ಬಳ್ಳಾರಿ: ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ನರೇಗಾ ಕಾಮಗಾರಿಗಳಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ಇದರಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಒಂದೇ ದಿನ 1.33ಲಕ್ಷ ಜನರು ನರೇಗಾ ಅಡಿ ಕೆಲಸ ಮಾಡಿದ್ದಾರೆ. ಅಂತರ್ಜಲ ಜಾಸ್ತಿ ಮಾಡುವ ನಿಟ್ಟಿನಲ್ಲಿ ಅಂತರ್ಜಲ ಚೇತನ, ಬದುನಿರ್ಮಾಣ, ಇಂಗುಗುಂಡಿ ನಿರ್ಮಾಣ, ಕೃಷಿಹೊಂಡ, ಕೊಳವೆಬಾವಿ ಮತ್ತು ಬಾವಿಗಳ ರಿಚಾರ್ಜ್ ಮಾಡುವುದು ಸೇರಿದಂತೆ ವಿವಿಧ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 2 ಲಕ್ಷ ರೂವರೆಗೆ ವೈಯಕ್ತಿಕವಾಗಿ ರೈತರ ಬದುಕಿಗೆ ಲಾಭ ಕೊಡುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಕೇಂದ್ರ ಸರ್ಕಾರವು ನರೇಗಾಗಿ 60 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇತ್ತೀಚೆಗೆ ಕೋವಿಡ್ ಸಂದರ್ಭದಲ್ಲಿ ಘೋಷಿಸಲಾದ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿಯೂ 40 ಸಾವಿರ ಕೋಟಿ ರೂ.ಗಳನ್ನು ಸಹ ಹೆಚ್ಚುವರಿಯಾಗಿ ಮೀಸಲಿರಿಸಲಾಗಿದೆ ಎಂದ ಸಚಿವ ಈಶ್ವರಪ್ಪನವರು, ಮಾನವ ದಿನಗಳ 100 ರಿಂದ 150 ದಿನಗಳಿಗೆ ಹೆಚ್ಚಿಸಲಾಗುವುದು. 249 ರೂ.ಕೂಲಿಯಿಂದ 275ಕ್ಕೆ ಹೆಚ್ಚಿಸಲಾಗುವುದು. ಕೂಲಿ ಮಾಡಿದ ಕೂಲಿಕಾರ್ಮಿಕನ ಖಾತೆಗೆ 15ದಿನದೊಳಗೆ ಹಣ ಪಾವತಿಸಲಾಗುತ್ತದೆ ಎಂದರು.
ನರೇಗಾ ಕಾಮಗಾರಿಗಳ ಅನುಷ್ಠಾನದಲ್ಲಿ ಬಳ್ಳಾರಿ ಜಿಪಂ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.