ಬಳ್ಳಾರಿ: ಏ.23ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಜತೆಗೆ ಸುತ್ತಮುತ್ತಲಿರುವವರನ್ನು ಮತದಾನ ಮಾಡುವಂತೆ ಪ್ರೇರೇಪಿಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ| ಹನುಮಂತಪ್ಪ ಹೇಳಿದರು. ನಗರದ ಎಎಸ್‌ಎಂ ಮಹಿಳಾ ಸ್ಮಾರಕ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮದು ರಾಜರ ಅಡಳಿತದ ಪ್ರಭುತ್ವವಲ್ಲ, ಪ್ರಜೆಗಳ ಆಡಳಿತದ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ರಾಜರಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸುಭದ್ರ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ಭಾಗಿಯಾಗಬೇಕು. ಮತದಾನವೊಂದು ರಾಷ್ಟ್ರೀಯ ಹಬ್ಬ, ಯಾವುದೇ ಭೇದ ಭಾವವಿಲ್ಲದೆ, ಆಮಿಷ ಆಕಾಂಕ್ಷೆಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು ಎಂದು ಕೋರಿದರು.
ಏ.23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತವನ್ನು ಹಾಕಿ ಮತ್ತು ಹಾಕಿಸಬೇಕು. ಏಕೆಂದರೆ ದೇಶ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಾಡ್ಯ ರಾಗಬೇಕೆಂದರೆ ಸುಭದ್ರ ವಾದ ಪ್ರಜಾಪ್ರಭುತ್ವ ಬೇಕು. ಇಂತಹ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ತಾವೆಲ್ಲರೂ ಭಾಗಿಯಾಗಬೇಕು ಎಂದರು. ಕಾಲೇಜಿನ ಪ್ರಾಚಾರ್ಯ ಡಾ| ಎಸ್.ವೈ.ತಿಮ್ಮಾರೆಡ್ಡಿ ಮಾತನಾಡಿ, ಮತದಾನ ಮಾರಾಟದ ಸರಕು ಅಲ್ಲ, 5 ವರ್ಷಕೊಮ್ಮೆ ಸಿಗುವ ಮತದಾನದ ಅವಕಾಶವನ್ನು ಮಾರಿಕೊಳ್ಳದೇ ವಿವೇಚನಾಯುಕ್ತವಾಗಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಿ ದೇಶ ಬಲಾಡ್ಯವಾಗಿ ಬೆಳೆಯಲು ಸಹಕರಿಸಬೇಕು ಎಂದರು.
ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಯು. ಸೋಮಶೇಖರ್ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಿ.ಮಲ್ಲಿಕಾರ್ಜುನ ಸ್ವಾಗತಿಸಿದರು, ಎನ್. ಎಸ್.ಎಸ್. ಅಧಿಕಾರಿ ಯು.ಚಂದ್ರಶೇಖರ್ ಸುಂದರಮೂರ್ತಿ, ಮಂಗಳ ಹಾಗೂ ಇತರರು ಇದ್ದರು. ಬಳಿಕ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ಸುಮಾರು
200 ವಿದ್ಯಾರ್ಥಿನಿಯರು ಭಾಗಿಯಾಗಿ ಜಿಲ್ಲಾ ಮತದಾನ ಸಾಕ್ಷರತಾ ಸಮಿತಿ ಕೊಟ್ಟಿರುವ ಟೋಪಿಯನ್ನು ಧರಿಸಿ ಗಾಂಧಿನಗರ, ಕಪ್ಪಗಲ್ ರಸ್ತೆ, ಸಂಗನಕಲ್ಲು ರಸ್ತೆಗಳ ಮೂಲಕ ಪ್ರತಿ ಮನೆ ಮನೆಗೆ ಭೇಟಿಕೊಟ್ಟು ಮತದಾನದ ಭಿತ್ತಿಪತ್ರವನ್ನು ಕೊಟ್ಟು ತಪ್ಪದೇ ಮತವನ್ನು ಚಲಾಯಿಸಿ ಎಂದು ಘೋಷಣೆ ಕೂಗುತ್ತಾ ಸಂಚರಿಸಿದರು.
ನಮ್ಮದು ರಾಜರ ಅಡಳಿತದ ಪ್ರಭುತ್ವವಲ್ಲ, ಪ್ರಜೆಗಳ ಆಡಳಿತದ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ರಾಜರಾಗಬೇಕು. ಅದಕ್ಕಾಗಿ
ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸುಭದ್ರ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ಭಾಗಿಯಾಗಬೇಕು. ಮತದಾನವೊಂದು ರಾಷ್ಟ್ರೀಯ ಹಬ್ಬ, ಯಾವುದೇ ಭೇದ ಭಾವವಿಲ್ಲದೆ, ಆಮಿಷ ಆಕಾಂಕ್ಷೆಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಬೇಕು.
.ಡಾ| ಹನುಮಂತಪ್ಪ,
ಪಾಲಿಕೆ ಆರೋಗ್ಯ ಅಧಿಕಾರಿ