Advertisement

ವಿಜಯನಗರ ಸಾಮ್ರಾಜ್ಯಕ್ಕೆ ಆನಂದ್‌ ಲೆಕ್ಕಾಚಾರ!

11:15 AM Sep 16, 2019 | Naveen |

•ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ವಿಜಯನಗರ ಜಿಲ್ಲೆ ರಚನೆಗಾಗಿ ಬೇಡಿಕೆಯಿಟ್ಟು ಇದಕ್ಕೆ ಮೈತ್ರಿ ಸರ್ಕಾರದಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಅನರ್ಹ ಶಾಸಕ ಬಿ.ಎಸ್‌. ಆನಂದ್‌ಸಿಂಗ್‌ ಈಗ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

Advertisement

ಬಿಜೆಪಿ ಸರ್ಕಾರ ರಚನೆಗೆ ತೆರೆಮರೆಯಲ್ಲಿದ್ದು ಬೆಂಬಲಿಸಿದ್ದ ಸಿಂಗ್‌ ಈಗ ಹೊಸಪೇಟೆ ತಾಲೂಕು ಜಿಲ್ಲೆಯಾಗಿಸುವ ನಿಟ್ಟಿನಲ್ಲೂ ಸದ್ದಿಲ್ಲದೇ ತಮ್ಮ ಕಾರ್ಯ ಮುಂದುವರಿಸಿದ್ದು, ಇದರ ಹಿಂದೆ ರಾಜಕೀಯ ಹಿತಾಸಕ್ತಿ ಅಡಗಿದೆಯೇ ಎಂಬ ಪ್ರಶ್ನೆಯೂ ಮೂಡಿದೆ. ತಮ್ಮ ಬೇಡಿಕೆ ಮುಂದಿಟ್ಟು ಆನಂದ್‌ ಸಿಂಗ್‌ ಸಿಎಂ ಯಡಿಯೂರಪ್ಪ ಬಳಿಗೆ ನಿಯೋಗ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಜ್ಜಯಿನಿ ಪೀಠದ ಶ್ರೀಗಳ ಬೆಂಬಲ ಕೋರಿದ್ದು, ತಾಲೂಕಿನ ಮುಖಂಡರನ್ನು ಸಹ ಸಂಘಟನೆಯಲ್ಲಿ ತೊಡಗಿಸಿದ್ದಾರೆ.

ಹೊಸಪೇಟೆ ತಾಲೂಕನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂಬ ಕೂಗು ಕಳೆದ ಒಂದು ದಶಕದಿಂದ ಕೇಳಿಬರುತ್ತಿದೆ. ಇದಕ್ಕಾಗಿ ಹೊಸಪೇಟೆಯಲ್ಲಿ ಹಲವಾರು ಹೋರಾಟಗಳು ನಡೆದಿವೆ. ಆದರೆ ಕೆಲ ವರ್ಷಗಳಿಂದ ಕ್ಷೀಣಿಸಿದ್ದ ಈ ಕೂಗಿಗೆ ಇದೀಗ ಶಾಸಕ ಆನಂದ್‌ಸಿಂಗ್‌ ಮತ್ತೆ ಬಲ ತುಂಬುತ್ತಿದ್ದಾರೆ.

ಪ್ರತ್ಯೇಕ ಜಿಲ್ಲೆ ಬೇಡಿಕೆ ಇಟ್ಟಿದ್ದ ಆನಂದ ಸಿಂಗ್‌ ಇದಕ್ಕೆ ಸ್ಪಂದನೆ ದೊರೆತಿಲ್ಲ ಎಂಬ ಕಾರಣಕ್ಕೆ ಇತ್ತೀಚೆಗಷ್ಟೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಪರೋಕ್ಷವಾಗಿ ಸಹಕರಿಸಿರುವ ಸಿಂಗ್‌ ಈಗ ಮತ್ತೆ ತಮ್ಮ ಬೇಡಿಕೆಯನ್ನು ಸರ್ಕಾರದ ಮುಂದಿಡಲು ಮುಂದಾಗಿದ್ದು, ಇದರ ಭಾಗವಾಗಿ ಸೆ.18ರಂದು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಉಜ್ಜಯಿನಿ ಪೀಠದ ಶ್ರೀಗಳನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದಕ್ಕೆ ಶ್ರೀಗಳಿಂದಲೂ ಸಕಾರಾತ್ಮಕ ಸ್ಪಂದನೆ ಲಭಿಸಿದೆ ಎನ್ನಲಾಗುತ್ತಿದೆ. ವಿಜಯನಗರ ಜಿಲ್ಲೆಯಾದರೆ ಇದರ ವ್ಯಾಪ್ತಿಗೆ ಬರುವ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ನೇಮಿರಾಜ ನಾಯ್ಕ, ಹಡಗಲಿ ಮಾಜಿ ಶಾಸಕ ಚಂದ್ರನಾಯ್ಕ ಸೇರಿದಂತೆ ರಾಜಕೀಯ ಮುಖಂಡರು, ಜನರನ್ನು ಸಹ ಸಂಘಟನೆಯಲ್ಲಿ ತೊಡಗಿಸಿದ್ದಾರೆ.

ಬಳ್ಳಾರಿಯಿಂದ ಮುಕ್ತಿ; ರಾಜಕೀಯ ಹಿತಾಸಕ್ತಿ? ಬಳ್ಳಾರಿ ಎಂದಾಕ್ಷಣ ಸಚಿವ ಬಿ. ಶ್ರೀರಾಮುಲು, ರೆಡ್ಡಿ ಸಹೋದರರದ್ದೇ ಹವಾ. ವಿಜಯನಗರ ಕ್ಷೇತ್ರದ ಅನರ್ಹ ಶಾಸಕ ಬಿ.ಎಸ್‌.ಆನಂದ್‌ಸಿಂಗ್‌ ಸಹ ರೆಡ್ಡಿ ಪಾಳಯದಲ್ಲೇ ಬೆಳೆದ ಪ್ರಭಾವಿ ರಾಜಕಾರಣಿ. ಆದರೆ ಸದ್ಯಕ್ಕೆ ಆನಂದ್‌ಸಿಂಗ್‌ ರಾಜಕೀಯವಾಗಿ ಮತ್ತಷ್ಟು ಬೆಳೆಯಲು ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ವರ್ಚಸ್ಸು ಅಡ್ಡಿಯಾಗುತ್ತಿದೆ. ವಿಜಯನಗರ ಕ್ಷೇತ್ರ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲೇ ಇರುವುದರಿಂದ ಸ್ವತಂತ್ರವಾಗಿ ರಾಜಕೀಯದಲ್ಲಿ ಬೆಳೆಯುವುದು ಅಷ್ಟು ಸುಲಭವಲ್ಲ. ಈ ತಾಂತ್ರಿಕ ಸಮಸ್ಯೆ ಆನಂದ್‌ಸಿಂಗ್‌ ಅವರಿಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿಸಿ ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟರೆ ರೆಡ್ಡಿ, ರಾಮುಲು ಪಾಳಯದಿಂದ ಹೊರಬಂದು ಜಿಲ್ಲೆಯಲ್ಲಿ ತನ್ನದೇ ವರ್ಚಸ್ಸು ಹೆಚ್ಚಿಸಿಕೊಳ್ಳಬಹುದು ಎಂಬುದು ಆನಂದ್‌ಸಿಂಗ್‌ ರಾಜಕೀಯ ಲೆಕ್ಕಾಚಾರ. ಆದ್ದರಿಂದ ಹಲವು ವರ್ಷಗಳ ಹಿಂದೆ ನನೆಗುದಿಗೆ ಬಿದ್ದಿದ್ದ ವಿಜಯನಗರ ಜಿಲ್ಲೆ ರಚನೆ ಹೋರಾಟದ ಕೂಗಿಗೆ ಧ್ವನಿ ಗೂಡಿಸಿದ್ದಾರೆ ಎನ್ನಲಾಗುತ್ತಿದೆ.

Advertisement

ಹೊಸಪೇಟೆ ತಾಲೂಕನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡುವಲ್ಲಿ ಅನರ್ಹ ಶಾಸಕ ಬಿ.ಎಸ್‌.ಆನಂದ್‌ಸಿಂಗ್‌ ಅವರ ರಾಜಕೀಯ ಲೆಕ್ಕಾಚಾರವೂ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ವಿಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಶೀಘ್ರದಲ್ಲೇ ನಡೆಯಲಿರುವ ಉಪಚುನಾವಣೆಗೂ ಮುನ್ನವೇ ವಿಜಯನಗರ ಜಿಲ್ಲೆ ಘೋಷಣೆಯಾದರೆ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ಗೆ ಗೆಲುವು ಸುಲಭವಾಗಲಿದೆ. ಜತೆಗೆ ಸಚಿವರಾದರೂ ಅಚ್ಚರಿ ಇಲ್ಲ. ಅದಕ್ಕಾಗಿಯೇ ಉಪಚುನಾವಣೆ ಮುನ್ನವೇ ವಿಜಯನಗರ ಜಿಲ್ಲೆ ರಚನೆಗೆ ಹೋರಾಟದ ಕಿಚ್ಚು ಹೆಚ್ಚಿಸುವ ಉದ್ದೇಶ ಆನಂದ್‌ ಸಿಂಗ್‌ ಅವರದ್ದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆನಂದ್‌ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸರ್ಕಾರದ ಮೇಲೆ ಒತ್ತಡ
ಸೆ.18ರಂದು ನಿಯೋಗದೊಂದಿಗೆ ಸಿಎಂ ಭೇಟಿಯಾಗಲು ಸಜ್ಜಾಗುತ್ತಿರುವ ಅನರ್ಹ ಶಾಸಕ ಆನಂದ್‌ಸಿಂಗ್‌, ಜಿಲ್ಲೆಯ ಎಲ್ಲ ಕ್ಷೇತ್ರಗಳ ಸಂಘಟನೆಗಳ ಮೂಲಕ ಮನವಿ ಪತ್ರ ಬರೆಸಲು ಪ್ರಯತ್ನಿಸುತ್ತಿದ್ದಾರೆ. ಈ ಜನಾಭಿಪ್ರಾಯದ ಪತ್ರ ಸಿಎಂಗೆ ಸಲ್ಲಿಸಿ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ರಚಿಸುವಂತೆ ಒತ್ತಡ ಹೇರಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next