Advertisement

ಆರೋಗ್ಯಕರ ವಾತಾವರಣಕ್ಕೆ ಪ್ಲಾಸ್ಟಿಕ್ ಬಳಕೆ ಕೈಬಿಡಿ

07:28 PM Nov 04, 2019 | Naveen |

ಬಳ್ಳಾರಿ: ಸ್ವಚ್ಛ ಹಾಗೂ ಸುಂದರ ಆರೋಗ್ಯಕರ ವಾತಾವರಣ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಇಂದಿನಿಂದಲೇ ಪ್ಲಾಸ್ಟಿಕ್‌ ಬಳಕೆಯನ್ನು ಕೈಬಿಡಬೇಕು ಎಂದು ಆರ್‌ವೈಎಂಇಸಿ ಕಾಲೇಜು ಲೀಡ್‌ ಸಂಘಟನೆ ಮುಖ್ಯಸ್ಥ ಜಿ.ಎಂ.ಜಗದೀಶ್‌ ಹೇಳಿದರು.

Advertisement

ನಗರದ ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನ ಲೀಡ್‌ ಸಂಘಟನೆ ವಿದ್ಯಾರ್ಥಿಗಳು ಮಹಾತ್ಮಗಾಂಧೀಜಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ನಿಮಿತ್ತ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ಲಾಸ್ಟಿಕ್‌ ಬಳಕೆಯಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು. ಇದರಿಂದ ಪರಿಸರಕ್ಕ ಯಾವುದೇ ಉಪಯೋಗವಿಲ್ಲ ಎಂಬುದು ಪ್ರತಿಯೊಬ್ಬರ ಅರಿವಿಗಿದ್ದರೂ, ಪ್ಲಾಸ್ಟಿಕ್‌ ಬಳಕೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಇಂದಿನಿಂದಲೇ ಪ್ಲಾಸ್ಟಿಕ್‌ ಬಳಕೆಯನ್ನು ಕೈಬಿಟ್ಟು, ಆರೋಗ್ಯಕರ, ಉತ್ತಮ ವಾತಾವರಣ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳು, ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳ ಕುರಿತು ರಾಜ್ಯ ಸರ್ಕಾರ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಿದೆ.

ಜತೆಗೆ ನಮ್ಮ ಕಾಲೇಜು ಆಶ್ರಯದಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಬಹುತೇಕ ಕಡೆ ಪ್ಲಾಸ್ಟಿಕ್‌ ಬಳಕೆ ನಿರಂತರ ನಡೆದಿದೆ. ಕೂಡಲೇ ಪ್ರತಿಯೊಬ್ಬರೂ ಇಂದೇ ತ್ಯಜಿಸಬೇಕು ಎಂದು ಮನವಿ ಮಾಡಿದರು.

Advertisement

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ, ಪ್ಲಾಸ್ಟಿಕ್‌ ಮುಕ್ತ ಭಾರತ ಅಭಿಯಾನದ ಯಶಸ್ವಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಮಹನೀಯರ ಜಯಂತ್ಯುತ್ಸವ ನಿಮಿತ್ತ ನಮ್ಮ ಕಾಲೇಜಿನ ಲೀಡ್‌ ವಿದ್ಯಾರ್ಥಿಗಳು ಕಾಲೇಜಿನ ಸ್ಥಳವನ್ನು ಸಂಪೂರ್ಣ ಸ್ವಚ್ಚ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕಾಲೇಜಿನ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಎಲ್ಲಂದರಲ್ಲಿ ಎಸೆದಿದ್ದ ಪ್ಲಾಸ್ಟಿಕ್‌ ಬಾಟಲ್‌ ಗಳನ್ನು, ಪ್ಲಾಸ್ಟಿಕ್‌ ಪೇಪರ್‌ ಗಳನ್ನು ಸಂಗ್ರಹಿಸಿ, ಸ್ವತ್ಛಗೊಳಿಸಿದ್ದಾರೆ. ಸ್ವಚ್ಚ ಭಾರತ ಸುಂದರ ಭಾರತದ ಹೆಸರಿನಲ್ಲಿ ತಾಂತ್ರಿಕ ವಿದ್ಯಾರ್ಥಿಗಳು ಕಸದ ಪೊರಕೆಯನ್ನು ಹಿಡಿದ ಅತ್ಯಂತ ಉತ್ಸಾಹದಿಂದ ಸ್ವತ್ಛತಾ ಕಾರ್ಯದಲ್ಲಿ
ಭಾಗವಹಿಸಿ ಇತರರಿಗೆ ಮಾದರಿಯಾದರು.

ಈ ಸಂದರ್ಭದಲ್ಲಿ ಲೀಡ್‌ ನ ವಿದ್ಯಾರ್ಥಿನಿ ಧರಣಿ ಮಾತನಾಡಿ, ದಿನದಿಂದ ದಿನಕ್ಕೆ ಪ್ಲಾಸ್ಟಿಕ್‌ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರಕ್ಕೆ ವಿಪರೀತವಾದ ತೊಂದರೆ ಆಗುತ್ತಿದೆ. ಬಳಸಿದ ಪ್ಲಾಸ್ಟಿಕ್‌ ಮಣ್ಣಲ್ಲಿ ಕೊಳೆಯದೆ, ನದಿಗಳ ಮೂಲಕ ಸಮುದ್ರವನ್ನು ಸೇರಿ ಜಲಚರ ಜೀವಿಗಳಿಗೂ ಕಂಟಕವಾಗಿವೆ. ಸರಕಾರದ ಜೊತೆ ಜೊತೆಗೆ ಜನಗಳೂ ಸಹ ಸಹಕರಿಸಿ ಪ್ಲಾಸ್ಟಿಕ್‌ ಬಳಸದಂತೆ
ಮುಂಜಾಗ್ರತೆ ವಹಿಸುವ ಅಗತ್ಯತೆಯಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಮಹಾಂತೇಶ, ರಾಕೇಶ, ಸಂಜಯ, ರಶ್ಮಿ, ರಂಗನಾಥ, ಅಮೃತಾ, ಧರಣಿ, ಗೌಸಿಯಾ ಬೇಗಂ, ಮೈಮುದಾ ಬೇಗಂ, ವಿಷ್ಣು, ವಿಕಾಸ, ರುದ್ರೇಶ, ರಾಜಶೇಖರ, ವರುಣ್‌, ಇಮ್ರಾನ್‌ ಅಲಿ, ಕುಸುಮ, ಸಹನಾ ಕೆಂಬಾವಿ, ಕಿರಣ್‌, ಆಕಾಶ, ಅಬಿಶೇಕ, ಶ್ರಾವಣಿ ಸ್ರುಜನಾ,ರಶ್ಮಿ ಪಿ ಜಾದವ್‌, ಸುನಿಲ್‌ ಕುಮಾರ,ವಿಜಯಲಕ್ಷ್ಮೀ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next