Advertisement

ಸರ್ವರ್‌ ಸಮಸ್ಯೆಗೆ ಸಾರ್ವಜನಿಕರು ಹೈರಾಣ!

05:45 PM Feb 20, 2020 | Naveen |

ಬಳ್ಳಾರಿ: ನಗರದ ಹೃದಯ ಭಾಗದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ವಾರದಿಂದ ಸರ್ವರ್‌ ಸಮಸ್ಯೆ ಎದುರಾಗಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಕಚೇರಿಯಲ್ಲಿ ಅವಧಿ ಮುಗಿದಿರುವ ಕಂಪ್ಯೂಟರ್‌ ಸೇರಿ ಇತರೆ ತಾಂತ್ರಿಕ ವಸ್ತುಗಳನ್ನು ಬಳಸುತ್ತಿರುವುದೇ ಸರ್ವರ್‌ ಸಮಸ್ಯೆ ಎದುರಾಗಲು ಕಾರಣವಾಗಿದೆ. ನಗರದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಒಂದು ವಾರದಿಂದ ಸರ್ವರ್‌ ಸಮಸ್ಯೆ ಎದುರಾಗಿದೆ. ಆಸ್ತಿ, ಜಮೀನು, ಮದುವೆ ಸೇರಿ ಇನ್ನಿತರೆ ನೋಂದಣಿಗಳನ್ನು ಆನ್‌ಲೈನ್‌ ಮೂಲಕ ನೋಂದಣಿ ಮಾಡಲಾಗುತ್ತಿದೆ. ಈ ನೋಂದಣಿ ಪ್ರಕ್ರಿಯೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಹಿನ್ನೆಲೆಯಲ್ಲಿ ಓಟಿಪಿ (ಒನ್‌ ಟೈಮ್‌
ಪಾಸ್‌ವರ್ಡ್‌) ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ನೋಂದಣಿ ಮಾಡಿಸಲು ಬರುವ ಖರೀದಿದಾರರು, ಮಾರುವವರು, ಸಾಕ್ಷಿಗಳು ಸೇರಿ ಎಲ್ಲರ ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆಗಳನ್ನು ಸ್ಕಾನ್‌ ಮಾಡಿ ಅವರವರ ಪ್ರತ್ಯೇಕ ಮೊಬೈಲ್‌ ಸಂಖ್ಯೆಯೊಂದಿಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗಿದೆ. ಹೀಗಾಗಿ ಎಲ್ಲರ ಮೊಬೈಲ್‌ಗ‌ೂ ಒಟಿಪಿ (ಒನ್‌
ಟೈಮ್‌ ಪಾಸ್‌ವರ್ಡ್‌) ಸಂಖ್ಯೆ ರವಾನೆಯಾಗಲಿದೆ. ಈ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿ ಓಕೆಯಾದರೆ ನೋಂದಣಿ ಪ್ರಕ್ರಿಯೆ ಬೇಗ ಮುಗಿಯಲಿದೆ. ಒಂದು ವೇಳೆ ಸರ್ವರ್‌ ಬಿಜಿಯಾಗಿ ಅಳವಡಿಸಿರುವ ಓಟಿಪಿ ಸಂಖ್ಯೆ ಆಕ್ಸೆಪ್ಟ್ ಆಗದಿದ್ದರೆ ಮತ್ತೂಮ್ಮೆ ಓಟಿಪಿ ಸಂಖ್ಯೆಯನ್ನು ಪಡೆದು ಪುನಃ ಅಳವಡಿಸಬೇಕಾಗಲಿದೆ. ಈ ಪ್ರಕ್ರಿಯೆ ಕಳೆದ ಫೆ.11ರಿಂದ ರಾಜ್ಯಾದ್ಯಂತ ಚಾಲನೆಗೆ ಬಂದಿರುವ ಕಾರಣ ಸರ್ವರ್‌ ಸಮಸ್ಯೆ ಎದುರಾಗಲು ಕಾರಣವಾಗಿದೆ.

ಅವಧಿ ಮುಗಿದ ಕಂಪ್ಯೂಟರ್‌ಗಳು: ಉಪನೋಂದಣಿ ಇಲಾಖೆಯಲ್ಲಿ ಸರ್ವರ್‌ ಸಮಸ್ಯೆ, ನೋಂದಣಿ ಪ್ರಕ್ರಿಯೆ ನಿಧಾನವಾಗಲು ಇಲಾಖೆಯಲ್ಲಿ ಅವಧಿ ಮುಗಿದಿರುವ ಕಂಪ್ಯೂಟರ್‌, ಪ್ರಿಂಟರ್‌ ಗಳ ಬಳಕೆಯೂ ಒಂದು ಕಾರಣವಾಗಿದೆ. ಕಳೆದ ಆರು ವರ್ಷಗಳ ಹಿಂದೆ ಖಾಸಗಿ ಏಜೆನ್ಸಿಯೊಂದು ಇಲಾಖೆಯಲ್ಲಿ ಏಳು ಕಂಪ್ಯೂಟರ್‌, ಪ್ರಿಂಟರ್‌ ಗಳನ್ನು ಅಳವಡಿಸಿ, ನಿರ್ವಹಣೆಯನ್ನೂ ಮಾಡುತ್ತಿದೆ. ಆದರೆ, ಕಳೆದ 2019 ಮಾರ್ಚ್‌ ತಿಂಗಳಾಂತ್ಯಕ್ಕೆ ಏಜೆನ್ಸಿಯ ಗುತ್ತಿಗೆ ಅವಧಿ  ಮುಗಿದಿದ್ದು, ಕಂಪ್ಯೂಟರ್‌, ಪ್ರಿಂಟರ್‌ಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.

ಪರಿಣಾಮ ನೋಂದಣಿ ಪ್ರಕ್ರಿಯೆ ನಿಧಾನವಾಗಲು ಇದೂ ಒಂದು ಕಾರಣವಾಗಿದ್ದು, ಇಲಾಖೆ ಅಧಿ ಕಾರಿಗಳು ಮೇಲಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಇಲಾಖೆಯಲ್ಲಿ ಕಂಪ್ಯಟರ್‌ಗಳಿಗೆ ಯುಪಿಎಸ್‌ ಸೌಲಭ್ಯವಿಲ್ಲ. ವಿದ್ಯುತ್‌ ಕಡಿತವಾದಾಗ ಕಂಪ್ಯೂಟರ್‌ಗಳು ಸಹ ಬಂದ್‌ ಆಗಲಿದ್ದು, ಆಗಾಗ ಸೇವ್‌ ಮಾಡದಿದ್ದರೆ ಮಾಡಿದ ಕೆಲಸವೆಲ್ಲಾ ಅಳಿಸಿ ಹೋಗಲಿದ್ದು, ಪುನಃ ಮೊದಲಿನಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಜನರೇಟರ್‌ ಇದ್ದರೂ ಇಲ್ಲದಂತಾಗಿದೆ.

Advertisement

ಇದರ ಅವಧಿಯೂ ಮುಗಿದಿದ್ದು, ವಿದ್ಯುತ್‌ ಕಡಿತವಾದ 20ರಿಂದ 30 ನಿಮಿಷಗಳ ಬಳಿಕ ಜನರೇಟರ್‌ ವಿದ್ಯುತ್‌ ಸರಬರಾಜಾಗಲಿದ್ದು, ಒಂದು ನೋಂದಣಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದರೊಳಗೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಹೈರಾಣಾಗುತ್ತಿದ್ದು, ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ತಿಂಗಳಿಗೆ ಸರಾಸರಿ 3 ಕೋಟಿ ರೂ. ಸಂಗ್ರಹ: ಆಸ್ತಿ, ಜಮೀನು, ಮದುವೆ, ವಿಶೇಷ ಮದುವೆ ಸೇರಿ ಇನ್ನಿತರೆ ನೋಂದಣಿಗಳು ನಡೆಯುವ ಉಪನೋಂದಣಿ ಕಚೇರಿಯಲ್ಲಿ ಪ್ರತಿ ತಿಂಗಳು ಸರಾಸರಿ 3 ಕೋಟಿ ರೂಗೂ ಹೆಚ್ಚು ಆದಾಯ ಸಂಗ್ರಹವಾಗಲಿದೆ. ಈ ಮೊದಲು ಪ್ರತಿದಿನ 130ರಿಂದ 140 ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿದ್ದವು. ಓಟಿಪಿ ಪದ್ಧತಿ ಜಾರಿಯಾದ ಬಳಿಕ ಪ್ರತಿದಿನ 90 ನೋಂದಣಿಯಾದರೆ ಹೆಚ್ಚು. ಪ್ರತಿದಿನ ಸುಮಾರು 20ಕ್ಕೂ ಹೆಚ್ಚು ಅರ್ಜಿಗಳು ನೋಂದಣಿಯಾಗದೆ ಉಳಿಯುತ್ತಿವೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಅಡ್ಡಾದಿಡ್ಡಿಯಾಗಿ ನಿಂತ ವಾಹನಗಳು: ಉಪನೋಂದಣಿ ಇಲಾಖೆ ತಾಂತ್ರಿಕ ಸಮಸ್ಯೆಯೊಂದಿಗೆ ಮೂಲಸೌಲಭ್ಯಗಳ ಕೊರತೆಯನ್ನೂ ಎದುರಿಸುತ್ತಿದೆ. ಇಲಾಖೆಗೆ ಪ್ರತಿದಿನ ಸರಾಸರಿ 500 ಜನರು ಆಗಮಿಸಲಿದ್ದು, ಅವರು ತರುವ ದ್ವಿಚಕ್ರ, ನಾಲ್ಕು ಚಕ್ರಗಳ ವಾಹನಗಳನ್ನು ನಿಲ್ಲಿಸಲು ಒಂದು ವ್ಯವಸ್ಥೆ ಇಲ್ಲದಾಗಿದೆ. ಇಲಾಖೆ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಿದ್ದು, ಜನರಿಗೆ ನಡೆದಾಡಲು ದಾರಿ ಇಲ್ಲದಂತಾಗಿದೆ.

ಇನ್ನು ಇಲಾಖೆ ಆವರಣದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಶೌಚಾಲಯಗಳು ಸಹ ನಿರ್ವಹಣೆ ಕೊರತೆ ಎದುರಿಸುತ್ತಿದ್ದು, ಜನರು ಇಲಾಖೆಯ ಕಾಂಪೌಂಡ್‌ ಗೋಡೆಗಳಿಗೆ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಜಲಬಾಧೆಯನ್ನು ತೀರಿಸಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next