Advertisement

ಮಹಿಳಾ ವಿಮುಕ್ತಿಗೆ ಹೋರಾಟ ಅನಿವಾರ್ಯ

01:14 PM Mar 09, 2020 | Naveen |

ಬಳ್ಳಾರಿ: ಮಹಿಳೆಯರ ವಿಮುಕ್ತಿಗೆ ಇಂದಿಗೂ ಸಹ ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾದ ಸ್ಥಿತಿ ಇದೆ ಎಂದು ಎಐಎಂಎಸ್‌ಎಸ್‌ನ ಜಿಲ್ಲಾಧ್ಯಕ್ಷೆ ಎ.ಶಾಂತಾ ಹೇಳಿದರು.

Advertisement

ಎಐಎಂಎಸ್‌ಎಸ್‌ ಸಂಸ್ಥೆಯಿಂದ ನಗರದ ಐಎಂಎ ಹಾಲ್‌ ನಲ್ಲಿ ಹಮ್ಮಿಕೊಂಡ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶತಮಾನಗಳ ಹಿಂದೆ ಪ್ರತಿರೋಧದ ಗಟ್ಟಿ ಧ್ವನಿಯ ಪ್ರತೀಕವಾಗಿ ನ್ಯೂಯಾರ್ಕ್‌ ನಗರದ ಜವಳಿ ಕಾರ್ಖಾನೆಯ ಸಾವಿರಾರು ಹೆಣ್ಣುಮಕ್ಕಳು ದುಡಿತದ ಅವಧಿಯ ಕಡಿತ, ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಹಾಗೂ ಇನ್ನೂ ಅನೇಕ ಬೇಡಿಕೆಗಳೊಂದಿಗೆ ಹೋರಾಟದ ಕಣಕ್ಕೆ ಇಳಿದರು.

ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ ದುಡಿಯುವ ಸುಮಾರು 20ರಿಂದ 30 ಸಾವಿರ ಮಹಿಳಾ ಕಾರ್ಮಿಕರು ಕೊರೆಯುವ ಚಳಿ ಲೆಕ್ಕಿಸದೆ ಸತತವಾಗಿ ಹದಿಮೂರು ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು, ಲಾಠಿ-ಗುಂಡೇಟನ್ನು ಎದುರಿಸಿ ಕೆಲವೊಂದು ಹಕ್ಕುಗಳನ್ನು ಗಳಿಸಿಕೊಂಡರು. ಆ ದಿನವೇ ಮಾರ್ಚ್‌ 8 ನಮ್ಮೆಲ್ಲರಿಗೂ ಇಂದಿಗೂ ಸ್ಪೂರ್ತಿದಾಯಕವಾಗಿದೆ. ಮಹಿಳೆಯರ ವಿಮುಕ್ತಿಗಾಗಿ ನಾವೆಲ್ಲರೂ ಹೋರಾಡೋಣ ಎಂದರು.

ಐಐಯುಟಿಯುಸಿಯ ಜಿಲ್ಲಾಧ್ಯಕ್ಷರಾದ ಆರ್‌. ಸೋಮಶೇಖರಗೌಡ ಅವರು ಮಾತನಾಡುತ್ತಾ, 1910ರಲ್ಲಿ ಡೆನ್ಮಾರ್ಕನ ಕೊಪೆನ್‌ಹೆಗನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದ ಸಂದರ್ಭದಲ್ಲಿ ಸಮಾಜವಾದಿ ನಾಯಕಿಯಾಗಿದ್ದ ಕ್ಲಾರಾ ಜೆಟ್ಕಿನ್‌ “ಮಾರ್ಚ್‌ 8’ನ್ನು ವಿಶ್ವ ಮಹಿಳಾ ದಿನವಾಗಿ ಆಚರಿಸಬೇಕು ಎಂದು ಕರೆ ನೀಡಿದರು ಎಂದರು.

ಸಮಾಜದಲ್ಲಿ ಬೇರು ಬಿಟ್ಟಂತಹ ಪೂರ್ವಗ್ರಹಗಳ ವಿರುದ್ಧ ಹೋರಾಡಿ, ಪ್ರಜಾತಾಂತ್ರಿಕ ವಿಚಾರಗಳ ಆಧಾರದ ಮೇಲೆ ಹೊಸ ಮೌಲ್ಯಪ್ರಜ್ಞೆ ಸ್ಥಾಪಿಸಲು ಹೋರಾಟದ ಅಲೆಯನ್ನು ಎಬ್ಬಿಸಿದ ಈಶ್ವರಚಂದ್ರ ವಿದ್ಯಾಸಾಗರರು, ಸಾವಿತ್ರಿಬಾಯಿ ಫುಲೆ, ಪಂಡಿತ ತಾರಾನಾಥ, ಕುದ್ಮುಲ್‌ ರಂಗರಾವ್‌ ಹಾಗೂ ಇನ್ನಿತರರ ಆಶಯಗಳನ್ನು ನನಸು ಮಾಡಬೇಕಿದೆ ಎಂದರು.

Advertisement

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್‌ ಮಾತನಾಡಿ, ಇಂದು ಕೆಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದರೂ, ಒಟ್ಟಾರೆ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಮಹಿಳಾ ಸಮುದಾಯದ ನೈಜ ಕನಸುಗಳಾದ ಸ್ವಾತಂತ್ರ್ಯ , ಸಮಾನತೆ ಮತ್ತು ಗೌರವಯುತ ಜೀವನ ನನಸಾಗದೆಯೇ ಉಳಿದಿದೆ ಎಂದರು.

ಆಶಾ, ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಪಡೆಯುತ್ತಿರುವ ಆರ್ಥಿಕ ಪ್ರತಿಫಲ ಅತ್ಯಂತ ನಿಕೃಷ್ಟವಾಗಿದೆ. ಇವರು ಸಲ್ಲಿಸುವ ಸೇವೆ ಹೆಸರಿನ “ದುಡಿಮೆಗೆ’, ಗರಿಷ್ಠ ಶ್ರಮ ಮತ್ತು ಸಮಯ ವಿನಿಯೋಗವಾದರೂ ಈ ಹೆಣ್ಣುಮಕ್ಕಳು ಕಾರ್ಮಿಕರಲ್ಲ. ಇವರುಗಳನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಜೀವನ ನಡೆಸಲು ಗೌರವಧನ-ಪ್ರೋತ್ಸಾಹಧನದ ಬದಲಾಗಿ ಕನಿಷ್ಟ ಮಾಸಿಕ ವೇತನವನ್ನು ಸರ್ಕಾರಗಳು ನೀಡಬೇಕಾಗಿದೆ ಎಂದರು.

ಎಐಎಂಎಸ್‌ಎಸ್‌ನ ಜಿಲ್ಲಾ ಕಾರ್ಯದರ್ಶಿ ಈಶ್ವರಿ ಅಧ್ಯಕ್ಷತೆ ವಹಿಸಿದ್ದರು. ಗೀತಾ, ಪದ್ಮಾ, ಗಿರಿಜ, ವಿದ್ಯಾ, ಭಾರ್ಗವಿ, ರೇಷ್ಮಾ ಸೇರಿದಂತೆ ಹಲವಾರು ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next