Advertisement

ಸಂವಿಧಾನಬದ್ಧ ಹಕ್ಕನ್ನು ಯೋಗ್ಯರಿಗೆ ಚಲಾಯಿಸಿ

12:25 PM Jan 26, 2020 | Naveen |

ಬಳ್ಳಾರಿ: ಮತದಾನ ಸಂವಿಧಾನ ನೀಡಿರುವ ಹಕ್ಕು. ಅದನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಯೋಗ್ಯರಿಗೆ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು. ಆ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕಾರಣೀಕರ್ತರಾಗಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್‌ ನ್ಯಾಯಾಧೀಶ ಅರ್ಜುನ್‌ ಮಲ್ಲೂರ್‌ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾರತ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿ ಸಮುದಾಯಕ್ಕೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು. ನಮ್ಮ ಜನಪ್ರತಿನಿಧಿ ಗಳನ್ನು ನಾವೇ ಆಯ್ಕೆಮಾಡಿಕೊಳ್ಳುವುದಕ್ಕೆ ಸಂವಿಧಾನ ಕಲ್ಪಿಸಿರುವ ಅಪೂರ್ವ ಅವಕಾಶ ಈ ಮತ. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿ ಮತಚಲಾಯಿಸಿ ನಂತರ ನಮ್ಮ ಜನಪ್ರತಿನಿಧಿಗಳು ಕೆಲಸ ಮಾಡುತ್ತಿಲ್ಲ ಎಂದು ಪೇಚಾಡಿಕೊಳ್ಳದೇ, ಮತಚಲಾಯಿಸುವ ಸಂದರ್ಭದಲ್ಲಿಯೇ ಅತ್ಯಂತ ವಿವೇಚನಾಯುಕ್ತವಾಗಿ ಚಲಾಯಿಸಬೇಕು ಎಂದರು.

ಕಳೆದ ಸಾರ್ವತ್ರಿಕ ಚುನಾವಣೆ ನೋಡಿದಾಗ ಅತಿ ಹೆಚ್ಚು ಯುವ ಮತದಾರರಿದ್ದುದು ಕಂಡುಬಂದಿದೆ. ದೇಶ ಕಟ್ಟುವ ಪ್ರಮುಖ ಜವಾಬ್ದಾರಿ ಯುವಜನಾಂಗದ ಮೇಲಿದ್ದು, ಅದನ್ನು ತಾವು ಸಮರ್ಥವಾಗಿ ನಿಭಾಯಿಸಬೇಕು ಎಂದರು.

ವಿಶೇಷ ಉಪನ್ಯಾಸ ನೀಡಿದ ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಶ್ರೀನಿವಾಸಮೂರ್ತಿ, ಮತದಾನದ ಮಹತ್ವ, ಅದರ ಇತಿಹಾಸ ಸೇರಿದಂತೆ ಇನ್ನಿತರೆ ಪ್ರಮುಖ ವಿಷಯಗಳ ಕುರಿತು ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಎಂ.ಮಂಜುನಾಥ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಮತದಾನದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಮತದಾನ ಎಂಬುದು ಅತ್ಯಮೂಲ್ಯವಾದ ಹಕ್ಕಾಗಿದೆ. ಭವಿಷ್ಯದ ಪ್ರಜೆಗಳಾಗಿರುವ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಮತ್ತು ಯೋಗ್ಯರಿಗೆ ಚಲಾಯಿಸಬೇಕು ಸಲಹೆ ನೀಡಿದರು.

ಜಿಪಂ ಮುಖ್ಯಲೆಕ್ಕಾಧಿ ಕಾರಿ ಜಾನಕಿರಾಮ್‌, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ, ಪ್ರೊ| ಜನಾರ್ದನರೆಡ್ಡಿ, ಡಿಡಿಪಿಐ ರಾಮಪ್ಪ, ಪುರಸಭೆ ತಹಶೀಲ್ದಾರ್‌ ವಿಶ್ವಜಿತ್‌ ಮೆಹತಾ, ಚುನಾವಣಾ ತಹಶೀಲ್ದಾರ್‌ ಹೊನ್ನಮ್ಮ, ಚುನಾವಣಾ ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು. ವಿನೋದ್‌ ನಿರೂಪಿಸಿದರು.  ಇದೇ ಸಂದರ್ಭದಲ್ಲಿ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸದಾಗಿ ನೋಂದಾಯಿತರಾದ ಯುವಮತದಾರರಿಗೆ ಗುರುತಿನ ಚೀಟಿಗಳನ್ನು ಗಣ್ಯರು ವಿತರಿಸಿದರು. ಉತ್ತಮ ಬಿಎಲ್‌ಒ ಆಗಿ ಕಾರ್ಯನಿರ್ವಹಿಸಿದವರಿಗೂ ಇದೇ ಸಂದರ್ಭದಲ್ಲಿ ಪ್ರಶಂಸಾ ಪತ್ರ ವಿತರಿಸಲಾಯಿತು. ಇದಕ್ಕೂ ಮುಂಚೆ ಸರಳಾದೇವಿ ಕಾಲೇಜಿನಿಂದ ವಿದ್ಯಾರ್ಥಿಗಳ ಬೃಹತ್‌ ಜಾಥಾ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next