ಬಳ್ಳಾರಿ: ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯಿತಿಯಲ್ಲಿನ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಸಂಡೂರು ಶಾಸಕ ಈ. ತುಕಾರಾಂ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕುಡಿತಿನಿ ಪಪಂ ಶುದ್ಧೀಕರಣ ಘಟಕದಲ್ಲಿ ಅಳವಡಿಸಿರುವ ಮೈಕ್ರೋ ಸ್ಕ್ರೀನ್ ಫಿಲ್ಟರ್ ಜಿಲ್ಲೆಯಲ್ಲೇ ಎರಡನೇಯದ್ದಾಗಿದೆ. ಮೊದಲನೆಯದ್ದು ಹೊಸಪೇಟೆಯಲ್ಲಿ ಅಳವಡಿಸಲಾಗಿದೆ. ಸುಮಾರು 1.83 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಜೂನ್ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳಿಕ ಪಟ್ಟಣದ ಪ್ರತಿ ಮನೆಗೆ ಶುದ್ಧ ಕುಡಿವ ನೀರಿನ ಸರಬರಾಜು ಮಾಡಲಾಗುವುದು ಎಂದವರು ತಿಳಿಸಿದರು.
ಇದೇ ವೇಳೆ ಕೆಲ ತಿಂಗಳಿಂದ ಸ್ಥಗಿತಗೊಂಡಿರುವ ರಾಷ್ಟ್ರೀಯ ಹೆದ್ದಾರಿ 63 ಕುರಿತು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರೊಂದಿಗೆ ಚರ್ಚಿಸಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನ ಸೆಳೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಲಾಗುವುದು ಎಂದರು.
ನಂತರ ಕುಡಿತಿನಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ತುಕಾರಾಮ್, ಅಲ್ಲಿನ ಸಿಬ್ಬಂದಿ, ರೋಗಿಗಳಿಗೆ ಒಂದು ಸಾವಿರ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ವಿತರಿಸಿದರು. ಸಾರ್ವಜನಿಕರು ಸುಖಾಸುಮ್ಮನೆ ಹೊರಗಡೆ ತಿರುಗಾಡದೇ ಮನೆಯಲ್ಲೇ ಇದ್ದು ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸಹಕರಿಸಬೇಕು. ತ್ವರಿತಗತಿಯಲ್ಲಿ ಕಂಪ್ಲಿ ರಸ್ತೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ (ಸಿ.ಹೆಚ್.ಸಿ) ಸ್ಥಾಪಿಸಲಾಗುವುದು ಎಂದು ಹೇಳಿದರು.
ಕೊರೊನಾ ತಡೆಗಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೆ.ಎಸ್.ಎಲ್. ಸ್ವಾಮಿ, ಪಿಎಸ್‌ಐ ಮಹ್ಮದ್ ರಫೀಕ್, ಪಿಎಸ್‌ಐ ಮಹ್ಮದ್ ರಫೀಕ್, ಆಸ್ಪತ್ರೆ, ಪೊಲೀಸ್ ಸಿಬ್ಬಂದಿ ಇದ್ದರು.