Advertisement

ಜಿಲ್ಲಾದ್ಯಂತ ಗಣರಾಜ್ಯೋತ್ಸವ ಸಂಭ್ರಮ

12:47 PM Jan 27, 2020 | Naveen |

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವದಲ್ಲಿ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರು ಭಾನುವಾರ ಧ್ವಜಾರೋಹಣ ನೆರವೇರಿಸಿದರು.

Advertisement

ಬಳಿಕ ತೆರೆದ ವಾಹನದಲ್ಲಿ ಗೌರವಂದನೆ ಸ್ವೀಕರಿಸಿದರು. ನಂತರ ಪೊಲೀಸ್‌, ಗೃಹರಕ್ಷಕದಳ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು ಆಕರ್ಷಕವಾದ ಪಥಸಂಚಲನ ಮೂಲಕ ಧ್ವಜವಂದನೆ ಸಲ್ಲಿಸಿದರು. ಗಣರಾಜ್ಯೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ, ಜಿಲ್ಲಾ ಉಸ್ತುವಾರಿ ಲಕ್ಷ್ಮಣ ಸವದಿ, ಜನವರಿ 26ರಂದು ಇಡೀ ಸ್ವತಂತ್ರ ಭಾರತವನ್ನು ‘ಗಣರಾಜ್ಯವೆಂದು’ ಘೋಷಿಸಲಾಯಿತು. ಈ ದಿನದಂದೇ ಮಹಾನ್‌ ಮಾನವತಾವಾದಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ರಚಿಸಿದ ಭಾರತದ ಸಂವಿಧಾನ ಜಾರಿಗೊಂಡಿತು. ಗಣ ರಾಜ್ಯೋತ್ಸವ ಭಾರತದ ಒಂದು ರಾಷ್ಟ್ರೀಯ ಹಬ್ಬವಾಗಿದ್ದು, ಇದನ್ನು “”ಪ್ರಜಾರಾಜ್ಯೋತ್ಸವ” ಎಂಥಲೂ ಕರೆಯುತ್ತೇವೆ. ದೇಶಕ್ಕೆ ಪ್ರಜಾಪ್ರಭುತ್ವದ ಆಡಳಿತ ಪದ್ಧತಿಯನ್ನು ಅಳವಡಿಸಿಕೊಂಡ ಸಂಭ್ರಮದ ಐತಿಹಾಸಿಕ ದಿನ ಇದಾಗಿದೆ ಎಂದರು.

ಬಳ್ಳಾರಿ ಜಿಲ್ಲೆಯು ಅತ್ಯಂತ ವಿಶಿಷ್ಟ ಜಿಲ್ಲೆಯಾಗಿದೆ. ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಹಿನ್ನೆಲೆಯಲ್ಲಿಯೂ ಈ ಜಿಲ್ಲೆಗೆ ಮಹತ್ವದ ಸ್ಥಾನವಿದೆ. ಜಗತ್ತಿನಲ್ಲಿಯೇ ಶ್ರೇಷ್ಠ ದರ್ಜೆಯ ಕಬ್ಬಿಣ ಮತ್ತು ಉಕ್ಕಿನಾಂಶಗಳಿರುವ ಅಪಾರ ಖನಿಜ ಸಂಪತ್ತನ್ನು ಹೊಂದಿದೆ. ಇಡೀ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಗುಣಮಟ್ಟದ ಕಬ್ಬಿಣದ ಖನಿಜಗಳನ್ನು ಹೊಂದಿದ ದಾಖಲೆ ಈ ಜಿಲ್ಲೆಗಿದೆ. ಐತಿಹಾಸಿಕ ಮತ್ತು ಪ್ರವಾಸೋದ್ಯಮ ದೃಷ್ಟಿಯಿಂದಲೂ ಈ ಜಿಲ್ಲೆಯಲ್ಲಿ ಹಂಪಿಗೆ ವಿಶೇಷ ಆಕರ್ಷಣೆ ಇದೆ ಎಂದು ಗುಣಗಾನ ಮಾಡಿದರು.

ನಂತರ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇವೇಳೆ ಉತ್ತಮವಾಗಿ ಪಥಸಂಚಲನ ನಡೆಸಿದ ಶಾಲಾ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಯಿತು. ಸಾಧಕರಿಗೆ ಸನ್ಮಾನ: ಇದೇ ವೇಳೆ ರಾಜ್ಯ ಸರ್ಕಾರ ಉತ್ತಮ ಸೇವೆ, ಸಾಧನೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಆಯ್ಕೆಯಾದ ಜಿಲ್ಲೆಯ ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆಯ ಎಸ್‌.ಎಂ. ವಾಗೀಶ್‌ ಶಿವಾಚಾರ್ಯ, ಸಹಾಯಕ ಕೃಷಿ ನಿರ್ದೇಶಕ ಎನ್‌.ನಜೀರ್‌ ಅಹ್ಮದ್‌, ಶಸ್ತ್ರ ಚಿಕಿತ್ಸಕ ಡಾ| ಎನ್‌.ಸಲೀಮ್‌, ಸಹಾಯಕ ಆಡಳಿತಾ ಧಿಕಾರಿ ಕೆ.ಮಾರುತಿ, ಹ.ಬೊ.ಹಳ್ಳಿ ತಹಶೀಲ್ದಾರ್‌ ಆಶಪ್ಪ, ಹಡಗಲಿ ತಾಪಂ ಇಒ ಯು.ಎಚ್‌. ಸೋಮಶೇಖರ್‌, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಎಸ್‌.ರಾಜಶೇಖರ್‌, ಲೆಕ್ಕಾಧೀಕ್ಷಕ ಮಾಲತೇಶ್‌ ಮರಿಗೌಡರ್‌, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಗೌಡರನ್ನು ಸನ್ಮಾನಿಸಲಾಯಿತು. ಇವರೊಂದಿಗೆ ರಾಜ್ಯಮಟ್ಟದ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಸುದೀಕ್ಷಾ ಅವರನ್ನು ಸನ್ಮಾನಿಸಲಾಯಿತು.

ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಜಿ. ಸೋಮಶೇಖರರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌, ಜಿಪಂ ಸಿಇಒ ಕೆ. ನಿತೀಶ್‌, ಎಸ್ಪಿ ಸಿ.ಕೆ.ಬಾಬಾ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಎಎಸ್ಪಿ ಲಾವಣ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next