Advertisement

ಬಳ್ಳಾರಿ: ವಿನಾಶದ ಅಂಚಿಗೆ ಸಂಡೂರು ನೈಸರ್ಗಿಕ ಸಂಪತ್ತು?

05:43 PM Jul 08, 2024 | Team Udayavani |

ಉದಯವಾಣಿ ಸಮಾಚಾರ
ಬಳ್ಳಾರಿ: ಗಣಿನಾಡಿನ ಸಸ್ಯಕಾಶಿ ಎಂದೇ ಖ್ಯಾತಿಗಳಿಸಿರುವ ಸಂಡೂರು ಕಾಡಿನಲ್ಲಿರುವ ಗಣಿ ಇನ್ನೂ ಕೆಲವೇ ವರ್ಷಗಳಲ್ಲಿ ಖಾಲಿಯಾಗಿ, ಅಲ್ಲಿನ ಜನ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಜೀವನ ಸಂಪೂರ್ಣ ವಿನಾಶದ ಅಂಚಿಗೆ ತಲುಪಲಿದೆಯಾ? ಇಂತಹದೊಂದು ಆತಂಕ ಸೃಷ್ಟಿಸುವ ವಿಚಾರವನ್ನು ಜನಸಂಗ್ರಾಮ ಪರಿಷತ್‌ ಸದಸ್ಯರಾದ ಶ್ರೀಶೈಲ ಆಲ್ದಳ್ಳಿ, ಟಿ.ಎಂ.ಶಿವಕುಮಾರ್‌, ಮೂಲೆಮನೆ ಈರಣ್ಣ, ನಾಗರಾಜ ಜಿ.ಕೆ. ಅವರು, ಈಚೆಗೆ ಜಿಲ್ಲೆಗೆ ಆಗಮಿಸಿದ್ದ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರಿಗಳ ಸಮಿತಿ (ಸಿಇಸಿ)ಗೆ ಸಲ್ಲಿಸಿರುವ ಮನವಿಯಲ್ಲಿ ಹೊರಹಾಕಿದೆ. ಸುಪ್ರೀಂ ಕೋರ್ಟ್‌ಗೆ ಈ ಎಲ್ಲ ಅಂಶಗಳನ್ನು ಸೇರಿಸಿ, ವರದಿ ಸಲ್ಲಿಸಬೇಕು ಎಂದೂ ಕೋರಿದೆ.

Advertisement

ಇದನ್ನೂ ಓದಿ:Ex-Minister ಬಿ.ಸಿ.ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ

ಈ ಭಾಗದಲ್ಲಿ ಸದ್ಯ ವರ್ಷಕ್ಕೆ 45 ಮೆಟ್ರಿಕ್‌ ಟನ್‌ ನಷ್ಟು ಅದಿರನ್ನು ಭೂಮಿಯಿಂದ ಹೊರ ತೆಗೆಯಲಾಗುತ್ತಿದೆ. ಬಗೆದ ಅದಿರನ್ನು ಬೇರೆಡೆಗೆ ಸಾಗಿಸಲು ಪ್ರತಿನಿತ್ಯ 4-5 ಸಾವಿರ ಲಾರಿಗಳು ಈ ಭಾಗದಲ್ಲಿ ಸಂಚರಿಸುತ್ತವೆ. ಇದರಿಂದ ಅನೇಕ ಅವಘಡಗಳು ಸಂಭವಿಸುತ್ತವೆ. ಇಂಡಿಯನ್‌ ಬ್ಯುರೊ ಆಫ್‌ ಮೈನ್ಸ್‌ 2018ರಲ್ಲಿ ಅಂದಾಜಿಸಿದಂತೆ ಸಂಡೂರು ಭಾಗದಲ್ಲಿ 2500 ಮಿಲಿನಯ್‌ ಮೆಟ್ರಿಕ್‌ ಟನ್‌ (ಎಂಎಂಟಿ) ಕಬ್ಬಿಣದ ಅದಿರು ಇದ್ದು, ಈ ಪೈಕಿ ಅದಾಗಲೇ 700-800 ಎಂಎಂಟಿ ಅದಿರನ್ನು ನೆಲದಿಂದ ತೆಗೆಯಲಾಗಿದೆ.

ಗಣಿ ತೆಗೆಯುವ ಮೇಲೆ ಕಡಿವಾಣ ಹಾಕದೇ ಇದ್ದರೆ ಇನ್ನು ಉಳಿದಿರುವ 1600-1700 ಎಂಎಂಟಿ ಅದಿರು ಇನ್ನು 15-16 ವರ್ಷದಲ್ಲಿ ಖಾಲಿ ಆಗಿ ಹೋಗಲಿದೆ. ಇದರಿಂದ ಪ್ರಕೃತಿಯಲ್ಲಿ ಆಗುವ ವ್ಯತ್ಯಾಸ ಮತ್ತು ಇಲ್ಲಿನ ಕಾಡು, ಜನ, ಕಾಡು ಜೀವಿಗಳ ಸ್ಥಿತಿ ಯಾವ ಮಟ್ಟಕ್ಕೆ ಹೋಗಲಿದೆ ಎಂಬುದನ್ನು ಗಮನಿಸಬೇಕು ಎಂದು ಪರಿಷತ್‌ನ ಸದಸ್ಯರು ಮನವಿಯಲ್ಲಿ ಕೋರಿದ್ದಾರೆ.

ಸಂಡೂರಿನ ಕಾಡಿನಲ್ಲಿ ಅಪರೂಪದ ಸಸ್ಯಗಳ ರಾಶಿಯೇ ಇದೆ ಎಂದು ಈ ಹಿಂದೆ ಅರಣ್ಯ ಇಲಾಖೆಯ ಡಿಸಿಎಫ್‌, ಎಸಿಎಫ್‌, ಐಎಫ್‌ಎಸ್‌ ಅಧಿಕಾರಿಗಳು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇದೀಗ ಜನಸಂಗ್ರಾಮ ಪರಿಷತ್‌ ಅತೀ ಕಾಳಜಿ ವಹಿಸಿ, ಕಲೆಹಾಕಿರುವ ಮಾಹಿತಿ ಪ್ರಕಾರ ಇನ್ನೂ 15 ವರ್ಷದಲ್ಲಿ ಇಂದು ಅತಿ ಸುಂದರವಾಗಿ ಕಾಣುವ ಕಾಡಿನ ಚಿತ್ರಣ ಸಂಪೂರ್ಣ ಬದಲಾಗಲಿದೆ. ಮರಳುಗಾಡಿನಂತೆ ಆದರೂ ಅಚ್ಚರಿ ಇಲ್ಲ.

Advertisement

ಅತ್ಯುತ್ತಮ ಮಳೆ ಆಗುವ ಪ್ರದೇಶಗಳ ಪೈಕಿ ಸಂಡೂರು ಒಂದು. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಬೀಳುವ ಪ್ರಮಾಣ ಇಳಿಕೆ ಆಗುತ್ತಿದೆ. ಮಳೆಯಾದರೂ ನಂತರ ಗುಡ್ಡಗಳಿಂದ ಹರಿದು ಬರುವ ನೀರಿಗೆ ಇರುವ ಪ್ರಾಕೃತಿಕ ಮಾರ್ಗಗಳು ಗಣಿಗಾರಿಕೆಯಿಂದ ಸಂಪೂರ್ಣ ನಾಶವಾಗಿವೆ. ಪರಿಣಾಮ ಅಳಿದುಳಿದ ಗುಡ್ಡಗಳ ಮೇಲೂ ಇದು ದೊಡ್ಡ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಶ್ರೀ ಕುಮಾರ ಸ್ವಾಮಿ ನೆಲೆಸಿರುವ ಈ ನಾಡು ಇದೀಗ ಎಲ್ಲರಿಗೂ ಅಚ್ಚುಮೆಚ್ಚು. ಮಹಾತ್ಮ ಗಾಂಧಿ  ಒಂದೆರಡು ಬಾರಿ ಭೇಟಿ ನೀಡಿ, ಇಲ್ಲಿನ ಪ್ರಕೃತಿ ಸೌಂದರ್ಯ ಕಂಡು “ಸೀ ಸಂಡೂರ್‌ ಇನ್‌ ಸೆಪ್ಟೆಂಬರ್‌’ ಎಂದು ಉದ್ಘಾರ ತೆಗೆದಿದ್ದರು. ಕೆಎಂಆರ್‌ಇಸಿ ಮೂಲಕ ಅದೆಷ್ಟೇ ಗಿಡ ಬೆಳೆಸಿದರೂ ಪ್ರಾಕೃತಿಕವಾಗಿ ಬೆಳೆದ ಕಾಡಿಗೆ ಸಮ ಆಗಲಾರದು ಎಂದು ಮನವಿಯಲ್ಲಿ ಅಲವತ್ತುಕೊಳ್ಳಲಾಗಿದೆ. ಸಿಇಸಿ ಅಧಿಕಾರಿಗಳು ಸಲ್ಲಿಸುವ ವರದಿಯನ್ನು ಆಧರಿಸಿ ಸುಪ್ರೀಂಕೋರ್ಟ್‌ ಯಾವ ರೀತಿ ನಿರ್ಣಯ
ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next