ಬಳ್ಳಾರಿ: ಕೋವಿಡ್ ವೈರಸ್ ನಿಯಂತ್ರಿಸುವ ಸಲುವಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸದೆ ಮೇ 3ರವರೆಗೆ ಮುಂದುವರಿದರೆ ಒಳ್ಳೆಯದು ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಹೇಳಿದರು.
ನಗರದ ಮಾರ್ಕಂಡೇಯ ದೇವಸ್ಥಾನದ ಆವರಣದಲ್ಲಿ ಪದ್ಮಶಾಲಿ ಸಮುದಾಯದಿಂದ ಸಮುದಾಯದ ಬಡಜನರಿಗೆ ರೇಷನ್‌ಕಿಟ್ ವಿತರಣೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಕೋವಿಡ್ ವೈರಸ್ ನಿಯಂತ್ರಣಕ್ಕೆ ಯಾವುದೇ ಔಷಧವಿಲ್ಲ. ಲಾಕ್‌ಡೌನ್‌ನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸದೆ ಮೇ 3ರವರೆಗೆ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು. ಮೇಲಾಗಿ ಲಾಕ್‌ಡೌನ್‌ನ್ನು ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿರುವ ಅಮೆರಿಕಾ, ಇಟಲಿ, ಸ್ಪೇನ್ ಸೇರಿ ಇನ್ನಿತರೆ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಜನರು ಮೃತಪಟ್ಟಿದ್ದಾರೆ. ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ನಮ್ಮ ದೇಶ ಸುರಕ್ಷಿತವಾಗಿ ಇರೋದು ಎಂದ ಶಾಸಕ ಸೋಮಶೇಖರ ರೆಡ್ಡಿ, ಲಾಕ್‌ಡೌನ್ ಸಡಿಲಿಕೆ ವಿಚಾರದಲ್ಲಿ ಸಿಎಂ ಯಡಿಯೂರಪ್ಪನವರದ್ದು ಯಾವುದೇ ತಪ್ಪಿಲ್ಲ. ಕೂಲಿ ಕೆಲಸ ಮಾಡುವ ಬಡಜನರು ಹಸಿವಿನಿಂದ ಬಳಲುತ್ತಾರೆ ಎಂಬ ಉದ್ದೇಶದಿಂದ ಲಾಕ್‌ಡೌನ್ ಸಡಿಲಿಕೆ ಮಾಡಿದ್ದರು.
ಎಲ್ಲವೂ ಬೇಡ ಎಂದಿದ್ದಕ್ಕೆ ಸಡಿಲಿಕೆಯನ್ನು ಹಿಂಪಡೆದಿದ್ದಾರೆ. ಇದು ಜನಾಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ದೇಶದ ಇತಿಹಾಸದಲ್ಲಿ ನರೇಂದ್ರ ಮೋದಿಯವರಂಥ ಪ್ರಧಾನಿ ಸಿಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದರೆ ಇಡಿ ದೇಶವೇ ಮನ್ನಣೆ ನೀಡುತ್ತದೆ ಎಂದವರು ಕೊಂಡಾಡಿದರು. ಇದಕ್ಕೂ ಮುನ್ನ ಪದ್ಮಶಾಲಿ ಸಮುದಾಯದ ಬಡಜನರಿಗೆ ಅಕ್ಕಿ, ಬೇಳೆ, ಎಣ್ಣೆ, ಸೋಪು ಸೇರಿ ಇತರೆ ವಿವಿಧ ದಿನಸಿ ವಸ್ತುಗಳುಳ್ಳ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು.
ಈ ವೇಳೆ ಪಾಲಿಕೆ ಸದಸ್ಯ ಮೋತ್ಕರ್ ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ವೀರಶೇಖರರೆಡ್ಡಿ, ಸಮುದಾಯದ ಮುಖಂಡ ಅವ್ವಾರು ಮಂಜುನಾಥ್ ಸೇರಿದಂತೆ ಹಲವರು ಇದ್ದರು.