Advertisement

ವಸ್ತು ಸಂಗ್ರಹಾಲಯಕ್ಕೆ ಬ್ರೂಸ್‌ಫೂಟ್‌ ಹೆಸರಿಡಲು ತೀರ್ಮಾನ

12:37 PM Jan 25, 2020 | Naveen |

ಬಳ್ಳಾರಿ: ತಾಲೂಕಿನ ಸಂಗನಕಲ್ಲು ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳನ್ನು ಇಲ್ಲಿನ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದ ಕಲಾ ಪ್ರದರ್ಶನಾಲಯದಲ್ಲಿ ಸಂಗ್ರಹಿಸಿಡಲಾಗಿದ್ದು, ಇದಕ್ಕೆ ರಾಬರ್ಟ್‌ ಬ್ರೂಸ್‌ಫೂಟ್‌ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯವೆಂದು ಹೆಸರಿಡಲು ತೀರ್ಮಾನಿಸಲಾಗಿದೆ.

Advertisement

ಜಿಲ್ಲೆಯ ಕೆಲವು ಪ್ರದೇಶಗಳು ಪ್ರಾಗೈತಿಹಾಸಿಕ ಕಾಲದ ನೆಲೆಗಳಾಗಿದ್ದವು. ಸಂಗನಕಲ್ಲು
ಬೆಟ್ಟಗಳಲ್ಲಿ ದೊರೆತ ವಸ್ತುಗಳು ಸೇರಿದಂತೆ ಪ್ರಾಗೈತಿಹಾಸದ ಅಪೂರ್ವ ವಸ್ತುಗಳನ್ನು ಈ ಸಂಗ್ರಹಾಲಯದಲ್ಲಿಡಲಾಗಿದೆ. ಇದರ ಅಭಿವೃದ್ಧಿಗೆ ಸಂಬಂಧಿ ಸಿದ ಕಾರ್ಯಗಳು ಈಗಾಗಲೇ ಕೈಗೊಳ್ಳಲಾಗಿದೆ. ತಾಲೂಕಿನ ಸಂಗನಕಲ್ಲು ಗ್ರಾಮದ ಬಳಿಯ ಬೆಟ್ಟಗಳು ಪ್ರಾಚೀನ ಮಾನವನ ವಾಸದ ಕುರುಹುಗಳನ್ನು ಹೊಂದಿವೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿರುವ ಬೆಟ್ಟಗಳು ಐದು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೇಳುತ್ತವೆ.

ಈ ಬೆಟ್ಟಗಳಲ್ಲಿ ನವಶಿಲಾಯುಗದಿಂದ ಕಬ್ಬಿಣದ ಯುಗದವರೆಗಿನ ಮನುಷ್ಯ ನೆಲೆಯ ಅವಶೇಷಗಳಿವೆ. ಶಿಲಾ ಉಪಕರಣಗಳು, ಮಡಕೆಗಳು, ಉತ್ಖನದ ವೇಳೆ ದೊರೆತ ಇತ್ಯಾದಿ ವಸ್ತುಗಳನ್ನು ನಗರದ ಸಾಂಸ್ಕೃತಿಕ ಸಮುತ್ಛಯ ಆವರಣದಲ್ಲಿರುವ ಕಲಾ ಪ್ರದರ್ಶನಾಲಯ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದೆ. ಮ್ಯೂಜಿಯಂ ಕೆಳಮಹಡಿಯಲ್ಲಿ ಮಾನವನ ಜೈವಿಕ, ಸಾಂಸ್ಕೃತಿಕ ವಿಕಸನ ಹಾಗೂ ಆದಿಮಾನವ ಮೂಲ ನೆಲೆಯಾದ ಆಫ್ರಿಕಾದಿಂದ ಜಗತ್ತಿನ ಇತರ ಭೂ ಭಾಗಕ್ಕೆ ವಲಸೆ ಹೋದ ಎಂಬುದರ ಮಾಹಿತಿ ಇದೆ. ಆದಿ ಮಾನವನ ವಿಕಸನದ ವಿವಿಧ ಹಂತಗಳ ಬುರಡೆ ಮಾದರಿಯ ಪ್ರತಿರೂಪಗಳಿವೆ. ಭಾರತದ ಪ್ರಾಚೀನತೆ, ಸಾಂಸ್ಕೃತಿಕ ಬೆಳವಣಿಗೆ, ಶಿಲಾಯುಗದ ವಿವಿಧ ಹಂತಗಳು ಹಾಗೂ ಕೃಷಿ ಜೀವನದ ಆರಂಭದವರೆಗಿನ ಬೆಳವಣಿಗೆಗಳ ಇತಿಹಾಸವನ್ನು ಮ್ಯೂಜಿಯಂನಲ್ಲಿ ನೋಡಬಹುದಾಗಿದೆ. ಉತ್ತರ ಕರ್ನಾಟಕ ಹಾಗೂ ಆಂಧ್ರದ ರಾಯಲಸೀಮಾ ಭಾಗದಲ್ಲಿ ದೊರೆತಿರುವ ಪ್ರಾಗೈತಿಕಹಾಸದ ವಸ್ತುಗಳು ಮ್ಯೂಜಿಯಂನಲ್ಲಿಡಲಾಗಿದೆ.

ಬ್ರೂಸ್‌ಫೂಟ್‌ ಹೆಸರು ನಾಮಕರಣ: ದೇಶದಲ್ಲಿ ಆದಿಮಾನವನ ನೆಲೆಗಳನ್ನು ಗುರುತಿಸಿದ ಮೊದಲ ವ್ಯಕ್ತಿ ರಾಬರ್ಟ್‌ ಬ್ರೂಸ್‌ಫೂಟ್‌. ಸಂಗನಕಲ್ಲು ನವಶಿಲಾಯುಗದ ಕುರಿತು ಅಧ್ಯಯನ ಮಾಡಿದ, ಬಳ್ಳಾರಿ, ಚಿತ್ರದುರ್ಗ ಭಾಗದಲ್ಲಿ ಪೂರ್ವ ಶಿಲಾಯುಗದ ಸ್ಥಳಗಳನ್ನು ಗುರುತಿಸಿದ, ಹಸುವಿನ ಸಗಣಿಯ ರಾಶಿಯಿಂದ ಸುಟ್ಟು ನಿರ್ಮಿಸಲಾಗಿರುವ ಬೂದಿ ದಿಬ್ಬಗಳು ನವಶಿಲಾಯುಗದ ಸಂಸ್ಕೃತಿ ಪ್ರತೀಕವಾಗಿವೆ ಎಂದು ಪ್ರತಿಪಾದಿಸಿದ ಮೊದಲ ವ್ಯಕ್ತಿಯೂ ಅವರು ಈ ಹಿನ್ನೆಲೆಯಲ್ಲಿ ರಾಬರ್ಟ್‌ ಬ್ರೂಸಫೂಟ್‌ ಸಂಗನಕಲ್ಲು ಪ್ರಾಚ್ಯವಸ್ತು ಸಂಗ್ರಹಾಲಯ ಎಂದು ಹೆಸರಿಡಲು ಮ್ಯೂಜಿಯಂ ಸಮಿತಿ ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next