Advertisement

ಘನತ್ಯಾಜ್ಯ ನಿರ್ವಹಣೆ ಅನುಷ್ಠಾನಕ್ಕೆ ಕ್ರಮ

12:24 PM Mar 01, 2020 | Naveen |

ಬಳ್ಳಾರಿ: ನಗರದ ಜಿಲ್ಲಾಕ್ರೀಡಾಂಗಣದಲ್ಲಿ ಜಿಪಂ ಸ್ವಚ್ಛ ಭಾರತ ಮಿಶನ್‌ ಯೋಜನೆಯಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯ 80 ಗ್ರಾಪಂಗಳಿಗೆ ಘನತ್ಯಾಜ್ಯ ಸಂಗ್ರಹಣಾ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಶನಿವಾರ ವಿತರಿಸಿದರು.

Advertisement

ಬಳಿಕ ಮಾತನಾಡಿದ ಅವರು, ಘನತ್ಯಾಜ್ಯ ಸಂಗ್ರಹಣಾ ಮತ್ತು ವಿಲೇವಾರಿಯಲ್ಲಿ ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಸಂತಸ ತಂದಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲರು ಅಭಿನಂದನಾರ್ಹರು. ಜಿಲ್ಲೆಯ ಒಟ್ಟು 237 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಕುರಿತು ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಕ್ರಮವಹಿಸಲಾಗಿದೆ. ಈಗಾಗಲೇ 146 ಗ್ರಾಮ ಪಂಚಾಯಿತಿಗಳಲ್ಲಿ ಸ್ಥಳವನ್ನು ಗುರುತಿಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ತರಬೇತಿ ನೀಡಲಾಗಿದೆ.

ಪ್ರಸ್ತುತ 100 ಗ್ರಾಮ ಪಂಚಾಯಿತಿಗಳಲ್ಲಿ ಸೂಕ್ತ ಸ್ಥಳವನ್ನು ಗುರುತಿಸಿ 98 ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಈ ಪೈಕಿ ಮೊದಲನೇ ಹಂತದಲ್ಲಿ 16 ಗ್ರಾಮ ಪಂಚಾಯಿತಿಗೆ ವಾಹನಗಳನ್ನು ಖರೀದಿಸಲಾಗಿದ್ದು, ಇದೀಗ ಎರಡನೇ ಹಂತದಲ್ಲಿ 80 ಗ್ರಾಮ ಪಂಚಾಯಿತಿಗಳಿಗೆ ವಾಹನಗಳನ್ನು ವಿತರಿಸಲಾಯಿತು ಎಂದರು.

ಸ್ವಚ್ಛ -ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ್‌ ಮಿಷನ್‌
ಯೋಜನೆಯಡಿ ಒಟ್ಟು ರೂ. 20ಲಕ್ಷಗಳವರೆಗೆ ಪ್ರತಿ ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ನೀಡಲಾಗುತ್ತಿದ್ದು, ಅದರಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ, ಸಂಗ್ರಹಣ ವಾಹನ ಖರೀದಿಗೆ, ಮನೆ ಮನೆ ಕಸ ಬುಟ್ಟಿ ವಿತರಣೆಗೆ ಕಸ ಸಂಗ್ರಹಕರಿಗೆ ವಿವಿಧ ರೀತಿಯ ಸುರಕ್ಷಿತ ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದರು.

ಶೌಚಾಲಯ, ಘನತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಿದಂತೆ ರಾಜ್ಯದಲ್ಲಿರುವ 6021 ಗ್ರಾಪಂಗಳಲ್ಲಿಯೂ ಸೋಲಾರ್‌ ವಿದ್ಯುತ್‌ದೀಪ ಅಳವಡಿಸುವ ನಿಟ್ಟಿನಲ್ಲಿ ತೀರ್ಮಾನಿಸಲಾಗಿದೆ ಎಂದರು. ಮನೆಮನೆ ನೀರು ಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಯತ್ನ ನಡೆಸಲಾಗುತ್ತಿದ್ದು, ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಮುಗಿದ ಕಡೆ ಇದೇ ವರ್ಷದಿಂದ ಕೆಲಸ ಆರಂಭಿಸಲಾಗುತ್ತಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ನಾಗೇಂದ್ರ ಅವರು ಮಾತನಾಡಿ, ನಗರ ಪ್ರದೇಶದಂತೆ ಪ್ರತಿಹಳ್ಳಿಗಳಲ್ಲಿಯೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅನುಸರಿಸಲಾಗಿರುವ ಈ ಕ್ರಮ ಅತ್ಯಂತ ಶ್ಲಾಘನೀಯವಾದುದಾಗಿದೆ ಎಂದರು.

ನಮ್ಮ ನಡೆ-ಹಳ್ಳಿ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಬಳ್ಳಾರಿ ಜಿಲ್ಲೆಯಲ್ಲಿ ಆರಂಭಿಸಲಾಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಗ್ಗೂಡಿ ಹಳ್ಳಿಕಡೆ ಸಾಗುವ ಹಾಗೂ ನೈರ್ಮಲ್ಯ, ಆರೋಗ್ಯ, ಕುಂದುಕೊರತೆ ಸೇರಿದಂತೆ ಇನ್ನಿತರೆ ದೂರು-ದುಮ್ಮಾನಗಳನ್ನು ಆಲಿಸಿ ಪರಿಹರಿಸಲಾಗುವುದು. ತಾವೇ ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು.

ಇದೇ ವೇಳೆ ಆಯುಷ್ಮಾನ್‌ ಭಾರತ್‌ -ಆರೋಗ್ಯ ಕಾರ್ಡ್‌ ನೋಂದಣಿಯಲ್ಲಿ ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಇದಕ್ಕಾಗಿ ಶ್ರಮಿಸಿದ ಐದು ಗ್ರಾಪಂ ಪಿಡಿಒಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಸಿಇಒ ನಿತೀಶ್‌, ಜಿಪಂ ಸದಸ್ಯರಾದ ಅಲ್ಲಂಪ್ರಶಾಂತ, ಮಾನಯ್ಯ,ಸೌಭಾಗ್ಯ, ತಾಪಂ ಅಧ್ಯಕ್ಷೆ ಲೀಲಾವತಿ, ಜಿಪಂ ಉಪಕಾರ್ಯದರ್ಶಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next