ಬಳ್ಳಾರಿ: ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಸಂತ ಸೇವಾಲಾಲ್, ಮರಿಯಮ್ಮ ದೇವಿ ದೇವಾಲಯವನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿ ಧಿಸಬೇಕು. ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಅಖೀಲ ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾ ಸಮಿತಿ ನೂರಾರು ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಸಂತ ಸೇವಾಲಾಲ್, ಮರಿಯಮ್ಮ ದೇವಿ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ, ಸಮುದಾಯಕ್ಕೆ ಅಪಮಾನಗೊಳಿಸಿದ್ದಾರೆ. ಇದು ತೀರಾ ಖಂಡನೀಯವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿ ಸಬೇಕು. ಪುನಃ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿಕೊಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾನಿರತರು ಎಚ್ಚರಿಸಿದರು.
ಕಲಬುರ್ಗಿ ವಿಮಾನ ನಿಲ್ದಾಣವನ್ನು ಕಲ್ಬುರ್ಗಿ ಜಿಲ್ಲೆಯ ಮಾಡಿಹಾಳ್ ತಾಂಡಾ, ಶ್ರೀನಿವಾಸ್ ಸಂಡರಗಿ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಆ ಗ್ರಾಮಗಳ ಜನರು ಸುಮಾರು 750ಕ್ಕೂ ಹೆಚ್ಚು ಎಕರೆ ಜಮೀನನ್ನು ವಿಮಾನ ನಿಲ್ದಾಣಕ್ಕೆ ನೀಡಿ, ಮನೆ, ಮಠ, ಕೃಷಿ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಮೇಲಾಗಿ ಜಮೀನುಗಳನ್ನು ಸಹ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಲಾಗಿದೆ. ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿ ಕಾರಿಗಳು ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ್ ಹೆಸರನ್ನು ನಾಮಕರಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.
ಇದಕ್ಕೂ ಮುನ್ನ ನಗರದ ಬೆಳಗಲ್ ಕ್ರಾಸ್ ನಿಂದ ಆರಂಭವಾದ ಮೆರವಣಿಗೆಯು ಕೌಲ್ ಬಜಾರ್, ಮೋತಿವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಾನಾಯ್ಕ, ಶಿವಾನಾಯ್ಕ, ರಾಮುನಾಯ್ಕ, ಸ್ವಾಮಿನಾಯ್ಕ, ಕೃಷ್ಣಾನಾಯ್ಕ, ದೇವಾನಾಯ್ಕ, ಮೀಗುನಾಯ್ಕ, ಸೋಪುನಾಯ್ಕ, ರಾಮಾಲಿನಾಯ್ಕ ಸೇರಿದಂತೆ ಸಮುದಾಯದ ಮುಖಂಡರು, ಯುವಕರು, ಮಹಿಳೆಯರು ಇದ್ದರು.