ಬಳ್ಳಾರಿ: ಮಾನಸಿಕ, ದೈಹಿಕ ವಿಶೇಷ ಚೇತನ ಮಕ್ಕಳ ಪುನರ್ವಸತಿ ಕೇಂದ್ರ, ಸೆಮಿನಾರ್ ಸಭಾಂಗಣ ನಿರ್ಮಿಸಲು ಸಂಗನಕಲ್ಲು ಗ್ರಾಮದ ಹೊರವಲಯದಲ್ಲಿನ 2 ಎಕರೆ ಪ್ರದೇಶ ಗುರುತಿಸಲಾಗಿದ್ದು, ಶೀಘ್ರ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ| ಬಿ. ಯೋಗಾನಂದ ರೆಡ್ಡಿ ತಿಳಿಸಿದ್ದಾರೆ.
ಶುಕ್ರವಾರ ಐಎಂಎ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ರೆಡ್ಡಿಯವರ ಸಹಯೋಗದೊಂದಿಗೆ ನಮ್ಮ ಸಂಘ ಕೇವಲ ವೈದ್ಯಕೀಯ ಸೇವೆ ಮಾತ್ರ ಸಲ್ಲಿಸದೆ, ಸಾಮಾಜಿಕ ಕಾರ್ಯಗಳ ಕಡೆ ಗಮನ ಹರಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಕಾರ್ಯಕ್ಕೆ ಮುಂದಾಗಿದೆ. ಇದರ ಭಾಗವಾಗಿ ಅಂಗವಿಕಲ ಮಕ್ಕಳಿಗೆ ವಸತಿ ಸಹಿತ ಪುನರ್ವಸತಿ ಕೇಂದ್ರದ ಜೊತೆ ಜೊತೆಗೆ ನಮ್ಮ ಸಂಘದ ಸೆಮಿನಾರ್‌ಗಳನ್ನು ನಡೆಸಲು ಬೇಕಾಗುವ ಸಭಾಂಗಣ ನಿರ್ಮಿಸಲಾಗುವುದು ಎಂದರು.
ಈ ಮಕ್ಕಳಿಂದ ಪೋಷಕರಿಗಾಗುವ ಹೊರೆಯನ್ನು ಸ್ವಲ್ಪ ಮಟ್ಟಿಗೆ ಇಳಿಸುವ ಪ್ರಯತ್ನ ಇದಾಗಿದೆ. ಬಡ ಜನತೆಗೆ ಇದು ಅನುಕೂಲವಾಗಲಿದೆ. ಕೇಂದ್ರವನ್ನು ಮೊದಲಿಗೆ 40 ಮಕ್ಕಳಿಗೆ ಆಗುವಷ್ಟು ನಿರ್ಮಿಸಲಾಗುವುದು. ನಂತರ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಒಂದೂವರೆ ವರ್ಷದಲ್ಲಿ ಕೆಲಸ ಮುಗಿಸಿ ಕೇಂದ್ರ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಜೆಡಿಎಸ್ ಮುಖಂಡ ಪ್ರತಾಪ್ ರೆಡ್ಡಿ ಮಾತನಾಡಿ, ಸಂಘದವರು ಕೇಂದ್ರ ಆರಂಭಕ್ಕೆ ಬೇರೆಡೆ ಸ್ಥಳ ಹುಡುಕುತ್ತಿರುವ ಮಾಹಿತಿ ತಿಳಿದಿತ್ತು. ನಮಗೂ ಇಂಥ ಆಸ್ಪತ್ರೆ ನಿರ್ಮಿಸುವ ಕನಸಿತ್ತು. ಹಾಗಾಗಿ ಸಂಘಕ್ಕೆ ಭೂಮಿ ನೀಡುವ ನಿರ್ಧಾರ ಕೈಗೊಂಡೆ ಎಂದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಇಂತಹ ಕೇಂದ್ರವಿಲ್ಲ. ಪೌಷ್ಟಿಕತೆ ಕೊರತೆ, ಗರ್ಭಿಣಿಯರ ಆರೋಗ್ಯ ಸಮಸ್ಯೆ ಮತ್ತು ಹೆರಿಗೆ ಸಮಯದ ತೊಂದರೆಗಳಿಂದ ಇಂತಹ ಮಕ್ಕಳು ಜನಿಸುತ್ತಾರೆ. ನಾವು ಎನ್ ಪಿಆರ್ ಫೌಂಡೇಷನ್ ವತಿಯಿಂದ ಸಂಘದ ಜೊತೆ ಸೇರಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಬೇರೆ ಪ್ರದೇಶಗಳಿಗೆ ಚಿಕಿತ್ಸೆಗೆ ಹೋದಾಗ ಮಕ್ಕಳನ್ನು ಅಲ್ಲಿ ದಾಖಲಿಸಿ, ಪೋಷಕರು ಸಮೀಪದಲ್ಲಿ ಮನೆ ಬಾಡಿಗೆ ಪಡೆದು ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಆದರೆ ನಮ್ಮ ಕೇಂದ್ರದಲ್ಲಿ ಆ ಸಮಸ್ಯೆ ಇಲ್ಲ. ಮಕ್ಕಳಿಗೆ ನಮ್ಮಲ್ಲಿಯೇ ವಸತಿ ನೀಡುತ್ತೇವೆ. ಪೋಷಕರು ಬಂದು ನೋಡಿಕೊಂಡು ಹೋಗಬಹುದು ಅಥವಾ ಅಲ್ಲಿಯೇ ತಂಗಬಹುದು ಎಂದರು. ಸಂಘದ ಜಿಲ್ಲಾ ಅಧ್ಯಕ್ಷ ಡಾ| ಅರುಣ್.ಎಸ್.ಕೆ ಮಾತನಾಡಿದರು. ಸಂಘದ ಡಾ| ರವಿಶಂಕರ ಸಜ್ಜನ್, ಬಿ.ಕೆ. ಸುಂದರ್, ಡಾ|ಮಹಿಪಾಲ್, ಡಾ. ಶ್ರೀಕಾಂತ್, ಡಾ| ಭರತ್ ಇದ್ದರು.