Advertisement

ರೆಡ್ಡಿ ಮನೆ ಎದುರು ಜಮೀರ್‌ ಧರಣಿಗೆ ಪಕ್ಷದಲ್ಲೇ ವಿರೋಧ

04:05 PM Jan 12, 2020 | |

ಬಳ್ಳಾರಿ: ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿಯವರ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಶಾಸಕರ ಮನೆ ಎದುರು ಧರಣಿ ನಡೆಸಲು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಲ್ಲೇ ಪರ-ವಿರೋಧ ವ್ಯಕ್ತವಾಗುತ್ತಿದೆ.

Advertisement

ಮಾಧ್ಯಮಗಳ ಎದುರು ಹೇಳಿದಂತೆ ಶಾಸಕ ಜಿ. ಸೋಮಶೇಖರರೆಡ್ಡಿ ಮನೆ ಎದುರು ಧರಣಿ ನಡೆಸಲು ಅನುಮತಿ ಕೋರಿ ಶಾಸಕ ಜಮೀರ್‌ ಅಹ್ಮದ್‌ ಬಳ್ಳಾರಿ ಎಸ್‌ಪಿಗೆ ಮನವಿ ಸಲ್ಲಿಸಿದ್ದರೆ ಅನುಮತಿ ನೀಡಬಾರದು ಎಂದು ಅದೇ ಪಕ್ಷದ ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಎಸ್‌ಪಿ ಅವರಿಗೆ ಮತ್ತೂಂದು ಮನವಿ ಸಲ್ಲಿಸಿದ್ದು ಕುತೂಹಲ ಮೂಡಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜ. 3ರಂದು
ಬಳ್ಳಾರಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ದೇಶಭಕ್ತ ನಾಗರಿಕ ವೇದಿಕೆಯಿಂದ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿಯವರು ಪ್ರಚೋದನಕಾರಿ ಭಾಷಣ ಮಾಡಿದ್ದರು.

ಒಂದು ಸಮುದಾಯ, ಕಾಂಗ್ರೆಸ್‌ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಅವಾಚ್ಯ
ಶಬ್ದಗಳಿಂದ ನಿಂದಿಸಿದ್ದರು. ಇದಕ್ಕೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಸೇರಿ, ಕಾಂಗ್ರೆಸ್‌ ಮುಖಂಡರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಪ್ರಚೋದನಕಾರಿ ಭಾಷಣ ಮಾಡಿದ್ದ ಸೋಮಶೇಖರ ರೆಡ್ಡಿಯವರನ್ನು ಬಂಧಿ ಸಿ 153ಎ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್‌ ಮುಖಂಡರು ಡಿಸಿ, ಎಸ್‌ಪಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿದ್ದ ಶಾಸಕ ಜಮೀರ್‌ ಅಹ್ಮದ್‌, ಶಾಸಕ ಸೋಮಶೇಖರರೆಡ್ಡಿಯವರು ಕೂಡಲೇ ಕ್ಷಮೆಯಾಚಿಸಬೇಕು. ಅವರ ವಿರುದ್ಧ
ಪ್ರಕರಣ ದಾಖಲಿಸಬೇಕು ಎಂದು ಒಂದು ವಾರಗಳ ಕಾಲ ಗಡುವು ನೀಡಿದ್ದರು. ಇಲ್ಲದಿದ್ದರೆ ಮುಂದಿನ ಸೋಮವಾರ ಶಾಸಕ ಸೋಮಶೇಖರರೆಡ್ಡಿ ಮನೆ ಎದುರು ಧರಣಿ ನಡೆಸುವುದಾಗಿ ಹೇಳಿದ್ದರು.

ಹೇಳಿಕೆಯಂತೆ ಶಾಸಕ ಜಮೀರ್‌ ಅಹ್ಮದ್‌ ಅವರು ಜ. 13ರಂದು ಶಾಸಕ ಸೋಮಶೇಖರ
ರೆಡ್ಡಿಯವರ ನಿವಾಸದ ಎದುರು ಧರಣಿ ನಡೆಸಲು ಸಜ್ಜಾಗಿದ್ದು ಪೊಲೀಸ್‌ ಭದ್ರತೆ ಕೋರಿ ಬಳ್ಳಾರಿ ಎಸ್‌ಪಿ ಸಿ.ಕೆ.ಬಾಬಾ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಜಮೀರ್‌ ಅಹ್ಮದ್‌ ಅವರ
ಮನವಿಗೆ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ, ವಿಧಾನಪರಿಷತ್‌ ಸದಸ್ಯ ಕೆ.ಸಿ.ಕೊಂಡಯ್ಯ
ಅವರಿಂದಲೇ ವಿರೋಧ ವ್ಯಕ್ತವಾಗಿದ್ದು, ಧರಣಿ ನಡೆಸಲು ಅನುಮತಿ ನೀಡದಂತೆ ಎಸ್‌ಪಿ ಅವರಿಗೆ ಮತ್ತೂಂದು ಮನವಿ ಸಲ್ಲಿಸಿದ್ದಾರೆ.

Advertisement

ಸದ್ಯ ಬಳ್ಳಾರಿ ಶಾಂತವಾಗಿದೆ. ಈ ಹಿಂದೆ ಬಳ್ಳಾರಿಯಲ್ಲಿ ಎಂದೂ ಸಹ ಕೋಮುಗಲಭೆಗಳು
ನಡೆದಿಲ್ಲ. ಇಲ್ಲಿ ಎಲ್ಲ ಕೋಮಿನವರು ಸೌಹಾರ್ದತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಇಂಥ ಬಳ್ಳಾರಿಯಲ್ಲಿ ಜಮೀರ್‌ ಅಹ್ಮದ್‌ ಅವರು ಬಂದು ರೆಡ್ಡಿ ಮನೆ ಎದುರು ಧರಣಿ ನಡೆಸುವ ಅಗತ್ಯವಿಲ್ಲ. ಮೇಲಾಗಿ ಇಲ್ಲಿನ ಮುಖಂಡರಾರೂ ಬಂದು ಧರಣಿ ಮಾಡಿ ಎಂದು ಕೇಳಿಲ್ಲ.
ಈಗಾಗಲೇ ರೆಡ್ಡಿಯವರ ವಿರುದ್ಧ ಪ್ರಕರಣ ದಾಖಲಾಗಿದ್ದು ಕ್ರಮ ಜರುಗಿಸುವ ಭರವಸೆ ಇದೆ. ಇಲ್ಲದಿದ್ದಲ್ಲಿ ಜಿಲ್ಲೆಯ ಮುಖಂಡರು ಹೋರಾಟ ಮಾಡಲು ಸಮರ್ಥರಿದ್ದಾರೆ. ಇಲ್ಲದ ಪರಿಸ್ಥಿತಿಗಳಿಗೆ ಎಡೆಮಾಡಿಕೊಡುವುದು ಬೇಡ ಎಂದು ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಮನವಿಯಲ್ಲಿ ಕೋರಿದ್ದಾರೆ.

ನಾಗೇಂದ್ರ ಮಾತುಕತೆ: ಸೋಮಶೇಖರ ರೆಡ್ಡಿ ಮನೆ ಎದುರು ಜಮೀರ್‌ ಅಹ್ಮದ್‌ ಧರಣಿಗೆ ಸಂಬಂಧಿ  ಸಿದಂತೆ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಸಹ ಆಕ್ಷೇಪ ವ್ಯಕ್ತಪಡಿಸಿದ್ದರು. ಧರಣಿ ನಡೆಸುವುದು ಬೇಡ. ಜಮೀರ್‌ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಈಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಹೀಗೆ ಜಮೀರ್‌ ಅಹ್ಮದ್‌ ಅವರು ರೆಡ್ಡಿ ಮನೆ ಎದುರು ಧರಣಿಗೆ ಸ್ವಪಕ್ಷದಲ್ಲೇ ಆಕ್ಷೇಪ, ಪರ-ವಿರೋಧಗಳು ವ್ಯಕ್ತವಾಗುತ್ತಿದ್ದು ಜಮೀರ್‌ ಅಹ್ಮದ್‌ ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಾಗಿದೆ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next