ಬಳ್ಳಾರಿ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ. 4ರಿಂದ ಮಾ. 23ರವರೆಗೆ 32 ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ರೀತಿಯ ಗೊಂದಲಗಳ ಆಸ್ಪದಕ್ಕೆ ಅವಕಾಶ ಮಾಡಿಕೊಡದಂತೆ ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 32 ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲಗಳಿಗೆ ಆಸ್ಪದ ನೀಡದಂತೆ ಹಾಗೂ ನಕಲು ಮಾಡಲು ಅವಕಾಶ ಕೊಡದಂತೆ ಪರೀಕ್ಷೆ ನಡೆಸಬೇಕು. ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿರುವ ಸಿಬ್ಬಂದಿ ನೀಡಲಾಗಿರುವ ಐಡಿಕಾರ್ಡ್ ಕಡ್ಡಾಯವಾಗಿ ಧರಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸ್ಟಾಪ್ ನರ್ಸ್ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
30899 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿರುವ 161 ಪದವಿಪೂರ್ವ ಕಾಲೇಜುಗಳ 15,906 ವಿದ್ಯಾರ್ಥಿ, 14,993 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 30,899 ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಕುಳಿತುಕೊಳ್ಳಲಿದ್ದಾರೆ. 2019ರಲ್ಲಿ 22 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಈ ಬಾರಿ ಹರಪನಳ್ಳಿ ತಾಲೂಕಿನ 5 ಮತ್ತು ಬಳ್ಳಾರಿ ಜಿಲ್ಲೆಗೆ ಹೊಸದಾಗಿ 5 ಕೇಂದ್ರಗಳು ಸೇರಿಸಿ ಒಟ್ಟಾರೆ 32 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಆಸನದ ವ್ಯವಸ್ಥೆ, ಪೀಠೊಪಕರಣಗಳ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಗಾಳಿ ಬೆಳಕಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ನೋ ಎಕ್ಸಟ್ರಾ ಪೇಪರ್: ಇದೇ ಮೊದಲ ಬಾರಿಗೆ ಉತ್ತರ ಪತ್ರಿಕೆಯಲ್ಲಿ ಪುಟಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. 40 ಪುಟಗಳು(38+2) ಇರುವ ಪತ್ರಿಕೆಯನ್ನು ಒದಗಿಸಲಿದೆ. ಹೆಚ್ಚುವರಿ ಹಾಳೆ ನೀಡುವುದನ್ನು ಇದೇ ವರ್ಷದಿಂದ ಸ್ಥಗಿತಗೊಳಿಸಲಾಗಿದೆ. ಪ್ರತಿ ವಿದ್ಯಾರ್ಥಿಯು ಉತ್ತರ ಪತ್ರಿಕೆಯಲ್ಲಿ ಉತ್ತರಿಸುವುದನ್ನು ಅಂತ್ಯಗೊಳಿಸಿದ ಪುಟಕ್ಕೆ ನಂತರದ ಪುಟದಲ್ಲಿ ಮುಕ್ತಾಯಗೊಂಡಿದೆ ಎಂಬ ರಬ್ಬರ್ ಸೀಲ್‌ನ್ನು ಹಾಕಿ ಕೋಣೆ
ಮೇಲ್ವಿಚಾರಕರು ತಪ್ಪದೇ ಸಹಿ ಮಾಡಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಡಿಸಿ ನಕುಲ್ ಅವರು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುತ್ತದೆ. ಎಲ್ಲ ಝರಾಕ್ಸ್ ಸೆಂಟರ್‌ಗಳು ಮತ್ತು ಸೈಬರ್ ಕೆಫೆಗಳನ್ನು ಮುಚ್ಚಿಸುವುದಕ್ಕೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಮೊಬೈಲ್ ಫೋನ್ ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧ: ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಒಳಗಡೆ ಮೊಬೈಲ್ ಫೋನ್‌ಗಳನ್ನು,ಸ್ಮಾರ್ಟ್ ವಾಚ್‌ಗಳನ್ನು, ಕ್ಯಾಲ್ಕೂಲೇಟರ್ ಹಾಗೂ ಇನ್ನೀತರ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮಾತ್ರ ಕ್ಯಾಮೆರಾ ಇಲ್ಲದ ಬೇಸಿಕ್ ಮೊಬೈಲ್ ಹ್ಯಾಂಡ್‌ಸೆಟ್ ಬಳಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಧಿಕಾರಿ ನಕುಲ್ ವಿವರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ,ಡಿಡಿಪಿಐ ರಾಮಪ್ಪ ಸೇರಿದಂತೆ
ತಹಶೀಲ್ದಾರ್‌ರು, ಖಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿ ಕಾರಿಗಳು, ಬಿಆರ್‌ಸಿಗಳು, 32 ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಧೀಕ್ಷಕರು ಇದ್ದರು.