ಬಳ್ಳಾರಿ: ಕಳೆದ ಎರಡು ವರ್ಷಗಳ ಹಿಂದಷ್ಟೇ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ವಿವಿಧ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿದ್ದ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಇದೀಗ ಮತ್ತೂಮ್ಮೆ ಆ ಪ್ರಯತ್ನಕ್ಕೆ ಮುಂದಾಗಿದೆ. 2018ರಲ್ಲಿ 12ನೇ ಸ್ಥಾನಕ್ಕೇರುವ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದ್ದ ಬಳ್ಳಾರಿ ಜಿಲ್ಲೆ ಇದೀಗ ಮೊದಲ 10ರೊಳಗಿನ ಸ್ಥಾನಕ್ಕೆ ಗುರಿಯಿಟ್ಟಿದೆ.
ಗಣಿನಾಡು ಬಳ್ಳಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತೀರಾ ಹಿಂದುಳಿದಿತ್ತು. ಪ್ರತಿ ವರ್ಷ 20ಕ್ಕೂ ಮೇಲೆ, 30ರೊಳಗಿನ ಸ್ಥಾನಕ್ಕೆ ಸೀಮಿತವಾಗುತ್ತಿತ್ತು. ಇದನ್ನು ಮನಗಂಡಿದ್ದ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ 2017ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಂದಾಗಿತ್ತು. ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳುವುದು, ವಿದ್ಯೆಯಲ್ಲಿ ಹಿಂದುಳಿದಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ನೀಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಜತೆಗೆ ಪರೀಕ್ಷೆಯಲ್ಲಿ ಶೇ.100ಕ್ಕೆ 100 ರಷ್ಟು ಫಲಿತಾಂಶ ಪಡೆದ ಶಾಲೆಯ ಶಿಕ್ಷಕರು ಮತ್ತು ತಾಲೂಕಿಗೆ ಅತಿಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಪ್ರವಾಸಿ ಭಾಗ್ಯ ಕಲ್ಪಿಸಲಾಗಿತ್ತು.
2017ರಲ್ಲಿ ಇಷ್ಟೆಲ್ಲ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದ ಹಿನ್ನೆಲೆಯಲ್ಲಿ 2018ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಬಾರಿಗೆ ಶೇ.82.23 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲೇ 12ನೇ ಸ್ಥಾನಕ್ಕೇರಿತ್ತು. 2017ರಲ್ಲಿ 17ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ 2018ರಲ್ಲಿ ಏಕಾಏಕಿ 5 ಸ್ಥಾನಗಳ ಏರಿಕೆ ಕಂಡಿತ್ತು. ಅದರಂತೆ ಇದೀಗ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ಜೂನ್ ತಿಂಗಳಿಂದಲೇ ವಿನೂತನ ಕ್ರಮ ಕೈಗೊಂಡಿದ್ದು, ಮತ್ತೂಮ್ಮೆ ಫಲಿತಾಂಶದಲ್ಲಿ ಉತ್ತಮ ಸ್ಥಾನಗಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಮುಂದಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ಜೂನ್ ತಿಂಗಳಿಂದಲೇ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ರೆಡ್‌ಝೋನ್, ಯಲ್ಲೋಝೋನ್ ಮತ್ತು ಗ್ರೀನ್‌ಝೋನ್ ಎಂಬ ಮೂರು ಹಂತಗಳನ್ನು ಗುರುತಿಸಲಾಗಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ವಿಶೇಷ ತರಗತಿಗಳು, ಘಟಕ ಪರೀಕ್ಷೆ, ಸರಣಿ ಪರೀಕ್ಷೆಗಳನ್ನು ಈಗಾಗಲೇ ಕೈಗೊಳ್ಳಲಾಗುತ್ತಿದೆ.
ಪೂರ್ವಭಾವಿ ಪರೀಕ್ಷೆಯನ್ನೂ ಮಾಡಲಾಗುತ್ತಿದೆ. ಜತೆಗೆ ಕಲಿಕೆಯಲ್ಲಿ ಅತಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಮತ್ತಷ್ಟು ವಿಶೇಷ ತರಗತಿಗಳನ್ನು ನಡೆಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೇ, ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚು ಸಮಸ್ಯೆ ಎದುರಿಸುವ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಅತ್ಯಂತ ಪರಿಣಾಮಕಾರಿ ಬೋಧನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ವಿಶೇಷ ಬೋಧನೆ ಕಳೆದ ನವೆಂಬರ್ ತಿಂಗಳಿಂದಲೇ ಆರಂಭವಾಗಿದ್ದು, ಫೆಬ್ರವರಿ ತಿಂಗಳಾಂತ್ಯಕ್ಕೆ ಮುಗಿಯಲಿದೆ ಎಂದು ಡಿಡಿಪಿಐ ರಾಮಪ್ಪ ತಿಳಿಸುತ್ತಾರೆ.
ಓದಿನ ಮನೆ: ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರ ಕನಸಿನ ಕೂಸಾದ “ಓದಿನ ಮನೆ’ ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಆರಂಭಿಸಲಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯಗುರುಗಳ ಸಭೆ, ವಿಷಯವಾರು ಕ್ಲಬ್‌ಗಳ ರಚನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಪಾಸಿಂಗ್ ಪ್ಯಾಕೇಜ್ ಅನುಸಾರ ಅಣಿಗೊಳಿಸುವುದು, ಗುಂಪು ಚರ್ಚೆ, ವಿಷಯವಾರು ಶಿಕ್ಷಕರ ಸಮಾಗಮ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ, ಮಕ್ಕಳೊಂದಿಗೆ ಸಂವಾದ, ವಿದ್ಯಾರ್ಥಿಗಳು ಓದುತ್ತಾ ಇದ್ದಾರೆಯೋ ಇಲ್ಲವೋ ಎಂದು ಪರಿಶೀಲಿಸಲು ಫೋನ್-ಇನ್ ಕಾರ್ಯಕ್ರಮ, ದತ್ತು ಯೋಜನೆ, ಪರಿಹಾರ ಬೋಧನೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೂನ್ ತಿಂಗಳಿನಿಂದಲೇ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದೆ.
ಗಣಿನಾಡು ಬಳ್ಳಾರಿ ಜಿಲ್ಲೆ ಕಳೆದ 2016-17ನೇ ಸಾಲಿನಲ್ಲಿ ಶೇ.73.89 ರಷ್ಟು ಫಲಿತಾಂಶಗಳಿಸಿ ರಾಜ್ಯಕ್ಕೆ 17ನೇ ಸ್ಥಾನದಲ್ಲಿತ್ತು. 2017ರಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮ ೈಗೊಂಡ ಹಿನ್ನೆಲೆಯಲ್ಲಿ 2018ರಲ್ಲಿ 82.23 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 12ನೇ ಸ್ಥಾನಕ್ಕೆ ಏರಿಕೆಯಾಯಿತು.
2019ರಲ್ಲಿ ಶೇ.77.98 ರಷ್ಟು ಫಲಿತಾಂಶ ಗಳಿಸುವ ಮೂಲಕ ಪುನಃ 23ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ 2019ರಲ್ಲಿ ಫಲಿತಾಂಶ ಸುಧಾರಣೆಗಾಗಿ ನಾನಾ ಕ್ರಮ ಕೈಗೊಳ್ಳಲಾಗಿದ್ದು, 2020 ಮಾರ್ಚ್ 27 ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ 10ರೊಳಗಿನ ಸ್ಥಾನಕ್ಕೆ ಏರಿಕೆಯಾಗಿ ಸುಧಾರಣೆಯಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಅಧಿ ಕಾರಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಕಾದು ನೋಡಬೇಕಾಗಿದೆ.
ವೆಂಕೋಬಿ ಸಂಗನಕಲ್ಲು