ ಇನ್ನೂ ಸ್ಪಷ್ಟಪಡಿಸುತ್ತಿಲ್ಲ. ಈ ಸಮಸ್ಯೆಯ ಚೆಂಡು ಇದೀಗ ಶಾಸಕರ ಅಂಗಳದಲ್ಲಿದೆ.

Advertisement

ಉತ್ರುಂಜೆಗೂ ಸಂಪರ್ಕ :

ಈ ರಸ್ತೆ ನೇರವಾಗಿ ಇಲ್ಲಿನ ಗೋಂಟು ಪ್ರದೇಶ, ಚಂದ್ರಮೌಳೇಶ್ವರ ದೇವಸ್ಥಾನ, ಕೊರಗರ ಕಾಲನಿಗೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆಯ ಮುಂದು ವರಿದ ಭಾಗವಾಗಿ ಉತ್ರುಂಜೆ ಭಾಗದಲ್ಲಿನ ನಿವಾಸಿಗಳು ಸುತ್ತಿಬಳಸಿ ಪಡುಪಣಂ ಬೂರಿಗೆ ತೆರಳಬೇಕಾದ ಅನಿವಾರ್ಯವಿದೆ.

ಸ್ಥಳೀಯ ನಿವಾಸಿ ಹಿರಿಯ ನಾಗರಿಕ ಭುಜಂಗ ಶೆಟ್ಟಿ ಅವರು ನೇರವಾಗಿ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಅನಂತರ ಸ್ವೀಕೃತಿ ಪತ್ರ ಬಂತೇ ವಿನಾ ಇಲಾಖೆಯಿಂದ ಸ್ಪಂದನೆ ದೊರೆತಿಲ್ಲ. ಇಲ್ಲಿ ಅಂಡರ್‌ಪಾಸ್‌ ರಚನೆಯಾದಲ್ಲಿ ಕೇವಲ 500 ಮೀ.ನ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಲುಪಬಹುದಾಗಿದೆ. ಪ್ರಸ್ತುತ ಸುಮಾರು 2 ಕಿ.ಮೀ. ದೂರದಿಂದ ಹೆದ್ದಾರಿ ಕ್ರಮಿಸಬೇಕಾಗಿದೆ.

ಇತರ ಸಮಸ್ಯೆಗಳೇನು? :

  • ಜ ಗ್ರಾಮದ ಸರ್ವೇ ನಂಬ್ರ 71ರಲ್ಲಿನ ಹಕ್ಕುಪತ್ರದ ಆರ್‌ಆರ್‌ಟಿ ಸಮಸ್ಯೆಯಿಂದ ವಸತಿ ನಿರ್ಮಾಣಕ್ಕೆ ಅಡಚಣೆಯಾಗಿದೆ.
  • ಕೊರಗರ ಕಾಲನಿಯಲ್ಲಿ ರಾಜ್ಯ ಸಚಿವರು ಗ್ರಾಮ ವಾಸ್ತವ್ಯ ಹೂಡಿ ಅವರು ನೀಡಿದ ಆಶ್ವಾಸನೆ ಈಡೇರಿಲ್ಲ.
  • ಬೆಳ್ಳಾಯರು-ಕಲ್ಲಾಪು ಪ್ರದೇಶದಲ್ಲಿ ಉಪ್ಪು ನೀರಿನ ಹಾನಿಯಿಂದ ಎಪ್ರಿಲ್‌-ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಇದ್ದು ಇಲ್ಲೊಂದು ಹಾಗೂ ಕೆಂಚನಕರೆ ಭಾಗದಲ್ಲಿ ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಆವಶ್ಯಕತೆ ಇದೆ.
  • ತೋಕೂರು-ಬೆಳ್ಳಾಯರು ಜಲಕದ ಕೆರೆಯ ಕಾಮಗಾರಿ ವೇಗ ಪಡೆಯಬೇಕು.
  • ಬೆಳ್ಳಾಯರುವಿನಲ್ಲಿ ನಿರ್ಮಿಸಲಿರುವ ತ್ಯಾಜ್ಯ ಸಂಗ್ರಹ ಘಟಕಕ್ಕೆ ಪರ-ವಿರೋಧದ ನಡುವೆ ಸೂಕ್ತ ಕಾಯಕಲ್ಪ ಬೇಕು.

 

 ನರೇಂದ್ರ ಕೆರೆಕಾಡು

Advertisement

Udayavani is now on Telegram. Click here to join our channel and stay updated with the latest news.

Next