ಇಲ್ಲಿಯವರೆಗೆ ಸಹನಟನಾಗಿ, ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ರಿಷಭ್ ಶೆಟ್ಟಿ ಈಗ ನಾಯಕ ನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, ರಿಷಭ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ “ಬೆಲ್ ಬಾಟಂ’ ಚಿತ್ರ ತೆರೆಗೆ ಬರುವ ಸನ್ನಾಹದಲ್ಲಿದೆ. ಈಗಾಗಲೇ ತನ್ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ, ಬಿಡುಗಡೆಯ ತಯಾರಿಯಲ್ಲಿರುವ ಚಿತ್ರತಂಡ, ಚಿತ್ರದ ಪ್ರಮೋಷನ್ ಕೆಲಸಗಳನ್ನು ನಡೆಸುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಚಿತ್ರದ ಟೀಸರ್, ವೀಡಿಯೋ ಸಾಂಗ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರದ ಮೊದಲ ಟ್ರೇಲರ್‌ನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡ “ಬೆಲ್ ಬಾಟಂ’ ಚಿತ್ರದ ಮೊದಲ ಟ್ರೇಲರ್‌ನ್ನು ಹೊರತಂದಿದೆ. ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ಚಿತ್ರತಂಡ, “ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್, ಟೀಸರ್ ಹಾಗೂ ಒಂದು ವೀಡಿಯೋ ಸಾಂಗ್‌ಗೆ ನೋಡುಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಚಿತ್ರದ ಮೇಲೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರದಲ್ಲಿನ ಪಾತ್ರ ವರ್ಗಗಳು, ಅವರ ವೇಷ-ಭೂಷಣ, ಹಿನ್ನೆಲೆ ಸಂಗೀತ, ಕಥೆ ನಿರೂಪಣೆ ಹೀಗೆ ಪ್ರತಿಯೊಂದೂ ರೆಟ್ರೋ ಶೈಲಿಯಲ್ಲಿದೆ. ಚಿತ್ರ ಕೂಡ ನೋಡುಗರನ್ನು 80 ದಶಕಕ್ಕೆ ಕರೆದೊಯ್ಯಲಿದೆ. ಪ್ರೇಕ್ಷಕರ ಮುಂದೆ 80ರ ದಶಕವನ್ನು ತರಲು ಚಿತ್ರತಂಡ ಎಷ್ಟು ಪರಿಶ್ರಮ ಪಟ್ಟಿದೆ ಎಂಬುದು ಚಿತ್ರವನ್ನು ತೆರೆಮೇಲೆ ನೋಡಿದರೆ ಗೊತ್ತಾಗುತ್ತದೆ.
ಕನ್ನಡ ಪ್ರೇಕ್ಷಕರಿಗೆ ಇದೊಂದು ಹೊಸ ಅನುಭವಕೊಟ್ಟು ಪ್ರತಿ ಹಂತದಲ್ಲೂ ರಂಜಿಸಲಿದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿತು. ಇನ್ನು ಟ್ರೇಲರ್‌ನಲ್ಲಿ ಹರಿಕಥೆಯ ಮೂಲಕ ಚಿತ್ರವನ್ನು ವಿವರಿಸಿರುವ ಶೈಲಿ ಗಮನ ಸೆಳೆಯುವಂತಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಟ್ರೇಲರ್‌ನ್ನು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ್ದಾರೆ. “ಬೆಲ್ ಬಾಟಂ’ ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ನಟ ರಿಷಭ್ ಶೆಟ್ಟಿ ಡಿಟೆಕ್ಟಿವ್ ದಿವಾಕರನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ರಿಷಭ್‌ಗೆ ಜೋಡಿಯಾಗಿ ಹರಿಪ್ರಿಯಾ ಹೆಜ್ಜೆ ಹಾಕಿದ್ದಾರೆ.
ಉಳಿದಂತೆ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಪಿ.ಡಿ ಸತೀಶ್, ಶಿವಮಣಿ ಮೊದಲಾದ ಕಲಾವಿದರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಟಿ.ಕೆ.ದಯಾನಂದ್ ಕಥೆ ಸಿನಿಮಾದಲ್ಲಿದೆ. ಅಂದಹಾಗೆ, ಎಲ್ಲಾ ಅದುಕೊಂಡಂತೆ ನಡೆದರೆ, ಇದೇ ಜ. 18ಕ್ಕೆ “ಬೆಲ್ ಬಾಟಂ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ ಚಿತ್ರತಂಡ.