ಬಳ್ಳಾರಿ: ಸಾಮಾಜಿಕ ಭದ್ರತಾ ಯೋಜನೆ ಅಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ವಿವಿಧ ರೀತಿಯ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯಕ್ಕಾಗಿ ಫಲಾನುಭವಿಗಳು ಸರ್ಕಾರಿ ಕಚೇರಿಗಳಿಗೆ ಅಲೆದಾಟಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಕಂದಾಯ ಇಲಾಖೆಯೇ ಗ್ರಾಮ ಲೆಕ್ಕಾಧಿಕಾರಿಗಳ ಸಹಾಯದಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪಿಸಲು ಜಿಲ್ಲಾಡಳಿತ ಮುಂದಾಗಿದೆ.
ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲಾಡಳಿತ ಈ ಅತ್ಯಂತ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ಆಂದೋಲನ ರೂಪದಲ್ಲಿ ಕಾರ್ಯಾನುಷ್ಠಾನಗೊಳ್ಳುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಮನಸ್ವಿನಿ ಸೇರಿದಂತೆ ಇನ್ನಿತರೆ ಮಾಶಾಸನ ಪಡೆಯುತ್ತಿರುವ ಫಲಾನುಭವಿಗಳನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ನಿರ್ದೇಶನ ನೀಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಓಟಿಸಿ(ಓವರ್ ದಿ ಕೌಂಟರ್) ರಿಜಿಸ್ಟರ್‌ನಲ್ಲಿ ಜಾತಿ, ಆದಾಯ ಮತ್ತು ವಯಸ್ಸು, ಲಿಂಗ, ಕುಟುಂಬದ ಮಾಹಿತಿ ಈಗಾಗಲೇ ಲಭ್ಯವಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಓಟಿಸಿ ಬುಕ್‌ಲೆಟ್‌ಗಳನ್ನು ಪರಿಶೀಲಿಸಿ, ಅದರಲ್ಲಿ ಸಾಮಾಜಿಕ ಭದ್ರತಾ ಯೋಜನೆಗೆ ಅರ್ಹರಿರುವ ಹಾಗೂ ವೇತನಗಳನ್ನು ಪಡೆಯದೇ ಇರುವ ಅರ್ಹ ಫಲಾನುಭವಿಗಳನ್ನು ಗುರುತಿಸಲಿದ್ದಾರೆ. ಜತೆಗೆ ಅವರನ್ನು ನಾಡಕಚೇರಿಗಳಿಗೆ ಕರೆದೊಯ್ದು ಪಿಂಚಣಿ ಅರ್ಜಿಗಳನ್ನು ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಈಗಾಗಲೇ ಈ ವಿಶೇಷ ಆಂದೋಲನವು ಜು. 27ರಿಂದ ಜಿಲ್ಲೆಯಾದ್ಯಂತ ಆರಂಭವಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಅಡಿ 6109, ವೃದ್ಧಾಪ್ಯ ವೇತನ ಯೋಜನೆ ಅಡಿ 8119, ವಿಧವಾ ವೇತನ/ಮನಸ್ವಿನಿ ಯೋಜನೆ ಅಡಿ 2489 ಅರ್ಹ ಫಲಾನುಭವಿಗಳು ಸೇರಿದಂತೆ 16712 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ.
ಇದರಲ್ಲಿ ಸಂಧ್ಯಾ ಸುರಕ್ಷಾ ಯೋಜನೆ ಅಡಿ 313, ವೃದ್ಧಾಪ್ಯ ಯೋಜನೆ ಅಡಿ 596, ವಿಧವಾ/ಮನಸ್ವಿನಿ ಯೋಜನೆ ಅಡಿ 66 ಅರ್ಜಿಗಳು ಸೇರಿದಂತೆ ಒಟ್ಟು 975 ಅರ್ಜಿಗಳನ್ನು ನಾಡಕಚೇರಿ ತಂತ್ರಾಂಶದಲ್ಲಿ ಸ್ವೀಕರಿಸಿ, ಅರ್ಹ ಫಲಾನುಭವಿಗಳಿಗೆ ವೇತನ ಮಂಜೂರು ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಪ್ರತಿಕ್ರಿಯಿಸಿದರು. ಅರ್ಹರಿಗೆ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ದೊರಕಬೇಕು ಎಂಬ ಸದುದ್ದೇಶದಿಂದ ಈ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿದೆ.