ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಅಂತಾರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಈ ಬಾರಿಯೂ ಮುಂಗಾರು ಹಂಗಾಮು ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದೆ.
ಜುಲೈ ತಿಂಗಳು ಕಳೆಯುತ್ತಿದ್ದು, ಈ ವರೆಗೂ ಜಲಾನಯನ ಪ್ರದೇಶದಲ್ಲಿ ಸಮರ್ಪಕವಾಗಿ ನಿರಂತರ ಮಳೆಯಾಗದ್ದರಿಂದ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದ ನೀರು ಹರಿದು ಬಂದಿಲ್ಲ. ಅಲ್ಲದೆ ಒಳಹರಿವಿನ ಪ್ರಮಾಣವೂ ಕುಸಿದಿದ್ದು, ಮಳೆ ಬಾರದಿದ್ದಲ್ಲಿ ಸಮಸ್ಯೆ ಉಲ್ಬಣಗೊಳ್ಳಲಿದೆ.
ತುಂಗಭದ್ರಾ ಜಲಾಶಯ ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳ 6 ಜಿಲ್ಲೆಗಳ ಒಟ್ಟು 12 ಲಕ್ಷ ಎಕರೆಗೂ ಹೆಚ್ಚು ಜಮೀನುಗಳಿಗೆ ಮತ್ತು ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಜಲಾನಯನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ತುಂಗಾ ಜಲಾಶಯದಿಂದಲೂ ನದಿಗೆ ಹರಿದುಬರುವ ನೀರಿನ ಪ್ರಮಾಣ ಕುಸಿದಿದೆ. ಜುಲೈ ತಿಂಗಳು ಮುಗಿಯುತ್ತಿದ್ದರೂ ಜಲಾಶಯಕ್ಕೆ ಗರಿಷ್ಠ ಪ್ರಮಾಣದ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಈ ಬಾರಿ ಮುಂಗಾರು ಬೆಳೆಗೆ ಜಲಾಶಯದಿಂದ ನೀರು ದೊರಕುವುದು ಅನುಮಾನ ಎನ್ನಲಾಗುತ್ತಿದ್ದು ರೈತರನ್ನು ಆತಂಕಕ್ಕೀಡು ಮಾಡಿದೆ.
60-70 ಟಿಎಂಸಿ ಇದ್ದರೆ ಭತ್ತಕ್ಕೆ ನೀರು: ಮೂರು ಜಿಲ್ಲೆಗಳಲ್ಲಿ ಬೆಳೆಯಲಾಗುವ ಭತ್ತಕ್ಕೆ ಕನಿಷ್ಠ 70ರಿಂದ 80 ಟಿಎಂಸಿ ನೀರು ಬೇಕಾಗಲಿದ್ದು, ಕನಿಷ್ಠ 60ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾದಾಗ ಭತ್ತಕ್ಕೆ ನೀರು ಕೊಡಲಾಗುತ್ತದೆ ಎಂದು ಜಲಾಶಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮೊದಲ ಬೆಳೆಗೇ ನೀರಿಲ್ಲ: ತುಂಗಭದ್ರಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಸುರಿಯುವ ನಿರೀಕ್ಷೆಯಿದ್ದರೂ, ಗಾಳಿಗೆ ಮೋಡಗಳು ಚದುರಿದ್ದರಿಂದ ಮುಂಬೈ, ಗುಜರಾತ್‌ನಲ್ಲಿ ನಿರಂತರ ಮಳೆ ಸುರಿದಿದೆ. ಈ ವರೆಗೆ ಇದ್ದ ಎಲ್ಲ ನಿರೀಕ್ಷೆಗಳು ಹುಸಿಯಾಗಿದ್ದು, ಇದೀಗ ಜುಲೈ 1 ರಿಂದ ಇನ್ನೂ ಎರಡು ಮಳೆ ಸುರಿಯುವ ನಿರೀಕ್ಷೆಯಿದೆ.ಅವೂ ಕೈಕೊಟ್ಟರೆ, ಮೊದಲನೇ ಬೆಳೆಗೆ ನೀರು ಹರಿಸುವುದು ಕಷ್ಟವಾಗಲಿದೆ.