Advertisement

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಬಿಜೆಪಿ ಛಿದ್ರ?

12:14 PM May 06, 2019 | Team Udayavani |

ಬಳ್ಳಾರಿ: ದಶಕಗಳಿಂದಲೂ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ತನ್ನದೇ ಇತಿಹಾಸ ಹೊಂದಿದ್ದು, ಕ್ಷೇತ್ರದಲ್ಲಿ ಲೋಕಸಭೆ ಸಮರದ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಕಳೆದ ಲೋಕಸಭೆ ಉಪ ಚುನಾವಣೆಯಂತೆ ಈ ಬಾರಿಯೂ ಅತಿ ಹೆಚ್ಚು ಮತಗಳು ಮೈತ್ರಿ ಪಕ್ಷಗಳಿಗೆ ಸಿಗಲಿದೆ ಎಂಬ ನೀರಿಕ್ಷೆ ಒಂದೆಡೆಯಾದರೆ, ಮತ್ತೂಂದೆಡೆ ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಲಿದೆ ಎಂದು ಲೆಕ್ಕಾಚಾರ ನಡೆದಿದೆ.

Advertisement

ಕಾಂಗ್ರೆಸ್‌ನ ಭದ್ರಕೋಟೆ: ಸಂಡೂರು ಜಿಲ್ಲೆಯಲ್ಲೇ ಅತಿ ಹೆಚ್ಚು ಬಾರಿ ಕಾಂಗ್ರೆಸ್‌ಗೆ ಗೆಲುವು ನೀಡಿದ ವಿಧಾನಸಭಾ ಕ್ಷೇತ್ರ. ಸಂಡೂರು ರಾಜಮನೆತನಕ್ಕೆ ಸೇರಿದ್ದ ಮಾಜಿ ಸಚಿವ ದಿ.ಎಂ.ವೈ. ಘೋರ್ಪಡೆ ಸತತ ಏಳು ಬಾರಿ ಇಲ್ಲಿ ಆಯ್ಕೆಯಾಗಿದ್ದರು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ಬಳಿಕ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಿಂದ ಸತತ ಮೂರು ಬಾರಿ ಹಾಲಿ ಶಾಸಕ ಈ.ತುಕಾರಾಂ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಜಿಪಂ ಚುನಾವಣೆಯಲ್ಲಿ ಎರಡು ಜಿಪಂ ಕ್ಷೇತ್ರದಲ್ಲಿ ಕಮಲ ಅರಳಿದ್ದು, ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ನೆಲೆಯೂರಲು ಸಹಕಾರಿಯಾಗಿತ್ತು. ಇದು 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ರಾಘವೇಂದ್ರ ಕಾಂಗ್ರೆಸ್‌ನ ತುಕಾರಾಂಗೆ ತೀವ್ರ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಗ್ರಪ್ಪರಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು 38,675 ಮತಗಳ ಮುನ್ನಡೆ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲಭಿಸಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತಷ್ಟು ಭದ್ರವಾಗಿದೆ.

ಉಪಚುನಾವಣೆಯಲ್ಲಿ ‘ಕೈ’ ಗೆ ಮುನ್ನಡೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.75.45 ರಷ್ಟು ಮತದಾನವಾಗಿತ್ತು. ಬಿಜೆಪಿಗೆ ಲಾಭವಾಗಲಿದೆ ಎಂಬ ಮಾತು ಕೇಳಿಬಂದಿತ್ತಾದರೂ, ಕ್ಷೇತ್ರದ ಮತದಾರರು ಕಾಂಗ್ರೆಸ್‌ನ್ನು ಬಿಟ್ಟು ಕೊಡಲಿಲ್ಲ. ಇನ್ನು ಉಪ ಚುನಾವಣೆಯಲ್ಲಿ ಶೇ.63.51ರಷ್ಟು ಮತದಾನವಾಗಿತ್ತು. ಆಗ ಬಿಜೆಪಿಯವರು ಹೆಚ್ಚು ಪೈಪೋಟಿ ನೀಡಿರಲಿಲ್ಲ. ಮೇಲಾಗಿ ಮೈತ್ರಿ ಸರ್ಕಾರದ ಸಚಿವ ಸಂಪುಟವೇ ಕ್ಷೇತ್ರದಲ್ಲಿ ಬೀಡು ಬಿಟ್ಟಿತ್ತು. ಪರಿಣಾಮ ನಿರೀಕ್ಷೆಯಂತೆಯೇ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪರಿಗೆ 38,675 ಮತಗಳ ಮುನ್ನಡೆ ಲಭಿಸಿತ್ತು.

ಶೇ.71.16 ಮತದಾನ: ಕ್ಷೇತ್ರದಲ್ಲಿ ಒಟ್ಟೂ 2,18,813 ಮತದಾರರಿದ್ದು, 1,10,190 ಪುರುಷರು, 1,08,588 ಮಹಿಳೆಯರು 35 ಇತರೆ ಮತದಾರರಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 80,523 ಪುರುಷ, 75,183 ಮಹಿಳೆ, 1 ಇತರೆ ಸೇರಿ ಒಟ್ಟು 1,55,713 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶೇ.71.16 ರಷ್ಟು ಮತದಾನವಾಗಿದ್ದು, ಯಾವ ಅಭ್ಯರ್ಥಿಗೆ ಎಷ್ಟೆಷ್ಟು ಮತಗಳು ಲಭಿಸಲಿವೆ. ಯಾರು ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂಬುದನ್ನು ನೋಡ ಬೇಕಾಗಿದೆ.

ಕೈ-ಕಮಲ ಭರ್ಜರಿ ಪ್ರಚಾರ: ಕಳೆದ ಉಪ ಚುನಾವಣೆಯಲ್ಲಿ ಸಚಿವರ ದಂಡೇ ಕ್ಷೇತ್ರದಲ್ಲಿ ಬೀಡು ಬಿಟ್ಟಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಸಚಿವ ಸಂತೋಷ್‌ ಲಾಡ್‌ ಅವರೇ ಪ್ರಚಾರದಲ್ಲಿ ಭಾಗವಹಿಸಿದ್ದರು. ಜತೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್‌ ಘೋರ್ಪಡೆಯವರು ಸಹ ಇವರಿಗೆ ಪ್ರಚಾರದಲ್ಲಿ ಸಾಥ್‌ ನೀಡಿದ್ದರು. ಮೇಲಾಗಿ ಸಂಡೂರು ವಿಧಾನಸಭಾ ಕ್ಷೇತ್ರದಿಂದಲೇ ಜಿಲ್ಲೆಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದು, ಕ್ಷೇತ್ರದಲ್ಲಿ ಚುನಾವಣಾ ರಂಗು ಮತ್ತಷ್ಟು ಹೆಚ್ಚಿಸಿತ್ತು. ಈ ಎಲ್ಲ ಅಂಶಗಳು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕವಾದರೆ, ಕಾಂಗ್ರೆಸ್‌ನವರ ರಾಜಕೀಯ ತಂತ್ರಗಳನ್ನು ಸಮರ್ಥವಾಗಿ ಎದುರಿಸಿರುವ ಬಿಜೆಪಿಯವರು ಕ್ಷೇತ್ರಾದ್ಯಂತ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿತರನ್ನಾಗಿಸಿದ್ದಾರೆ. ಜತೆಗೆ ಕ್ಷೇತ್ರದಲ್ಲಿ ಮೋದಿ ಅಲೆಯೂ ಜೋರಾಗಿದ್ದು, ಯುವ ಮತದಾರರೆಲ್ಲರೂ ಬಿಜೆಪಿ ಬೆಂಬಲಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜತೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಅಭ್ಯರ್ಥಿ ವೈ.ದೇವೇಂದ್ರಪ್ಪರಿಗೆ ಬೆನ್ನೆಲುಬಾಗಿ ನಿಂತು ಕ್ಷೇತ್ರಾದ್ಯಂತ ಪ್ರಚಾರ ಮಾಡಿರುವುದು ಬಿಜೆಪಿಗೆ ಪ್ಲಸ್‌ ಆಗುವ ಸಾಧ್ಯತೆಯಿದೆ.

Advertisement

ಜಾತಿ ಲೆಕ್ಕಾಚಾರ: ಇನ್ನು ಕ್ಷೇತ್ರದಲ್ಲಿ ಲಿಂಗಾಯತ, ಮುಸ್ಲಿಂ, ವಾಲ್ಮೀಕಿ, ದಲಿತ ಇತರೆ ಮೇಲ್ವರ್ಗದ ಮತಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಮುಸ್ಲಿಂ, ದಲಿತ ಮತಗಳು ಕಾಂಗ್ರೆಸ್‌ ಪಾಲಾದರೆ, ವಾಲ್ಮೀಕಿ ಮತಗಳು ಚದುರುವ ಹಾಗೂ ಬಹುಪಾಲು ಕಾಂಗ್ರೆಸ್‌ನತ್ತ ವಾಲುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್‌ನಲ್ಲಿ ಬಹುತೇಕ ಲಿಂಗಾಯತ ಮುಖಂಡರೇ ಇರುವುದರಿಂದ ಆ ಸಮುದಾಯದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಬಹುದು. ಅಷ್ಟೇ ಪ್ರಮಾಣದಲ್ಲಿ ಪ್ರಧಾನಿ ಮೋದಿ ಪರ ವಾಲಬಹುದು. ಇತರೆ ಮೇಲ್ವರ್ಗದ ಮತಗಳು ಸಹ ಚದುರಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಮೇಲುಗೈ ಸಾಧಿಸಿದರೂ ಮುನ್ನಡೆ ಕಾಯ್ದುಕೊಳ್ಳುವುದು ಕಷ್ಟ ಎಂದು ರಾಜಕೀಯ ಮಂದಿಯ ವಿಶ್ಲೇಷಣೆ.

ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪರಿಗೆ 20-30 ಸಾವಿರ ಮತಗಳ ಮುನ್ನಡೆ ಲಭಿಸಲಿದೆ. ವಿ.ಎಸ್‌.ಉಗ್ರಪ್ಪ ಸುಶಿಕ್ಷಿತ ಮತ್ತು ಲೋಕಸಭೆಯಲ್ಲಿ ಪ್ರಶ್ನಿಸುವಂತಹ ವ್ಯಕ್ತಿಯಾಗಿದ್ದಾರೆ. ಪರಿಣಾಮ ಪ್ರಜ್ಞಾವಂತರು, ಶಿಕ್ಷಿತ ಮತದಾರರೆಲ್ಲಾ ಉಗ್ರಪ್ಪರನ್ನು ಬೆಂಬಲಿಸಿದ್ದಾರೆ. ಕೇವಲ 5 ತಿಂಗಳಲ್ಲಿ ಬಳ್ಳಾರಿ ಅಂದರೆ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ಈ ಬಾರಿಯೂ ಉಗ್ರಪ್ಪರದ್ದೇ ಗೆಲುವು.
ಏಕಾಂಬರಪ್ಪ, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌, ತೋರಣಗಲ್ಲು.

ಪ್ರಧಾನಿ ನರೇಂದ್ರ ಮೋದಿಯವರ ಅಲೆ ಎಲ್ಲೆಡೆ ಹಬ್ಬಿದೆ. ಜತೆಗೆ ಬೂತ್‌ ಮಟ್ಟದಲ್ಲಿಯೂ ನಿಷ್ಠಾವಂತ ಕಾರ್ಯಕರ್ತರು ನಮ್ಮೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಮೇಲಾಗಿ ಬಿಜೆಪಿಯಿಂದ ಕಣಕ್ಕಿಳಿದಿರುವ ವೈ.ದೇವೇಂದ್ರಪ್ಪ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಗೆಲುವಿಗೆ ಶಾಸಕ ಬಿ.ಶ್ರೀರಾಮುಲು ಅವರು ಪೂರ್ಣ ಪ್ರಮಾಣದಲ್ಲಿ ಪ್ರಯತ್ನ ನಡೆಸಿದ್ದಾರೆ. ಉಪ ಚುನಾವಣೆಯೇ ಬೇರೆ ಸಾರ್ವತ್ರಿಕ ಚುನಾವಣೆಯೇ ಬೇರೆ. ಹೀಗಾಗಿ 8-10 ಸಾವಿರ ಮತಗಳ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ.
ಜಿ.ಟಿ.ಪಂಪಾಪತಿ, ಬಿಜೆಪಿ ತಾಲೂಕು ಅಧ್ಯಕ್ಷ.

•ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next