ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಕಣ ಸೂರ್ಯಗ್ರಹಣವನ್ನು ವಿವಿಧ ಸಾಧನಗಳಿಂದ ಸಾರ್ವಜನಿಕರ ವೀಕ್ಷಣೆಗೆ ಭಾನುವಾರ ಅವಕಾಶ ಕಲ್ಪಿಸಲಾಯಿತು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋ ಸೊಸೈಟಿಯಿಂದ ಸೂರ್ಯಗ್ರಹಣ ವೀಕ್ಷಣೆ ಆಯೋಜಿಸಲಾಗಿತ್ತು. ವಿಜ್ಞಾನ ಕೇಂದ್ರದಲ್ಲಿ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಟೆಲಿಸ್ಕೋಪ್, ಸುರಕ್ಷಕ ಕನ್ನಡಕಗಳು, ಪಿನ್ ಹೋಲ್ ಕ್ಯಾಮರಾ ಹಾಗೂ ಬಾಲ್ ಮಿರರ್‌ಗಳ ಮೂಲಕ ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು, ಶಿಕ್ಷಕರು, ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.
ಭಾನುವಾರ ಬೆಳಗ್ಗೆ 10.04 ರಿಂದ ಆರಂಭವಾದ ಸೂರ್ಯಗ್ರಹಣ ಮಧ್ಯಾಹ್ನ 1:34 ರವರೆಗೆ ಗೋಚರಿಸಿತು. ಸೂರ್ಯ-ಭೂಮಿ ಮತ್ತು ಚಂದ್ರನ ನಡುವೆ ನಡೆಯುವ ಪ್ರತಿ ಸೂರ್ಯಗ್ರಹಣಗಳು ಪ್ರತಿ 173 ದಿನಗಳಿಗೆ ಒಮ್ಮೆ ನಡೆಯುತ್ತದೆ. ವಿಜ್ಞಾನದಲ್ಲಿ ಇದೊಂದು ಕುತೂಹಲಕಾರಿ ಘಟನೆ. ಇದರಲ್ಲಿ ಯಾವುದೇ ಮೌಡ್ಯತೆ ಅಡಗಿಲ್ಲ ಎಂದು ಕೇಂದ್ರದ ಸಹಾಯಕ ಶಿಕ್ಷಕಿ ಸುಮಯ್ಯ ಹೇಳಿದರು.
ಉಪಹಾರ ವ್ಯವಸ್ಥೆ: ಸೂರ್ಯಗ್ರಹಣದಿಂದ ಊಟ ಮಾಡಬಾರದು, ಗರ್ಭಿಣಿಯರು, ಮಕ್ಕಳು ಹೊರಗೆ ಬರಬಾರದು, ಆಹಾರ ವಿಷಕಾರಿಯಾಗುತ್ತದೆ ಎಂದು ಜನರಲ್ಲಿ ಅಡಗಿರುವ ಮೂಢ ನಂಬಿಕೆಗಳನ್ನು ಹೊಗಲಾಡಿಸುವ ಸಲುವಾಗಿ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ಬಂದ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಗ್ರಹಣ ಎಂಬುದು ಆಕಾಶದಲ್ಲಿ ನಡೆಯುವ ಸೂರ್ಯ-ಭೂಮಿ ನಡುವೆ ಚಂದ್ರನ ಆಗಮನದಿಂದ ನೆರಳು, ಬೆಳಕಿನ ಕ್ರಿಯೆಗೆ ಗ್ರಹಣ ಎಂದು ಕೇಂದ್ರದ ವ್ಯವಸ್ಥಾಪಕ ಜಿ.ವಿ. ಶಿವರಾಜ್ ಹೇಳಿದರು. ಕಲ್ಯಾಣ ಮಠದ ಕಲ್ಯಾಣಸ್ವಾಮಿ, ಸದ್ದಾಂ, ಲಕ್ಷ್ಮಣ, ರವಿಕುಮಾರ್ ಮತ್ತಿತರರಿದ್ದರು.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಸೂರ್ಯಗ್ರಹಣದ ನಿಮಿತ್ತ ಜಿಲ್ಲೆಯ ನಾನಾ ದೇವಸ್ಥಾನಗಳಲ್ಲಿ ಗ್ರಹಣ ಸಮಯದಲ್ಲಿ ಪೂಜೆ ಪುನಸ್ಕಾರ ಸ್ಥಗಿತಗೊಳಿಸಿ, ಗ್ರಹಣ ಮುಗಿದ ನಂತರ ದೇವಸ್ಥಾನ ಶುದ್ದೀಕರಿಸಿ ಪೂಜೆ ನಡೆಸಲಾಯಿತು. ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನ, ಹಡಗಲಿ ಮೈಲಾರ ದೇವಸ್ಥಾನ, ಕೊಟ್ಟೂರಿನ ಕೊಟ್ಟೂರೇಶ್ವರ ದೇವಸ್ಥಾನ, ಕುರುಗೋಡು ದೊಡ್ಡ ಬಸವೇಶ್ವರ, ಬುಕ್ಕಸಾಹರ ನಾಗಪ್ಪ ದೇವಸ್ಥಾನ ಸೇರಿ ನಾನಾ ದೇವಸ್ಥಾನಗಳಲ್ಲಿ ಬೆಳಗ್ಗೆ 8 ಗಂಟೆಗೆ ದೇವಸ್ಥಾನಗಳ ಬಾಗಿಲು ಮುಚ್ಚಿ, ಗ್ರಹಣ ಮುಗಿದ ಬಳಿಕ ಸಂಜೆ 4 ಗಂಟೆಯಿಂದ ದೇವಸ್ಥಾನ ಶುದ್ಧೀಕರಿಸಿ ವಿಶೇಷ ಪೂಜೆ ಮಾಡಲಾಯಿತು.