ಬಳ್ಳಾರಿ: ಅಗತ್ಯಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿರುವ ಆಟೋಗಳನ್ನು ಹೈಕೋರ್ಟ್ ಆದೇಶದ ಮೇರೆಗೆ ವಶಕ್ಕೆ ಪಡೆದು ಸೀಜ್ ಮಾಡಿರುವ ಪೊಲೀಸರು ಚಾಲಕರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಾಚರಣೆಗಿಳಿದ ವಿವಿಧ ಠಾಣೆಗಳ ಪೊಲೀಸರು ಸುಮಾರು 100 ಆಟೋಗಳನ್ನು ಸೀಜ್ ಮಾಡಿದ್ದಾರೆ. ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಕಳುಹಿಸಿದ್ದಾರೆ.
ಹೈಕೋರ್ಟ್ ಆದೇಶ: ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವ ಆಟೋಗಳು ಈ ಮೊದಲು ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಕೊಂಡು ಸಂಚರಿಸಿ, ಸಂಚಾರಿ ನಿಯಮವನ್ನು ಉಲ್ಲಂಘಿಸುತ್ತಿದ್ದವು. ಇದರಿಂದ ಅಪಘಾತಗಳೂ ನಡೆಯುವ ಸಂಭವವಿತ್ತು. ಪೊಲೀಸರು ಸಹ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಸಂಚರಿಸುತ್ತಿದ್ದ ಆಟೋಗಳನ್ನು ಹಿಡಿದು ದಂಡ ವಿಧಿಸಿ ಕಳುಹಿಸುತ್ತಿದ್ದರು. ವಿಧಿಸುವ ದಂಡ ಹೆಚ್ಚಿನ ಪ್ರಮಾಣದ್ದಾಗಿರದ ಕಾರಣ ಆಟೋ ಚಾಲಕರ ಈ ತಪ್ಪುಗಳು ಪದೇ ಪದೇ ಮರುಕಳಿಸುತ್ತಿದ್ದವು.
ಆದರೆ, ಇತ್ತೀಚೆಗೆ ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸಬಾರದು. ಆಟೋಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸಾಗಿಸಬಾರದು ಎಂದು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಣಮಿಸಿದೆ. ಹೈಕೋರ್ಟ್ ಆದೇಶದಂತೆ ಪ್ರತಿ ಆಟೋಗಳು ಕೇವಲ 5 ವಿದ್ಯಾರ್ಥಿಗಳನ್ನಷ್ಟೇ ಸಾಗಿಸಬೇಕು. ಕೋರ್ಟ್ ಆದೇಶವನ್ನು ಧಿಕ್ಕರಿಸಿ, ನಿಯಮ ಉಲ್ಲಂಘಿಸುತ್ತಿರುವ ಆಟೋಗಳನ್ನು ಸೀಜ್ ಮಾಡಲಾಗುತ್ತಿದೆ. ಅಲ್ಲದೇ, ಆಟೋಗಳನ್ನು ಸೀಜ್ ಮಾಡುವುದಕ್ಕೆ ಮೂರು ತಿಂಗಳ ಮುಂಚಿನಿಂದಲೇ ಇಲಾಖೆಯಿಂದ ಹಲವೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಟೋ ಚಾಲಕರಿಗೆ ಜಾಗೃತಿ ಮೂಡಿಸಲಾಗಿದೆ. ಆದರೂ, ನಿಯಮಗಳನ್ನು ಉಲ್ಲಂಘಿಸಿದ ಆಟೋಗಳನ್ನು ಕಳೆದ ಜುಲೈ 1ರಿಂದ ಸೀಜ್ ಮಾಡಲಾಗುತ್ತಿದ್ದು, ಚಾಲಕರಿಗೆ ದಂಡ ವಿಧಿಸುವುದರ ಜತೆಗೆ ಪ್ರಕರಣವನ್ನು ದಾಖಲಿಸಿ, ಪರವಾನಗಿಯನ್ನೂ ರದ್ದುಗೊಳಿಸಲು ಶಿಫಾರಸ್ಸು ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದಿನಿಂದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ: ಆಟೋಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುವುದರಲ್ಲಿ ಒಂದಷ್ಟು ಸಡಿಲಿಕೆ ನೀಡಬೇಕು ಎಂದು ಒತ್ತಾಯಿಸಿ ಆಟೋ ಚಾಲಕರ ಸಂಘದಿಂದ ಜು. 4ರಿಂದ ಎರಡು ದಿನಗಳ ಕಾಲ ಆಟೋ ಸಂಚಾರ ಸ್ಥಗಿತಗೊಳಿಸಿ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಆಟೋಗಳಲ್ಲಿ ಕೇವಲ ಐದು ವಿದ್ಯಾರ್ಥಿಗಳನ್ನು ಸಾಗಿಸಿದರೆ ಚಾಲಕರಿಗೆ ನಷ್ಟವಾಗಲಿದೆ. ಹಾಗಾಗಿ 8 ವಿದ್ಯಾರ್ಥಿಗಳನ್ನು ಹತ್ತಿಕೊಳ್ಳಲು ಅವಕಾಶ ಕಲ್ಪಿಸಬೇಕು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳನ್ನು ಶಾಲಾ-ಕಾಲೇಜುಗಳಿಗೆ ಕರೆದೊಯ್ಯುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ರಾಜೇಶ್ ಹುಂಡೇಕರ್ ತಿಳಿಸಿದ್ದಾರೆ.