Advertisement
ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ರಮೇಶ್ ಜಾರಕಿಹೊಳಿ, ಸ್ವ ಸಮುದಾಯದ ಶಾಸಕರನ್ನು ನೆಚ್ಚಿಕೊಂಡು “ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದರು. ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಹ ಜಾರಕಿಹೊಳಿಗೆ ಸಾಥ್ ನೀಡಿದ್ದರು.
Related Articles
Advertisement
ರೆಸಾರ್ಟ್‌ನಲ್ಲಿ ನಡೆದ ಶಾಸಕರ ಗಲಾಟೆಗೂ ಮುನ್ನ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೆಸರೂ ಜಾರಕಿಹೊಳಿ ಪಾಳಯದಲ್ಲಿ ಕೇಳಿ ಬಂದಿತ್ತು. ಶಾಸಕರ ನಡುವಿನ ಗಲಾಟೆಯಿಂದಾಗಿ ಜೈಲು ಸೇರಿದ್ದ ಗಣೇಶ್, ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದಾರೆ. ಬಳಿಕ, ಮಾಜಿ ಶಾಸಕ ಬಳ್ಳಾರಿಯ ಸೂರ್ಯ ನಾರಾಯಣರೆಡ್ಡಿ ಅವರನ್ನು ಭೇಟಿಯಾದ ಗಣೇಶ್, “ಜೈಲಲ್ಲಿದ್ದ ನನಗೆ ಬೇಲ್ ಕೊಡಿಸಿದ್ದು, ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದು ನಾರಾಯಣರೆಡ್ಡಿಯವರೇ.
ಇನ್ನು ಮುಂದೆ ಅವರ ಮಾತು ಮೀರಲ್ಲ’ ಎನ್ನುತ್ತಿದ್ದಾರೆ. ಇದರಿಂದ ಶಾಸಕ ಗಣೇಶ್ ಸಹ ಜಾರಕಿಹೊಳಿಯವರಿಗೆ “ಕೈ’ಕೊಟ್ಟಂತಾಗಿದ್ದು, ಈ ಎಲ್ಲ ಶಾಸಕರನ್ನು ನಂಬಿ ರಾಜೀನಾಮೆ ನೀಡುವುದಾಗಿ ರಾಜಧಾನಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ, ಈಗ ಒಬ್ಬಂಟಯಾಗಿ ಬೆಳಗಾವಿಗೆ ವಾಪಸ್ ಬಂದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಇನ್ನು ಜಾರಕಿಹೊಳಿಯವರಿಗೆ ಮುಂಬೈಗೆ ಬರುವುದಾಗಿ ತಿಳಿಸಿದ್ದ ಮಸ್ಕಿ ಶಾಸಕ ಬಸವನಗೌಡ ಪಾಟೀಲ್, ಕೊಲ್ಲಾಪುರದವರೆಗೆ ಹೋಗಿ ವಾಪಸ್ ಬಂದಿದ್ದಾರೆ. ರಾಯಚೂರು ಗ್ರಾಮೀಣ ಶಾಸಕ ಬಸವರಾಜ್ ದದ್ದಲ್ ಕೊನೆಯವರೆಗೂ ಹೋಗದೆ ಕೈಕೊಟ್ಟಿದ್ದಾರೆ. ಹಾಗಾಗಿ, ಆಪರೇಷನ್ ಕಮಲದಲ್ಲಿ ಮುಂಚೂಣಿಯಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಸ್ವಸಮುದಾಯದ ಶಾಸಕರೇ “ಕೈ’ಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
* ವೆಂಕೋಬಿ ಸಂಗನಕಲ್ಲು