ಬಳ್ಳಾರಿ: ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣ, ತಾರಾನಾಥ್ ಸರ್ಕಾರಿ ಆಯುರ್ವೇದಿಕ್ ಕಾಲೇಜು ಆವರಣದಲ್ಲಿ ಶಾಸಕ ಜಿ. ಸೋಮಶೇಖರ ರೆಡ್ಡಿಯವರು ಸಸಿನೆಟ್ಟು ನೀರುಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿದರು.
ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಇಲಾಖೆ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಸಹಯೋಗದಲ್ಲಿ ನಗರದ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿಯವರು ಸಸಿನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬಳ್ಳಾರಿ ನಗರದಲ್ಲಿ ಅತಿಹೆಚ್ಚು ಬಿಸಿಲು ದಾಖಲಾಗುತ್ತದೆ. ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಬಳ್ಳಾರಿಯನ್ನು ಮಲೆನಾಡಿನಂತೆ ಮಾಡುವಲ್ಲಿ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಅವರು ಕೋರಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ವಿವಿಧ ಕಡೆಗಳಲ್ಲಿ ಸಸಿಗಳನ್ನು ನಾಟಿ ಮಾಡಲಾಗುವುದು. ನಗರದಲ್ಲಿ ಈ ಮೊದಲಿಗಿಂತ ರಸ್ತೆ ಬದಿ, ಖಾಲಿ ನಿವೇಶನ, ಉದ್ಯಾನವನಗಳಲ್ಲಿ ಹೆಚ್ಚು ಗಿಡ ಮರಗಳನ್ನು ಬೆಳೆಯಲಾಗಿದೆ. ಆದರೂ, ನಗರದಲ್ಲಿ ಬಿಸಿಲಿನ ತಾಪಮಾನ ಇನ್ನಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಸಸಿಗಳನ್ನು ನೆಟ್ಟು ಅವನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರದ್ದಾಗಿದೆ ಎಂದವರು ಸಲಹೆ ನೀಡಿದರು.
ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತ ಈರಪ್ಪ ಬಿರಾದರ, ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಕೆ. ರವಿಶಂಕರ್, ಡಾ| ರಮೇಶ್ ಕುಮಾರ್, ಜಿಲ್ಲಾ ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎನ್.ಮರಿಸ್ವಾಮಿ ರೆಡ್ಡಿ, ಅನುದಾನ ರಹಿತ ಕಾಲೇಜುಗಳ ಒಕ್ಕೂಟದ ಅಧ್ಯಕ್ಷ ಮನ್ನೆ ಶ್ರೀನಿವಾಸಲು, ಕನಕ ದುರ್ಗಮ್ಮ ದೇವಸ್ಥಾನದ ಪ್ರಧಾನ ಧರ್ಮಕರ್ತ ಪೂಜಾರಿ ಗಾದೆಪ್ಪ, ಪಾಲಿಕೆ ಸದಸ್ಯರಾದ ಚಂದ್ರಕಳಾ, ಶ್ರೀನಿವಾಸ್ ಮೋತ್ಕರ್, ಮಲ್ಲನಗೌಡ, ಬಿಇಒ ಸಿದ್ದಲಿಂಗಸ್ವಾಮಿ, ಅರಣ್ಯಾಧಿಕಾರಿಗಳು ಸೇರಿದಂತೆ ಇತರರು ಇದ್ದರು.