Advertisement

ಇನ್ನು ಮುಂದೆ ದಿನಕ್ಕೆ ಸಾವಿರ ಸ್ವ್ಯಾಬ್‌ ಟೆಸ್ಟ್

12:52 PM Jun 13, 2020 | Naveen |

ಬಳ್ಳಾರಿ: ದಿನಕ್ಕೆ ಸುಮಾರು 300 ಸ್ವ್ಯಾಬ್‌ ಟೆಸ್ಟ್‌ ಮಾಡುತ್ತಿದ್ದ ನಗರದ ವಿಮ್ಸ್‌ ಆಸ್ಪತ್ರೆಯ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ನಲ್ಲಿ ಇನ್ನು ಮುಂದೆ ದಿನಕ್ಕೆ ಒಂದು ಸಾವಿರ ಸ್ವ್ಯಾಬ್‌ ಟೆಸ್ಟ್‌ ಮಾಡಲಾಗುವುದು ಎಂದು ವೈದ್ಯಕೀಯ ಸಚಿವ ಡಾ| ಸುಧಾಕರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್‌ ಸಂಸ್ಥೆಯವರು ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಎರಡು ಆರ್‌ಟಿಪಿಸಿ ಯಂತ್ರಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಜಿಂದಾಲ್‌ನವರು ಸಹ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸ್ವ್ಯಾಬ್‌ ಟೆಸ್ಟ್‌ ಮಾಡುವ ಪ್ರಮಾಣ ಹೆಚ್ಚಲಿದ್ದು, ಸದ್ಯ ದಿನಕ್ಕೆ 200ರಿಂದ 300 ಆಗುತ್ತಿದ್ದ ಸ್ವ್ಯಾಬ್‌ ಟೆಸ್ಟ್‌ಗಳು ಯಂತ್ರಗಳು ಬಂದ ಬಳಿಕ ದಿನಕ್ಕೆ ಸುಮಾರು ಒಂದು ಸಾವಿರ ಸ್ವ್ಯಾಬ್‌ ಟೆಸ್ಟ್‌ ಮಾಡಬಹುದು. ಜತೆಗೆ ಜಿಂದಾಲ್‌ ಸಂಸ್ಥೆಯ ಸಂಜೀವಿನಿ ಆಸ್ಪತ್ರೆಯನ್ನು ಸಹ ಕೋವಿಡ್‌ ಆಸ್ಪತ್ರೆಯನ್ನಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಗೆ ದಿಢೀರ್‌ ಭೇಟಿ ನೀಡಿದ್ದೇನೆ. ಜಿಲ್ಲೆಯಲ್ಲಿ ಸದ್ಯ 117 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ 90 ಜನರಿಗೆ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ. 20 ಜನರಿಗೆ ಸೋಂಕು ಇದೆ. ಈ ಪೈಕಿ 15 ಜನರಿಗೆ ಬೇರೆ-ಬೇರೆ ಕಾಯಿಲೆಗಳು ಇವೆ. ಇನ್ನು ಮೂವರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಂದಾಲ್‌-ಜ್ಯೂಬ್ಲಿಯಂಟ್‌ಗೆ ಸಾಕಷ್ಟು ವ್ಯತ್ಯಾಸವಿದೆ ಎಂದ ಸಚಿವ ಸುಧಾಕರ್‌, ಜ್ಯೂಬ್ಲಿಯಂಟ್‌ನಲ್ಲಿ ಕೇವಲ 1 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಜಿಂದಾಲ್‌ನಲ್ಲಿ 28 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮೇಲಾಗಿ ಜ್ಯೂಬ್ಲಿಯಂಟ್‌ನಲ್ಲಿ ಕೋವಿಡ್‌ ಸೋಂಕು ಹೇಗೆ ಆವರಿಸಿತು ಎಂಬುದು ಇಂದಿಗೂ ಪತ್ತೆಯಾಗಿಲ್ಲ. ಆದರೆ, ಜಿಂದಾಲ್‌ಗೆ ಹೇಗೆ ಹರಡಿತು ಎಂಬುದು ಪತ್ತೆಯಾಗಿದೆ. ತಮಿಳುನಾಡಿನಿಂದ ಜಿಂದಾಲ್‌ ನೌಕರನಿಂದ ಕಾರ್ಖಾನೆಯಲ್ಲಿ ಸೋಂಕು ಹರಡಿದೆ.

ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 360, ದ್ವಿತೀಯ ಸಂಪರ್ಕದಲ್ಲಿದ್ದ 60 ಸೇರಿ ಒಟ್ಟು 420 ಸೋಂಕಿತರನ್ನು ಈಗಾಗಲೇ ಕ್ವಾರಂಟೈನ್‌ ಮಾಡಲಾಗಿದೆ ಎಂದು ವಿವರಿಸಿದರು. ದೇಶದಲ್ಲಿ ಸದ್ಯದ ಮಟ್ಟಿಗೆ ಕೊರೊನಾ ಸೋಂಕು ಹೋಗಲ್ಲ. ಹೋಗುವ ಲಕ್ಷಣವೂ ಕಾಣುತ್ತಿಲ್ಲ. ಇನ್ನು ಸೂಕ್ತ ಲಸಿಕೆಯನ್ನೂ ಕಂಡುಹಿಡಿದಿಲ್ಲ. ಹಾಗಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಸೋಂಕಿನ ವಿರುದ್ಧ ಹೋರಾಟ ಮಾಡಬೇಕಾಗಿದೆ.

Advertisement

ಇತರೆ ದೇಶಗಳಲ್ಲಿ ವೇಗವಾಗಿ ಹರಡುತ್ತಿರುವಂತೆ ಭಾರತದಲ್ಲಿ ಇಲ್ಲ. ಆದರೂ, ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದರು. ಕೋವಿಡ್‌ಮಾರ್ಗಸೂಚಿಗಳು ಬದಲಾವಣೆಯಾಗಿವೆ. ಈ ಮೊದಲು ಸೋಂಕಿತರ ಮನೆಯಿಂದ 1 ಕಿಮೀ ವರೆಗೆ ಕಂಟೈನ್ಮೆಂಟ್‌ ಝೋನ್‌, 5 ಕಿಮೀ ವರೆಗೆ ಬಫರ್‌ ಝೋನ್‌ ಮಾಡಲಾಗುತ್ತಿತ್ತು. ಆದರೆ, ಇದೀಗ ಸೋಂಕಿತನ ಮನೆಯಿಂದ ಕೇವಲ 100 ಮೀಟರ್‌ವರೆಗೆ ಮಾತ್ರ ಶೀಲ್‌ಡೌನ್‌ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌, ಸಂಸದ ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಎಂ.ಎಸ್‌. ಸೋಮಲಿಂಗಪ್ಪ, ಡಿಸಿ ಎಸ್‌.ಎಸ್‌. ನಕುಲ್‌, ಸಿಇಒ ಕೆ.ನಿತೀಶ್‌ ಸೇರಿ ಹಲವರು ಇದ್ದರು.

ವಾಸ್ತವ ಪ್ರಚಾರ ಮಾಡಿ
ಮಾಧ್ಯಮಗಳು ವಸ್ತುಸ್ಥಿತಿಯನ್ನು ಪ್ರಚಾರ ಮಾಡಬೇಕು. ರಾಜ್ಯದಲ್ಲಿ 6,245 ಜನ ಸೋಂಕಿತರಿದ್ದಾರೆ. ಇವರಲ್ಲಿ ಸುಮಾರು 3 ಸಾವಿರ ಅಂದರೆ ಶೇ.50 ಜನರು ಗುಣಮುಖವಾಗಿದ್ದಾರೆ. ಇದರಲ್ಲಿ ಶೇ.97 ಜನರಿಗೆ ರೋಗದ ಲಕ್ಷಣಗಳು ಇಲ್ಲ. ಕೇವಲ ಶೇ.3 ಜನರಿಗೆ ಮಾತ್ರ ರೋಗದ ಲಕ್ಷಣಗಳು ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್‌ ಬಗ್ಗೆ ಮಾಧ್ಯಮಗಳಲ್ಲಿ ಆಗುತ್ತಿರುವ ಪ್ರಚಾರದಿಂದ ಜನರು ಭಯ ಭೀತಿಯಲ್ಲಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಸ್ತುಸ್ಥಿತಿಯನ್ನು ಪ್ರಚಾರ ಮಾಡಬೇಕು ಎಂದು ಸಚಿವ ಸುಧಾಕರ್‌ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next