ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಘೋಷಣೆಯಾದಾಗಿನಿಂದಲೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ತಮ್ಮ ನಿರ್ಧಾರವನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ.
ಇದೇ ಕಾರಣಕ್ಕೆ ತಮಗೆ ನೀಡಿದ್ದ ಬೆಂಗಳೂರಿನ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನೂ ಪರೋಕ್ಷವಾಗಿ ತಿರಸ್ಕರಿಸಿದ್ದಾರೆ. ನಿಗಮ ಸ್ಥಾನ ಘೋಷಣೆಯಾಗಿ ತಿಂಗಳಾದರೂ ಅಧಿ ಕಾರ ಸ್ವೀಕರಿಸದ ಗವಿಯಪ್ಪ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಹೊರತುಪಡಿಸಿ ಬೇರೇನೂ ಬೇಡ ಎಂದಿದ್ದು, ಅನರ್ಹ ಶಾಸಕರ ಪ್ರಕರಣದ ಸುಪ್ರೀಂಕೋರ್ಟ್ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ಪಕ್ಷ ಅಧಿಕಾರ ಹಿಡಿಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನರ್ಹ ಶಾಸಕರ ಪೈಕಿ ಆನಂದ ಸಿಂಗ್ ಅವರಿಗೆ ಈ ಕ್ಷೇತ್ರದ ಟಿಕೆಟ್ ನೀಡಲು ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ತೀರ್ಮಾನಿಸಿದೆ ಎನ್ನಲಾಗುತ್ತಿದೆ.
ಇದು ಪಕ್ಷದಲ್ಲೇ ಗೊಂದಲಕ್ಕೆ ಕಾರಣವಾಗಿದೆ. ಈ ಭಿನ್ನಮತ ಸರಿಪಡಿಸಲು ಯಡಿಯೂರಪ್ಪ ಕಳೆದ ಅ.9ರಂದು ಗವಿಯಪ್ಪ ಅವರಿಗೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಿ ಸಮಾಧಾನಪಡಿಸುವ ಯತ್ನ ಮಾಡಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿರುವ ಗವಿಯಪ್ಪ ಇನ್ನೂ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳದೆ ಅಸಮಾಧಾನ ಹೊರಹಾಕಿದ್ದಾರೆ.
243 ಕೋಟಿ ರೂ.ಅನುದಾನ: ಮತ್ತೊಂದೆಡೆ ಯಡಿಯೂರಪ್ಪ ಕ್ಷೇತ್ರದ ಅಭಿವೃದ್ಧಿಗೆ ಕಳೆದ ನ.8ರಂದು 243 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಕುತೂಹಲ ಮೂಡಿಸಿದೆ. ತುಂಗಭದ್ರಾ ನದಿಯಿಂದ ಪಾಪಿನಾಯಕನಹಳ್ಳಿ ಸೇರಿ ಗಣಿಪ್ರದೇಶ ವ್ಯಾಪ್ತಿಯ 18 ಕೆರೆ ಹಾಗೂ ನಾಲ್ಕು ಚೆಕ್ ಡ್ಯಾಂಗಳನ್ನು ತುಂಬಿಸುವ ಯೋಜನೆಗೆ ಅನುದಾನ ನೀಡಲಾಗಿದೆ. ಅಲ್ಲದೇ, ಇತ್ತೀಚೆಗಷ್ಟೇ 40.85 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸೇರಿ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು.
ಭೂಮಿಪೂಜೆ ವೇಳೆ ಅನರ್ಹ ಶಾಸಕ ಆನಂದ್ ಸಿಂಗ್ ಸಂಬಂ ಧಿಕರು ಕಾಣಿಸಿಕೊಂಡು ಗಮನ ಸೆಳೆದಿದ್ದರು. ಅಲ್ಲದೇ ಉಪಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ರಾಜ್ಯ ಸರ್ಕಾರ 243 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿ ರಾಜ್ಯ ಸರ್ಕಾರ ಪರೋಕ್ಷವಾಗಿ ಆನಂದ್ ಸಿಂಗ್ ಬೆನ್ನಿಗೆ ನಿಂತಿದೆ ಎಂಬ ಸಂದೇಶ ರವಾನಿಸಿದೆ.
ಸುಪ್ರೀಂಕೋರ್ಟ್ ಆದೇಶ ಅನರ್ಹರ ಪರವಾಗಿ ಬಂದರೆ ಬಿಜೆಪಿ ಟಿಕೆಟ್ ಆನಂದ್‌ಸಿಂಗ್‌ಗೆ ಇಲ್ಲದಿದ್ದರೆ ಅವರ ಬೆಂಬಲಿಗರಿಗೆ ಲಭಿಸುವುದು ಬಹುತೇಕ ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಪಕ್ಷದ ವರಿಷ್ಠರ ಮೇಲೆ ವಿಶ್ವಾಸವಿಟ್ಟಿರುವ ಗವಿಯಪ್ಪ ಸುಪ್ರೀಂಕೋರ್ಟ್ ತೀರ್ಪಿಗಾಗಿ ಎದುರು ನೋಡುತ್ತಿದ್ದು, ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದಾರೆ.