Advertisement

ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ

05:14 PM May 29, 2020 | Naveen |

ಬಳ್ಳಾರಿ: ಎಪಿಎಂಸಿ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ರಾಜ್ಯವೂ ಸೇರಿದಂತೆ ಇಡೀ ಜಗತ್ತನ್ನು ಕೋವಿಡ್ ಆವರಿಸಿದೆ. ಲಕ್ಷಾಂತರ ಜನರ ಸಾವು-ನೋವುಗಳಾಗಿವೆ. ದಿನೇ ದಿನೇ ರೋಗವೂ ವ್ಯಾಪಕವಾಗುತ್ತಿದೆ. ಇಂಥ ಸನ್ನಿವೇಶವನ್ನು ನೆಪವಾಗಿಸಿಕೊಂಡು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಕಾರ್ಪೋರೇಟ್‌ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ಹಾದಿಯಲ್ಲೇ ಇದೀಗ ರಾಜ್ಯ ಸರ್ಕಾರವೂ ಹೊರಟಿದೆ. ಸಂಕಷ್ಟದಲ್ಲಿರುವ ರೈತರು, ಗ್ರಾಮೀಣ ಜನತೆಗೆ ರೇಷನ್‌, ಕೃಷಿ ಬ್ಯಾಂಕ್‌ ಸಾಲ, ಬೆಂಬಲ ಬೆಲೆ, ಉದ್ಯೋಗ ಖಾತರಿ ಜಾರಿ, ಆರ್ಥಿಕ ನೆರವು ನೀಡಬೇಕಾದ ಸಮಯದಲ್ಲಿ ರೈತರ ಬಾಗಿಲಿಗೆ ಮಾರುಕಟ್ಟೆ, ಎಪಿಎಂಸಿಗಳಲ್ಲಿರುವ ದೋಷಗಳಿಗೆ ಪರಿಹಾರ, ಸ್ಪರ್ಧಾತ್ಮಕ ಬೆಲೆ, ಮಾರುಕಟ್ಟೆ ಹೆಸರಿನಲ್ಲಿ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತ ವಿರೋಧಿ, ಕಾರ್ಪೊರೇಟ್‌ ಕಂಪನಿಗಳ ಪರವಾದ ನೀತಿಯನ್ನು ಜಾರಿ ಮಾಡಲು ಹೊರಟಿರುವುದು ಖಂಡನೀಯವಾಗಿದ್ದು, ಕೂಡಲೇ ಈ ಸುಗ್ರೀವಾಜ್ಞೆಯನ್ನು ವಾಪಸ್‌ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಯು.ಬಸವರಾಜ್‌, ವಿ.ಎಸ್‌. ಶಿವಶಂಕರ್‌, ಈ. ಹನುಮಂತಪ್ಪ, ವಿ.ನರಸಿಂಹರೆಡ್ಡಿ, ಸಂಗನಕಲ್ಲು ಕೃಷ್ಣ, ಕರಿಯಪ್ಪ ಗುಡಿಮನಿ, ಗೋವಿಂದ, ಮಾಧವರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next