Advertisement

ಕುಡತಿನಿ ಪುನಃ ಬಳ್ಳಾರಿ ತಾಲೂಕು ತೆಕ್ಕೆಗೆ

04:05 PM Jan 22, 2018 | |

ಬಳ್ಳಾರಿ: ತಾಲೂಕಿನ ಕುಡತಿನಿ ಪಟ್ಟಣದ ಜನರ ತೀವ್ರ ಅಸಮಾಧಾನ, ಪ್ರತಿಭಟನೆ, ಆಗ್ರಹಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಕುಡತಿನಿ ಪಟ್ಟಣವನ್ನು ಹೊಸದಾಗಿ ರೂಪುಗೊಂಡಿರುವ ಕುರುಗೋಡು ತಾಲೂಕಿನಿಂದ ಹೊರ ತಂದು ಬಳ್ಳಾರಿ ತಾಲೂಕಿಗೆ ಪುನರ್‌ ಸೇರ್ಪಡೆಗೊಳಿಸಿದೆ.

Advertisement

ಕುಡತಿನಿ ಪಟ್ಟಣವನ್ನು ಕುರುಗೋಡು ತಾಲೂಕಿಗೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ 2017ರ ಡಿ.7ರಂದು ಸಾರ್ವಜನಿಕರಿಗೆ ಲಭ್ಯವಾಗಿತ್ತು. ಇದಕ್ಕೆ ಸಾರ್ವಜನಿಕರಿಂದ ಆಕ್ಷೇಪಗಳನ್ನೂ ಆಹ್ವಾನಿಸಲಾಗಿತ್ತು. ನೂತನ ಕುರುಗೋಡು ತಾಲೂಕಿಗೆ ಕುಡತಿನಿ ಪಟ್ಟಣವನ್ನು ಸೇರ್ಪಡೆ ಮಾಡಿದ ಕ್ರಮವನ್ನು ಆಕ್ಷೇಪಿಸಿ ಪಟ್ಟಣದ ಸಂಘ-ಸಂಸ್ಥೆಗಳು, ನಿವಾಸಿಗಳು ಆಕ್ಷೇಪಗಳನ್ನು ವ್ಯಕ್ತಪಡಿಸಿ. ಕುಡತಿನಿ ಪಟ್ಟಣವನ್ನು ಕುರುಗೋಡು ತಾಲೂಕಿಗೆ ಸೇರ್ಪಡೆ ಮಾಡದೇ, ಬಳ್ಳಾರಿ ತಾಲೂಕಿನಲ್ಲಿಯೇ ಉಳಿಸುವಂತೆ ಕೋರಿದ್ದರು.

ರಾಜ್ಯಪಾಲರ ಪರವಾಗಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ನಿರ್ದೇಶನಾಲಯದ ಹೊಸ ಕಂದಾಯ ಗ್ರಾಮಗಳ ಸೃಷ್ಟಿಸುವ ಕೋಶದ ನಿರ್ದೇಶಕ ಕ್ಯಾಪ್ಟನ್‌ ಡಾ| ಕೆ.ರಾಜೇಂದ್ರ ಅವರು ನೀಡಿದ ಅಧಿ ಸೂಚನೆಯನ್ನು ಕರ್ನಾಟಕ ಭೂ  ಕಂದಾಯ ಕಾಯ್ದೆಯ ಸೆ.4ರ ಅನ್ವಯ ಕುಡತಿನಿ ಪಟ್ಟಣವನ್ನು ಬಳ್ಳಾರಿ ತಾಲೂಕಿನಲ್ಲಿಯೇ ಉಳಿಸಿ ಹೊಸ ಬದಲಾವಣೆಯ ಸಮಗ್ರ ವಿವರಗಳನ್ನು
ಜ.11ರ ಸಂ.58ನೇ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ನೂತನ ತಾಲೂಕಿನ ರಚನೆಯಾದ ದಿನದಿಂದ ಕುಡತಿನಿ ಪಟ್ಟಣ ನಿವಾಸಿಗಳು, ಪಟ್ಟಣವನ್ನು ಕುರುಗೋಡು ತಾಲೂಕಿನಿಂದ ಬೇರ್ಪಡಿಸಿ ಬಳ್ಳಾರಿ ತಾಲೂಕಿಗೆ ಸೇರ್ಪಡೆ ಮಾಡಲೇಬೇಕು ಎಂದು  ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಆಕ್ಷೇಪಣೆಗಳು: ತಾಲೂಕು ಸ್ಥಾನಮಾನಕ್ಕೆ ಅರ್ಹವಾಗಿರುವ ಕುಡತಿನಿ ಪಟ್ಟಣ ರಾಷ್ಟ್ರೀಯ ಹೆದ್ದಾರಿ 63ರ ಬದಿಯಲ್ಲಿದ್ದು, ಬಳ್ಳಾರಿ ತಾಲೂಕಿಗೆ ಸೇರಿತ್ತು. ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಕ್ಷೇತ್ರ ಮರುವಿಂಗಡಣೆ ಸಂದರ್ಭ ಕುರುಗೋಡು ಕ್ಷೇತ್ರದಿಂದ ಸೇರ್ಪಡೆಯಾಗಿತ್ತು. ಪಟ್ಟಣದ ಜನರು ಜಿಲ್ಲಾ ಹಾಗೂ ತಾಲೂಕು ಮಟ್ಟಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಬಳ್ಳಾರಿ ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಿಗೆ ಸಂಡೂರು ಪಟ್ಟಣಕ್ಕೆ ಹೋಗಬೇಕಿತ್ತು. ಆದರೆ, ಕುಡತಿನಿ ಪಟ್ಟಣವನ್ನು ಕುರುಗೋಡು ತಾಲೂಕಿಗೆ ಸೇರ್ಪಡೆ ಮಾಡಿದ ಹಿನ್ನೆಲೆ ಜನರು ಮಾಡಬೇಕಾದ ಅಲೆದಾಟದ ಪ್ರಮಾಣ ಹೆಚ್ಚಾಗುತ್ತಿತ್ತು. ಬಳ್ಳಾರಿಯಲ್ಲಿ ಎರೆಡೆರಡು
ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದ ಜನರು ಮತ್ತೆ ಒಂದು ಕೆಲಸಕ್ಕೆ ಕುರುಗೋಡಿಗೆ ಅಲೆಯಬೇಕಿತ್ತು.

ಅಲ್ಲದೇ, ಕುಡತಿನಿ-ಕುರುಗೋಡುಗಳ ನಡುವೆ ರೈಲ್ವೆ ಮಾರ್ಗವಿದ್ದು ಪ್ರತಿದಿನ ಸಂಚರಿಸುವ ಹತ್ತಾರು ರೈಲುಗಳ ಕಾರಣ ಜನರು ಗಂಟೆ ಗಟ್ಟಲೇ ರೈಲ್ವೆ ಗೇಟ್‌ಗಳಲ್ಲಿ ಕಾಯುವ ಪರಿಸ್ಥಿತಿ ಎದುರಾಗುತ್ತಿತ್ತು. ಅಲ್ಲದೇ, ಕುಡತಿನಿ-ಕುರುಗೋಡುಗಳ ನಡುವೆ
ಉತ್ತಮ ಸಂಚಾರ ಸೌಲಭ್ಯಗಳೂ ಇರಲಿಲ್ಲ. ಈ ಕಾರಣಗಳನ್ನು ಆಧಾರವಾಗಿಟ್ಟುಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಲಾಗಿತ್ತು. ಸಂಡೂರು ಶಾಸಕ ಈ.ತುಕಾರಾಮ್‌, ಪಟ್ಟಣದ ಸಂಘ ಸಂಸ್ಥೆಗಳ, ನಿವಾಸಿಗಳ ಸತತ ಪ್ರಯತ್ನದಿಂದ ಕುಡತಿನಿ
ಪಟ್ಟಣ ಬಳ್ಳಾರಿ ತಾಲೂಕಿನಲ್ಲಿ ಉಳಿಯುವಂತಾಯಿತು.

Advertisement

ತಾಲೂಕುಗಳ ಮರು ವಿಂಗಡಣೆ: ಬಳ್ಳಾರಿ ತಾಲೂಕಿನ ಕುರುಗೋಡು ವೃತ್ತದಲ್ಲಿದ್ದ ನೆಲ್ಲುಡಿ, ಎಮ್ಮಿಗನೂರು, ಎಚ್‌.ವೀರಾಪುರ, ಚಿಟಗಿನಹಾಳ್‌, ಮುಷ್ಟಗಟ್ಟ, ಕ್ಯಾದಿಗಿಹಾಳ್‌, ಗೆಣಿಕೆಹಾಳ್‌, ಲಕ್ಷ್ಮೀಪುರ, ಕೆರೆಕೆರೆ, ಸೋಮಲಪುರ, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ಕಲ್ಲುಕಂಬ, ಕುರುಗೋಡು, ಬಾದನಹಟ್ಟಿ, ಸಿದ್ದಮ್ಮನಹಳ್ಳಿ, ಏಳುಬೆಂಚಿ, ತಿಮ್ಮಲಾಪುರ, ವೇಣಿ ವೀರಾಪುರ
ಹಾಗೂ ಕೋಳೂರು ಹೋಬಳಿಯ ಕೋಳೂರು, ಬೈಲೂರು, ಸಿಂದಿಗೇರಿ, ಸೋಮಸಮುದ್ರ, ದಮ್ಮೂರು, ಸಿಂಗದೇವನಹಳ್ಳಿ, ಯರ್ರಂಗಳಿ, ವದ್ದಟ್ಟಿ ಗ್ರಾಮಗಳನ್ನು ಕುರುಗೋಡು ತಾಲೂಕಿಗೆ ಉಳಿಸಿಕೊಳ್ಳಲಾಗಿದೆ.

ಕುರುಗೋಡು ತಾಲೂಕಿನ ಗಡಿಗಳು: ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಬಳ್ಳಾರಿ ತಾಲೂಕು; ಉತ್ತರಕ್ಕೆ ಸಿರುಗುಪ್ಪ ತಾಲೂಕು, ಪಶ್ಚಿಮಕ್ಕೆ ಹೊಸಪೇಟೆ ಹಾಗೂ ಸಂಡೂರು ತಾಲೂಕುಗಳ ಗಡಿಗಳು ಎಂದು ಅಖೈರುಗೊಳಿಸಲಾಗಿದೆ. 

ಪರಿಷ್ಕೃತ ಅಧಿ ಸೂಚನೆ: ಪುನರ್‌ ರಚಿತ ಬಳ್ಳಾರಿ ತಾಲೂಕಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ, ಜಾನೆಕುಂಟೆ, ಬೆಳಗಲ್ಲು, ಆಲದಹಳ್ಳಿ, ಕೊಳಗಲ್ಲು, ಹರಗಿನಡೋಣಿ, ಬೇವಿನಹಳ್ಳಿ, ಬಿಸಿಲಹಳ್ಳಿ, ಹದ್ದಿನಗುಂಡು, ಮುಂಡರಗಿ, ಅಂದ್ರಾಳು, ಬಿ.ಗೋನಾಳು, ಕುಡತಿನಿ ಪಟ್ಟಣ ಸೇರಿದಂತೆ ಇತರೆ ಗ್ರಾಮಗಳು ಬಳ್ಳಾರಿ ತಾಲೂಕಿನ ಪೂರ್ವಕ್ಕೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಲೂರು
ತಾಲೂಕು, ಪಶ್ಚಿಮಕ್ಕೆ ನಿಯೋಜಿತ ಕುರುಗೋಡು ತಾಲೂಕು, ಉತ್ತರಕ್ಕೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಗಡಿ ಹಾಗೂ ದಕ್ಷಿಣಕ್ಕೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಡಿಗಳನ್ನು ಗಡಿ ಎಂದು ಅಖೈರುಗೊಳಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ.

ನಮ್ಮ ಹೋರಾಟ ಸರ್ಕಾರದ ಗಮನ ಸೆಳೆದಿದೆ. ಕುಡತಿನಿ ಪಟ್ಟಣವನ್ನು ಬಳ್ಳಾರಿ ತಾಲೂಕಿಗೆ ಮರು ಸೇರ್ಪಡೆ ಮಾಡಿದ ಕರ್ನಾಟಕ ರಾಜ್ಯ ಸರ್ಕಾರಕ್ಕೆ, ನಮ್ಮ ಹೋರಾಟಕ್ಕೆ ಬೆಂಬಲಿಸಿದ ಸಂಡೂರು ಶಾಸಕ ಈ. ತುಕಾರಾಮ್‌ ಅವರಿಗೆ ಕೃತಜ್ಞತೆ ತಿಳಿಸುತ್ತೇವೆ.
ಚಂದ್ರಾಯಿ ದೊಡ್ಡಬಸಪ್ಪ, ಕುಡತಿನಿ

ಬಳ್ಳಾರಿ ತಾಲೂಕಿನಲ್ಲಿಯೇ ನಮ್ಮ ಕುಡತಿನಿ ಪಟ್ಟಣವನ್ನು ಉಳಿಸಿ ಪರಿಷ್ಕೃತ ಅಧಿ ಸೂಚನೆ ಹೊರಡಿಸಿದ ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸುತ್ತೇವೆ. ಈ ಪರಿಷ್ಕೃತ ಅಧಿ ಸೂಚನೆ ನಮ್ಮ ಪಟ್ಟಣದ ಜನರಿಗೆ ಸಾಕಷ್ಟು ನೆಮ್ಮದಿ ತಂದಿದೆ.
ಟಿ.ಕೆ.ಕಾಮೇಶ್‌, ವಕೀಲರು

ಬಳ್ಳಾರಿ ತಾಲೂಕಿನಲ್ಲಿಯೇ ನಮ್ಮ ಕುಡತಿನಿ ಪಟ್ಟಣವನ್ನು ಉಳಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸುತ್ತೇವೆ. ಈ ಪರಿಷ್ಕೃತ ಅಧಿಸೂಚನೆ ನಮ್ಮ ಪಟ್ಟಣದ ಜನರಿಗೆ ಸಾಕಷ್ಟು ನೆಮ್ಮದಿ ತಂದಿದೆ.
ಟಿ.ಕೆ.ಕಾಮೇಶ್‌, ವಕೀಲರು

ಎಂ.ಮುರಳಿ ಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next