ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆಯ ಖದರು ದಿನೇದಿನೇ ರಂಗೇರುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದ್ದು ಒಬ್ಬರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದರೆ, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನೇ ನಿರಾಕರಿಸುವ ಮೂಲಕ ಪರೋಕ್ಷವಾಗಿ ಆಂತರಿಕ ಬಂಡಾಯಕ್ಕೆ ನಾಂದಿ ಹಾಡಿರುವುದು ಕುತೂಹಲ ಮೂಡಿಸಿದೆ.
ಹೊಸಪೇಟೆ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ವಿಜಯನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅನರ್ಹ ಶಾಸಕರಿಗೆ ಟಿಕೆಟ್ ಹಂಚಿಕೆ ವೇಳೆ ಆಕಾಂಕ್ಷಿಗಳಿಂದ ಬಂಡಾಯದ ಬಿಸಿ ನಿರೀಕ್ಷಿಸಿದ್ದ ಸಿಎಂ ಯಡಿಯೂರಪ್ಪ ಉಪಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳಲ್ಲಿನ ಪ್ರಬಲ ಟಿಕೆಟ್ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಂಡಾಯ ಶಮನಗೊಳಿಸಿದ್ದರು.
ಅಂತೆಯೇ ಗವಿಯಪ್ಪರಿಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಇದನ್ನು ನಿರಾಕರಿಸಿದ್ದ ಗವಿಯಪ್ಪ, ಈಗ ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿಯನ್ನೂ ನಿರಾಕರಿಸಿರುವುದು ಗಮನಾರ್ಹ. ಬಿಜೆಪಿಯಿಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ಹಾಲಪ್ಪ ಆಚಾರ್, ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ನಾರಾಯಣ ಸಾ ಬಾಂಡಗೆ ಅವರನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗಿತ್ತು. ಆದರೆ ಇಷ್ಟು ಜನರ ಪೈಕಿ ಗವಿಯಪ್ಪ ಮಾತ್ರ ಜವಾಬ್ದಾರಿ ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಮುಂದಿನ ದಿನಗಳಲ್ಲಿ ಅವಕಾಶಗಳು ಸಿಗಲಿವೆ ಎಂದು ಯಡಿಯೂರಪ್ಪ ಅವರೇ ಮನವಿ ಮಾಡಿದ ಹಿನ್ನೆಲೆಯಲ್ಲಿ ಉಪಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮದೇ ಆದ ಅಸ್ತಿತ್ವ, ಸ್ವಾಭಿಮಾನ ಹಾಗೂ ಸಿದ್ಧಾಂತಗಳಿವೆ. ಜನರಿಗೆ ಒಳ್ಳೆಯದಾಗಲಿದೆ ಎಂದರೆ ಅದಕ್ಕಾಗಿ ಹೋರಾಟ ಮಾಡುತ್ತೇವೆ ಹೊರತು ಅಧಿಕಾರ, ಸ್ವಾರ್ಥ ರಾಜಕೀಯ ಮಾಡಲ್ಲ. ಎನ್ನುವುದರ ಮೂಲಕ ಚುನಾವಣೆ ಉಸ್ತುವಾರಿಯನ್ನು ನಿರಾಕರಿಸಿ ಪರೋಕ್ಷವಾಗಿ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಟ್ಟು ಉಪ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ಪಕ್ಷದಲ್ಲಿ ನನ್ನನ್ನು ಗುರುತಿಸಿ ಉಪಚುನಾವಣೆ ಉಸ್ತುವಾರಿ ಜವಾಬ್ದಾರಿ ನೀಡಿದ್ದಕ್ಕೆ ಆಭಾರಿಯಾಗಿದ್ದೇನೆ. ನಮಗೂ ಸ್ವಾಭಿಮಾನವಿದೆ. ಕ್ಷೇತ್ರದಲ್ಲಿ ನಮ್ಮದೇ ಆದ ಅಸ್ತಿತ್ವ ಉಳಿಸಿಕೊಂಡಿದ್ದೇವೆ. ಚುನಾವಣಾ ಉಸ್ತುವಾರಿ ನಿರಾಕರಿಸಿದ್ದೇನೆ. ಸದ್ಯದ ಮಟ್ಟಿಗೆ ಪಕ್ಷದಲ್ಲೇ ಮುಂದುವರಿಯಬೇಕೆಂದು ನಿರ್ಧರಿಸಿದ್ದೇನೆ. ಡಿ. 4ರಂದು ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ.
ಎಚ್.ಆರ್.ಗವಿಯಪ್ಪ,
ಮಾಜಿ ಶಾಸಕರು, ಹೊಸಪೇಟೆ